ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ: ಕತ್ತೆಯ ಶವಸಂಸ್ಕಾರ ಮಾಡಿದ ಗ್ರಾಮಸ್ಥರು

Last Updated 2 ಏಪ್ರಿಲ್ 2023, 5:20 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ಮದ್ದೇರು ಗ್ರಾಮದಲ್ಲಿ ಶನಿವಾರ ಗ್ರಾಮಸ್ಥರು ಸಾವನ್ನಪ್ಪಿದ ಕತ್ತೆಯ ಶವಯಾತ್ರೆ ನಡೆಸಿ ಶಾಸ್ತ್ರೋಕ್ತವಾಗಿ ಶವಸಂಸ್ಕಾರ ಮಾಡಿದರು.

ಪಕ್ಕದ ಗ್ರಾಮ ಮಲಸಿಂಗನ ಹಳ್ಳಿಯಲ್ಲಿ ಪ್ರತಿ ವರ್ಷ ಆಂಜನೇಯ ಸ್ವಾಮಿಯ ಸೇಜಿ (ಕತ್ತೆ) ಮೆರವಣಿಗೆ ನಡೆಯುತ್ತದೆ. ದಾಸಯ್ಯ ಸೇಜಿಯನ್ನು ಹೊತ್ತು ಕುಣಿಯುವ ಆಚರಣೆ ನಡೆಯುತ್ತದೆ. ಇಲ್ಲಿನ ಜನ ಕತ್ತೆ ಎಂದು ಕರೆಯುವುದರ ಬದಲು ‘ಸೇಜಿ’ ಎಂದು ಕರೆಯುತ್ತಾರೆ.

ಸುತ್ತಲಿನ ಗ್ರಾಮಗಳಲ್ಲಿ ಕತ್ತೆಯನ್ನು ದೇವರಂತೆ ಕಾಣುತ್ತಾರೆ. 6 ತಿಂಗಳ ಹಿಂದೆ ಮದ್ದೇರು ಗ್ರಾಮಕ್ಕೆ ಕತ್ತೆಯೊಂದು ಬಂದಿತ್ತು. ನಿತ್ಯವೂ ಮನೆಮನೆಗೆ ಭೇಟಿ ನೀಡುತ್ತಿತ್ತು. ಕತ್ತೆಗೆ ಗ್ರಾಮಸ್ಥರು ಬಾಳೆಹಣ್ಣು, ಬಿಸ್ಕತ್‌ ನೀಡುತ್ತಿದ್ದರು. ಕತ್ತೆಗೆ ಪೂಜೆ ಸಲ್ಲಿಸಿ ನಮಿಸುತ್ತಿದ್ದರು.

ಆದರೆ, ಒಂದು ವಾರದ ಹಿಂದೆ ಕತ್ತೆ ಅನಾರೋಗ್ಯಕ್ಕೆ ತುತ್ತಾಗಿತ್ತು. ಊಟ, ನೀರು ಬಿಟ್ಟಿತ್ತು. ಇದರಿಂದ ಆತಂಕಗೊಂಡ ಗ್ರಾಮಸ್ಥರು ಪಶುವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಕತ್ತೆ ಚೇತರಿಸಿಕೊಳ್ಳದೆ ಮೃತಪಟ್ಟಿತು. ಕತ್ತೆಯ ಶವವನ್ನು ಅಲಂಕರಿಸಿದ ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮಾಡಿದರು.

ಫ್ಲೆಕ್ಸ್ ಹಾಕುವ ಮೂಲಕ ಕತ್ತೆಗೆ ಶ್ರದ್ಧಾಂಜಲಿ ಸಲ್ಲಿಸಿದರು. ಗ್ರಾಮದ ಲೋಕೇಶ್ ಎಂಬುವರು ಜಮ್ಮ ಜಮೀನಿನಲ್ಲಿ ಕತ್ತೆಯ ಶವಸಂಸ್ಕಾರ ನಡೆಸಲು ಜಾಗ ನೀಡಿದರು. ವಿಧಿವಿಧಾನದಂತೆಯೇ ಶವ ಸಂಸ್ಕಾರ ಮಾಡಿದರು. ಗ್ರಾಮದಲ್ಲಿ ಅನ್ನಸಂತರ್ಪಣೆ ನಡೆಸಲಾಯಿತು. ಪಕ್ಕದ ಮಲಸಿಂಗನ ಹಳ್ಳಿ ಗ್ರಾಮಸ್ಥರೂ ಭಾಗವಹಿಸಿದ್ದರು.

‘ಕತ್ತೆ ಸಾವಿನಿಂದಮನೆಯ ಒಬ್ಬ ಸದಸ್ಯನನ್ನು ಕಳೆದುಕೊಂಡಂತೆ ಆಗಿದೆ. ಕತ್ತೆ ಸಮಾಧಿ ಮೇಲೆ ಮಂಟಪ ನಿರ್ಮಿಸಿ, ಪ್ರತಿ ವರ್ಷ ಸ್ಮರಣೋತ್ಸವ ನಡೆಸಲಾಗುವುದು’ ಎಂದು ಗ್ರಾಮದ ಮುಖಂಡರಾದ ಜಗದೀಶ್, ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯ ದೇವರಾಜು, ಲಿಂಗರಾಜು, ತಿಪ್ಪೇಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT