ಮಂಗಳವಾರ, ಅಕ್ಟೋಬರ್ 27, 2020
22 °C
ಎಸ್.ರವಿಶಂಕರ್ ಸಂಕೋಳ್ ಅವರ ಪತ್ನಿ ರತ್ನಾ ನೋವಿನ ನುಡಿ

ಹೊಳಲ್ಕೆರೆ: ಪಿಎಚ್.ಡಿ ಪತಿಯ ಕನಸಾಗಿತ್ತು!

ಸಾಂತೇನಹಳ್ಳಿ ಸಂದೇಶ್ ಗೌಡ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ‘ಪಿಎಚ್.ಡಿ ಪದವಿ ಪಡೆಯುವುದು ಪತಿಯ ಜೀವನದ ಬಹುದೊಡ್ಡ ಕನಸಾಗಿತ್ತು. ಆದರೆ, ಕಷ್ಟದಿಂದ ಸಂಪಾದಿಸಿದ್ದ ಪದವಿ ಪಡೆಯಲು ಅವರು ಇಲ್ಲದಿರುವುದು ಹೆಚ್ಚು ದುಃಖ ತಂದಿದೆ’ ಎಂದು ಎಸ್.ರವಿಶಂಕರ್ ಅವರ ಪತ್ನಿ ರತ್ನಾ ನೋವಿನಿಂದ ನುಡಿದರು.

ತಾಲ್ಲೂಕಿನ ರಂಗಾಪುರ ಗ್ರಾಮದ ಉಪನ್ಯಾಸಕ ಎಸ್.ರವಿಶಂಕರ್ ಸಂಕೋಳ್ ಮೇ 6ರಂದು ಹೃದಯಾಘಾತದಿಂದ ನಿಧನರಾಗಿದ್ದರು.

ಮರಣ ಹೊಂದುವಷ್ಟರಲ್ಲಿ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ‘ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮೀಜಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಒಂದು ಅಧ್ಯಯನ’ ಎಂಬ ವಿಷಯದ ಬಗ್ಗೆ ಪಿಎಚ್.ಡಿ ಸಂಶೋಧನಾ ಪ್ರಬಂಧ ಸಲ್ಲಿಸಿದ್ದರು. ಆದರೆ ಪದವಿ ಪಡೆಯುವ ಅದೃಷ್ಟ ಮಾತ್ರ ರವಿಶಂಕರ್‌ಗೆ ಇರಲಿಲ್ಲ.

‘ರವಿಶಂಕರ್ ಹೆಚ್ಚು ಕ್ರಿಯಾಶೀಲ ವ್ಯಕ್ತಿ. ಸದಾ ಒಂದಿಲ್ಲೊಂದು ಹೊಸ ಚಟುವಟಿಕೆಯಲ್ಲಿ ತೊಡಗುತ್ತಿದ್ದರು. ಮಲ್ಲಾಡಿಹಳ್ಳಿಯ ರಾಘವೇಂದ್ರ ಬಿ.ಇಡಿ ಕಾಲೇಜು ಹಾಗೂ ಚಿತ್ರದುರ್ಗದ ಬಾಪೂಜಿ ಶಿಕ್ಷಣ ಸಂಸ್ಥೆಯ ಬಿ.ಇಡಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ದುಮ್ಮಿಯ ಜ್ಞಾನ ವಿಕಾಸ ಇಂಟರ್‌ನ್ಯಾಶನಲ್ ಶಾಲೆಯ ಆಡಳಿತಾಧಿಕಾರಿ ಯಾಗಿದ್ದರು. ಪ್ರತಿಭಾವಂತ ಉಪನ್ಯಾಸಕರಾಗಿದ್ದ ಅವರು ಮಲ್ಲಾಡಿಹಳ್ಳಿಯ ಬಿ.ಇಡಿ ಕಾಲೇಜಿನಲ್ಲಿ ಎರಡು ಬಾರಿ ನಿರಂತರ 12 ಗಂಟೆ ಉಪನ್ಯಾಸ ನೀಡಿ ಸಾಧನೆ ಮಾಡಿದ್ದರು’.

‘ಶಿಕ್ಷಣ ತಜ್ಞರಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದರು. ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಈಗ ಬದುಕಿದ್ದರೆ ಹೆಚ್ಚು ಸಂತಸಪಡುತ್ತಿದ್ದರು’ ಎಂದು ದಾವಣಗೆರೆಯ ಕೆ.ಆರ್.ಮಾರುಕಟ್ಟೆ ಸಮೀಪದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿರುವ ರವಿಶಂಕರ್ ಅವರ ಪತ್ನಿ ರತ್ನಾ ಹೇಳಿದರು.

‘ರವಿಶಂಕರ್ ಮತ್ತು ನಾನು 7ನೇ ತರಗತಿಯಿಂದ ಸಹಪಾಠಿಗಳು. ಮಲ್ಲಾಡಿಹಳ್ಳಿಯಲ್ಲಿ ಜತೆಗೇ ಪ್ರೌಢಶಾಲೆ, ಪಿಯುಸಿ ಓದಿದ್ದೆವು. ಅವನಿಗೆ ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮೀಜಿ ಬಗ್ಗೆ ಹೆಚ್ಚು ಪ್ರೀತಿ ಗೌರವ ಇತ್ತು. ಅವರ ಸಾಧನೆಗಳ ಕುರಿತಂತೆ ಮೊದಲ ವ್ಯಕ್ತಿಯಾಗಿ ಪಿಎಚ್.ಡಿ ಮಾಡಿದ್ದ. ಸಂಶೋಧನೆಗೆ ನಾನೂ ಪ್ರೇರಣೆ ನೀಡುತ್ತಿದ್ದೆ. ಅವನ ಜೀವನದ ಬಹುದೊಡ್ಡ ಕನಸು ಈಡೇರುವ ಮುನ್ನವೇ ಮರಣ ಹೊಂದಿದ್ದು ಬೇಸರ ತರಿಸಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ತಾರಾನಾಥ್ ಬೇಸರ ವ್ಯಕ್ತಪಡಿಸಿದರು.

***

ರವಿಶಂಕರ್ ತಮ್ಮ ಗುರುಗಳಾದ ರಾಘವೇಂದ್ರ ಸ್ವಾಮೀಜಿ ಅವರ ಜೀವನ, ಸಾಧನೆ ಬಗ್ಗೆ ಅಧ್ಯಯನ ನಡೆಸಿದ್ದರು. ಆದರೆ ಪಿಎಚ್.ಡಿ ಪದವಿ ಪಡೆಯುವ ಮುನ್ನವೇ ಇಹಲೋಕ ತ್ಯಜಿಸಿದ್ದು ದುಃಖ ತಂದಿದೆ.
-ರತ್ನಾ, ಎಸ್.ರವಿಶಂಕರ್ ಅವರ ಪತ್ನಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು