ಶುಕ್ರವಾರ, ಡಿಸೆಂಬರ್ 3, 2021
26 °C
‘ಬಸವಶ್ರೀ’ ಪುರಸ್ಕೃತ ಬಾಹ್ಯಾಕಾಶ ವಿಜ್ಞಾನಿ ಕೆ.ಕಸ್ತೂರಿ ರಂಗನ್‌ ಅಭಿಪ್ರಾಯ

ವಚನ ಸಂವಿಧಾನ ಸಮಾಜಕ್ಕೆ ದಾರಿದೀಪ: ಕೆ.ಕಸ್ತೂರಿ ರಂಗನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಮಹಾಮಾನವತಾವಾದಿ ಬಸವಣ್ಣ ಅವರ ವಚನ ಸಂವಿಧಾನ ಸಮಾಜಕ್ಕೆ ಸರ್ವಕಾಲಕ್ಕೂ ದಾರಿದೀಪವಾಗಿದೆ’ ಎಂದು ಬಾಹ್ಯಾಕಾಶ ವಿಜ್ಞಾನಿ ಡಾ.ಕೆ. ಕಸ್ತೂರಿ ರಂಗನ್‌ ಹೇಳಿದರು.

ಮುರುಘಾಮಠದ ಅನುಭವ ಮಂಟಪದಲ್ಲಿ ಭಾನುವಾರ ಶ್ರೀಮಠದಿಂದ ನಡೆದ ಶರಣ ಸಂಸ್ಕೃತಿ ಉತ್ಸವದಲ್ಲಿ 2020ನೇ ಸಾಲಿನ ‘ಬಸವಶ್ರೀ’ ಪ್ರಶಸ್ತಿ ಸ್ವೀಕರಿಸಿದ ನಂತರ ಅವರು ಮಾತನಾಡಿದರು.

‘ಬಸವಣ್ಣ ಒಬ್ಬ ಗುರುವಾಗಿ, ಸಮಾಜ ಸುಧಾರಣಾ ಕಾರ್ಯಕ್ಕೆ ಮಹತ್ವ ಮತ್ತು ಗೌರವ ನೀಡಿದವರು. ಅನುಭವ ಮಂಟಪ ನಿರ್ಮಿಸುವ ಮೂಲಕ ವಿಶ್ವಕ್ಕೆ ಮೊದಲ ಪ್ರಜಾಪ್ರಭುತ್ವದ ಮೌಲ್ಯವನ್ನು ತೋರಿಸಿಕೊಟ್ಟ ಅತ್ಯಂತ ಶ್ರೇಷ್ಠ ಜ್ಞಾನಿ’ ಎಂದು ಬಣ್ಣಿಸಿದರು.

‘ಬಸವಣ್ಣ ಹೆಸರಿನ ಬಸವಶ್ರೀ ಪ್ರಶಸ್ತಿ ದೊರೆತಿರುವುದು ನನ್ನ ಪಾಲಿನ ಸೌಭಾಗ್ಯ. ಇಂತಹ ಮೌಲ್ಯಯುತ ಪ್ರಶಸ್ತಿ ನೀಡಿರುವ ಶರಣರಿಗೆ ಗೌರವ–ಹೃದಯಪೂರ್ವಕ ನಮಸ್ಕಾರ’ ಎಂದ ಅವರು, ‘ರಾಷ್ಟ್ರೀಯ ಶಿಕ್ಷಣ ನೀತಿ ಮುಂದಿನ ಭವ್ಯ ಭಾರತ ನಿರ್ಮಾಣಕ್ಕೆ ಅತ್ಯಂತ ಸಹಕಾರಿಯಾಗಲಿದೆ. ಇದರ ಮಹತ್ವ ಮುಂದಿನ ದಿನಗಳಲ್ಲಿ ಎಲ್ಲರಿಗೂ ಅರಿವಾಗುತ್ತದೆ’ ಎಂದು ತಿಳಿಸಿದರು.

ಶಿವಮೂರ್ತಿ ಮುರುಘಾ ಶರಣರು, ‘ಅನೇಕ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದೇವೆ. ಗಗನ ಯಾತ್ರಿಗಳು ಆಗಬೇಕೆಂಬ ವಿದ್ಯಾರ್ಥಿಗಳಿಗೆ ಕಸ್ತೂರಿ ರಂಗನ್ ಬಹುದೊಡ್ಡ ಆದರ್ಶ ವ್ಯಕ್ತಿಯಾಗಿದ್ದಾರೆ. ಇವರಿಗೆ ನೊಬೆಲ್‌ ಪ್ರಶಸ್ತಿ ಸಿಗುವ ಸಮಯವೂ ದೂರವಿಲ್ಲ’ ಎಂದು ಅಭಿಪ್ರಾಯಪಟ್ಟರು.

ಉತ್ಸವ ಸಮಿತಿ ಗೌರವಾಧ್ಯಕ್ಷ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ‘ಅನುಭವ ಮಂಟಪದ ಪರಿಕಲ್ಪನೆಯಲ್ಲೇ ಸರ್ವ ಸಮುದಾಯಗಳಿಗೂ ಸ್ವಾಮೀಜಿಗಳನ್ನು ನೀಡಿ, ಸಂಘಟಿತರಾಗಲು ಮುರುಘಾ ಶರಣರು ಕಾರಣೀಭೂತರು. ಈ ವೇಳೆ ಎದುರಾದ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದರು. ವರ್ಣ–ವರ್ಗ ಎಲ್ಲವನ್ನೂ ಒಳಗೊಂಡಿರುವ ಪ್ರಸ್ತುತ ಸಮಾಜದಲ್ಲಿ ಜಾತ್ಯತೀತ ನಿಲುವನ್ನು ತಳೆಯಲು ಎದೆಗಾರಿಕೆ ಬೇಕು. ಅಂತಹ ಗಟ್ಟಿತನ ಶರಣರಲ್ಲಿ ಇದೆ. ಹೀಗಾಗಿ ಬಸವಾದಿ ಶರಣರ ಆಶಯ ಈಡೇರಿಸಲು ಪಣತೊಟ್ಟು ನಿಂತಿದ್ದಾರೆ’ ಎಂದು ಬಣ್ಣಿಸಿದರು.

‘ದಲೈಲಾಮ ಅವರಿಗೆ ಬಸವಶ್ರೀ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಶತ್ರು ರಾಷ್ಟ್ರವಾದ ಚೀನಾದಿಂದಲೂ ವಿರೋಧ ವ್ಯಕ್ತವಾಗಿತ್ತು. ಆಗಲೇ ಶ್ರೀಮಠದ ಹೆಸರು ದೇಶ–ವಿದೇಶಗಳಿಗೂ ಹರಡಿದ್ದು, ಇಂದಿಗೂ ಸಾಕ್ಷಿಯಾಗಿದೆ’ ಎಂದರು.

ಇದೇ ವೇಳೆ ಕಲಾವಿದೆ ಜಿ.ಜಿ.ಐಶ್ವರ್ಯಾ 5 ಕಿಲೋ ಮೀಟರ್ ಉದ್ದದ ದಾರದಲ್ಲಿ ಸ್ಟ್ರಿಂಗ್‌ ಆರ್ಟ್‌ ಮೂಲಕ ಶರಣರ ಭಾವಚಿತ್ರ ರಚಿಸಿ ಶರಣರಿಗೆ ಸಮರ್ಪಿಸಿದರು.

ಕಬೀರಾನಂದಾಶ್ರಮದ ಶಿವಲಿಂಗಾ ನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು