ಶುಕ್ರವಾರ, ಆಗಸ್ಟ್ 6, 2021
21 °C
ಕಾಲ್ಕೆರೆ ಗ್ರಾಮದಲ್ಲಿ ತೋಟಗಳಿಗೆ ಹರಿಯುತ್ತಿರುವ ಚರಂಡಿ ನೀರು, ರೈತರ ಬದುಕು ದುಸ್ತರ

ಅಡಿಕೆ ತೋಟ ಸೇರುತ್ತಿರುವ ಕೊಳಚೆ ನೀರು

ಸಾಂತೇನಹಳ್ಳಿ ಸಂದೇಶ್ ಗೌಡ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ತಾಲ್ಲೂಕಿನ ಕಾಲ್ಕೆರೆ ಗ್ರಾಮದ ಚರಂಡಿ ನೀರು ರೈತರ ತೋಟಗಳಿಗೆ ಹರಿಯುತ್ತಿದ್ದು, ಅನ್ನದಾತನ ಬದುಕು ದುಸ್ತರವಾಗಿದೆ.

ಗ್ರಾಮದ ಮಹೇಂದ್ರಪ್ಪ, ಶಂಕರಪ್ಪ, ಧರಣೇಂದ್ರಪ್ಪ, ಬಸವನ ಗೌಡ, ಶಿವಣ್ಣ, ದೇವೇಂದ್ರಪ್ಪ, ಹಾಲೇಶಪ್ಪ, ಮಂಜಪ್ಪ, ಮಲ್ಲಿಕಪ್ಪ ಎಂಬ ರೈತರ ತೋಟಗಳಿಗೆ ಕೊಳಚೆ ನೀರು ಸೇರುತ್ತಿದ್ದು, ಹೆಚ್ಚಿನ ತೇವಾಂಶದಿಂದ ಅಡಿಕೆ, ತೆಂಗಿನ ಮರಗಳು ಒಣಗುತ್ತಿವೆ.

‘ಗ್ರಾಮದಲ್ಲಿ ಸುಮಾರು 400 ಮನೆಗಳಿದ್ದು, ಇಷ್ಟೂ ಮನೆಗಳ ಚರಂಡಿ ನೀರು ತೋಟಗಳಿಗೆ ಹರಿಯುತ್ತಿದೆ. ಗ್ರಾಮದ ವ್ಯಾಪ್ತಿಯಲ್ಲಿ ಚರಂಡಿ ನಿರ್ಮಿಸಿದ್ದು, ತೋಟದ ಕಡೆಗೆ ನೀರು ಹರಿಯುವಂತೆ ಮಾಡಿದ್ದಾರೆ. ಚರಂಡಿ ಕಾಮಗಾರಿಯನ್ನು ಅರ್ಧಕ್ಕೇ ನಿಲ್ಲಿಸಿದ್ದು, ಕೊಳಚೆ ನೀರು ಎರಡು, ಮೂರು ವರ್ಷಗಳಿಂದ ತೋಟಗಳನ್ನು ಸೇರುತ್ತಿದೆ. ಇನ್ನು 300 ಮೀಟರ್ ಚರಂಡಿ ನಿರ್ಮಿಸಿದರೆ ಹಳ್ಳಕ್ಕೆ ಸೇರಿಸಬಹುದು. ಇದೇ ಜಾಗದಲ್ಲಿ ಹನುಮಲಿಗೆ ಹೋಗುವ ಕಾಲುದಾರಿ ಇದ್ದು, ಹೆಚ್ಚು ಜನ ಸಂಚರಿಸುತ್ತಾರೆ. ಇಲ್ಲಿ ಕೊಳಚೆ ನೀರು ನಿಂತಿರುವುದರಿಂದ ಜನರ ಓಡಾಟಕ್ಕೂ ತೊಂದರೆ ಆಗಿದೆ’ ಎನ್ನುತ್ತಾರೆ ರೈತ ಮಹೇಂದ್ರಪ್ಪ.

‘ಈ ಭಾಗದ 10 ರೈತರ ತೋಟಗಳಿಗೆ ಚರಂಡಿ ನೀರು ಸೇರುತ್ತಿದೆ. ಇಲ್ಲಿ ಇರುವವರೆಲ್ಲರೂ ಸಣ್ಣ ರೈತರಾಗಿದ್ದು, ಅರ್ಧ, ಒಂದು ಎಕರೆ ಅಡಿಕೆ ತೋಟ ಹೊಂದಿದ್ದಾರೆ. ಸುಮಾರು 20 ವರ್ಷಗಳಿಂದ ಕಷ್ಟದಿಂದ ತೋಟ ಬೆಳೆಸಿದ್ದು, ಚರಂಡಿ ನೀರು ನಿಂತಿರುವುದರಿಂದ ಮರಗಳು ಒಣಗುತ್ತಿವೆ. ಈಗಾಗಲೇ ನೂರಾರು ಮರಗಳು ಒಣಗಿ ಹೋಗಿವೆ. ಚರಂಡಿ ಕಾಮಗಾರಿ ಮುಂದುವರಿಸಿ ತೋಟಗಳಿಗೆ ಕೊಳಚೆ ನೀರು ಸೇರದಂತೆ ಮಾಡಿ ಎಂದು ಶಾಸಕ ಎಂ.ಚಂದ್ರಪ್ಪ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಪಿಡಿಒ, ಅಧ್ಯಕ್ಷರಿಗೆ ಮನವಿ ಮಾಡಿದ್ದರೂ, ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಇಲ್ಲಿಯ ರೈತರು.

‘ಮೋಟರ್‌ನಿಂದ ತೋಟದಲ್ಲಿ ನಿಂತಿರುವ ಕೊಳಚೆ ನೀರನ್ನು ಹೊರಹಾಕುತ್ತಿದ್ದೇವೆ. ಇದಕ್ಕೆ ನಾವೇ 20,000 ಖರ್ಚು ಮಾಡಿ ಪೈಪ್ ಅಳವಡಿಸಿದ್ದೆವು. ಆದರೆ, ಈ ವರ್ಷ ಹೆಚ್ಚು ಮಳೆ ಬರುತ್ತಿದ್ದು, ಚರಂಡಿ ನೀರಿನೊಂದಿಗೆ ಮಳೆ ನೀರು ಸೇರಿ ತೋಟದ ತುಂಬ ನಿಂತಿದೆ. ವಿದ್ಯುತ್ ಕೊರತೆಯಿಂದ ಇಷ್ಟು ನೀರನ್ನು ಹೊರಹಾಕಲು ಆಗುತ್ತಿಲ್ಲ. ತೋಟದಲ್ಲಿ ನೀರು ನಿಂತಿರುವುದರಿಂದ ಅಡಿಕೆ ಹಾಗೂ ತೆಂಗಿನಕಾಯಿಗಳನ್ನು ಕೆಡವಿ ಸಾಗಣೆ ಮಾಡಲಾಗುತ್ತಿಲ್ಲ. ವರ್ಷಗಳಿಂದ ಕೊಳಚೆ ನೀರು ನಿಂತಿರುವುದರಿಂದ ಸೊಳ್ಳೆಗಳು ಹೆಚ್ಚುತ್ತಿದ್ದು, ತೋಟಕ್ಕೆ ಹೋಗಲಾಗುತ್ತಿಲ್ಲ. ಈ ಭಾಗದಲ್ಲಿ ತೋಟದ ಮನೆಗಳಿದ್ದು, ಬದುಕುವುದೇ ಕಷ್ಟವಾಗಿದೆ’ ಎನ್ನುತ್ತಾರೆ ರೈತರು.

...........

ರಂಡಿ ನೀರು ತೋಟಗಳಿಗೆ ಹರಿಯುತ್ತಿರುವುದರಿಂದ ಸುಮಾರು 25 ಎಕರೆ ಅಡಿಕೆ ತೋಟಗಳಿಗೆ ಕಂಟಕ ಎದುರಾಗಿದೆ. ತೋಟ ಒಣಗಿದರೆ ರೈತರು ಬೀದಿಗೆ ಬೀಳಬೇಕಾಗುತ್ತದೆ.

-ಮಹೇಂದ್ರಪ್ಪ, ಕಾಲ್ಕೆರೆ ರೈತ

..............

ಚರಂಡಿ ನೀರನ್ನು ತೋಟಗಳಿಗೆ ಹೋಗದಂತೆ ಬೇರೆಡೆ ಹರಿಸಲು ಯೋಜನೆ ಸಿದ್ಧಪಡಿಸಿದ್ದೇವೆ. ಮಂಜೂರಾತಿಗೆ ಸದ್ಯದಲ್ಲೇ ಪ್ರಸ್ತಾವ ಸಲ್ಲಿಸಲಾಗುವುದು.

-ರಾಘವೇಂದ್ರ, ಪಿಡಿಒ, ದುಮ್ಮಿ ಗ್ರಾಮ ಪಂಚಾಯಿತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.