ಬುಧವಾರ, ಡಿಸೆಂಬರ್ 7, 2022
22 °C

ಚಿತ್ರದುರ್ಗ: ಹಾವು ಕಚ್ಚಿದರೆ ಸಕಾಲಕ್ಕೆ ಸಿಗದು ಚಿಕಿತ್ಸೆ

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಜಾನುಕೊಂಡದ ಹತ್ತು ವರ್ಷದ ಬಾಲಕ ಚಂಡು ತೆಗೆಯಲು ತೆಂಗಿನ ಚಿಪ್ಪು ಪೇರಿಸಿಟ್ಟಿದ್ದ ಗುಡ್ಡೆಗೆ ಕೈ ಹಾಕಿದ. ಏನೊ ಕಚ್ಚಿದಂತಹ ಅನುಭವವಾದರೂ ನಿರ್ಲಕ್ಷಿಸಿ ಆಟವಾಡಿದ. ಸಂಜೆ ಹೊತ್ತಿಗೆ ಕೈಯಲ್ಲಿ ಊತ ಕಾಣಿಸಿಕೊಂಡಿತು. ವೈದ್ಯರನ್ನು ಸಂಪರ್ಕಿಸಿದ ಬಳಿಕ ಹಾವು ಕಚ್ಚಿದ್ದು ಖಚಿತವಾಯಿತು. ಖಾಸಗಿ ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪೋಷಕರು ಬಾಲಕನನ್ನು ಉಳಿಸಿಕೊಂಡರು.

ಜಿಲ್ಲೆಯಲ್ಲಿ ಇಂತಹ ಘಟನೆಗಳು ಸಾಮಾನ್ಯ ಎಂಬಂತಾಗಿವೆ. ಹಾವು ಕಡಿತದ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಹಾವು ಕಡಿತಕ್ಕೆ ಭಿನ್ನ ಕಾರಣಗಳಿದ್ದರೂ ಸಕಾಲಕ್ಕೆ ಚಿಕಿತ್ಸೆ ಸಿಗದೇ ಮೃತಪಡುವವರ ಸಂಖ್ಯೆ ಏರಿಕೆಯಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುತ್ತಿದೆಯಾದರೂ ಪ್ರಾಣ ಉಳಿಯುವ ಖಾತರಿ ಇಲ್ಲ. ಹಾವು ಕಡಿತದಿಂದ ನರಳುವವರು ಖಾಸಗಿ ಆಸ್ಪತ್ರೆಯ ಚಿಕಿತ್ಸೆಗೆ ಲಕ್ಷಗಟ್ಟಲೆ ಕಳೆದುಕೊಳ್ಳಬೇಕಾಗಿದೆ.

ಹಿರಿಯೂರು ತಾಲ್ಲೂಕಿನ ಬೀರೇನಹಳ್ಳಿಯ ಸುಶೀಲಮ್ಮ, ಹೊಳಲ್ಕೆರೆ ತಾಲ್ಲೂಕಿನ ನಂದನಹೊಸೂರಿನ ಕೆ.ಟಿ.ಮಹಾಬಲೇಶ, ಚಳ್ಳಕೆರೆ ತಾಲ್ಲೂಕಿನ ಗೋಪನಹಳ್ಳಿ ದುರುಗಪ್ಪ, ಹೊಸದುರ್ಗ ತಾಲ್ಲೂಕಿನ ಅಯ್ಯನಹಳ್ಳಿಯ ಸುರೇಶ.. ಹೀಗೆ ಅನೇಕರು ಎರಡು ತಿಂಗಳಿಂದ ಈಚೆಗೆ ಹಾವು ಕಚ್ಚಿ ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿಯೇ ಇವರು ಹಾವು ಕಚ್ಚಿ ಕೊನೆಯುಸಿರೆಳೆದಿದ್ದಾರೆ. ಸಕಾಲಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಇವರು ಬದುಕುಳಿಯುವ ಸಾಧ್ಯತೆ ಇತ್ತು.

ಹೊಳಲ್ಕೆರೆ ತಾಲ್ಲೂಕಿನ ನಂದನಹೊಸೂರಿನ ಕೆ.ಟಿ.ಮಹಾಬಲೇಶ ಜಮೀನಿನಲ್ಲಿ ಹುಲ್ಲು ಕೊಯ್ಯುವಾಗ ಕಾಲಿನ ಹಿಮ್ಮಡಿಗೆ ಹಾವು ಕಚ್ಚಿತು. ತಕ್ಷಣ ಅವರನ್ನು ಹೊರಕೆರೆದೇವಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಹೆಚ್ಚಿನ ಚಿಕಿತ್ಸೆಗೆ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಬದುಕಿ ಉಳಿಯಲಿಲ್ಲ. ಅಯ್ಯನಹಳ್ಳಿಯ ಸುರೇಶ ಹಾಗೂ ಬೀರೇನಹಳ್ಳಿಯ ಸುಶೀಲಮ್ಮ ಅವರನ್ನೂ ಚಿತ್ರದುರ್ಗಕ್ಕೆ ಕರೆತರಲಾಗಿತ್ತು. ಆದರೆ, ಚಿಕಿತ್ಸೆಯಲ್ಲಾದ ವಿಳಂಬದಿಂದ ಇವರು ಕೂಡ ಪ್ರಾಣ ಕಳೆದುಕೊಳ್ಳಬೇಕಾಯಿತು.

ಚುಚ್ಚುಮದ್ದು, ಔಷಧ ಲಭ್ಯ:

ಹಾವು ಕಚ್ಚಿದ ವ್ಯಕ್ತಿಯ ಚಿಕಿತ್ಸೆಗೆ ವಿಷ ನಿರೋಧಕ ಔಷಧ ಆ್ಯಂಟಿ ಸ್ನೇಕ್‌ ವೆನಮ್‌ (ಎಎಸ್‌ವಿ) ಹಾಗೂ ಆ್ಯಂಟಿ ರೇಬಿಸ್‌ ವ್ಯಾಕ್ಸಿನ್‌ (ಎಆರ್‌ವಿ) ಬಳಕೆ ಮಾಡಲಾಗುತ್ತದೆ. ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗೂ ಈ ಔಷಧ, ಚುಚ್ಚುಮದ್ದು ಪೂರೈಕೆ ಮಾಡಲಾಗಿದೆ. ಆದರೆ, ಇದಕ್ಕೆ ಪೂರಕವಾದ ವೈದ್ಯಕೀಯ ಸೌಲಭ್ಯಗಳ ಕೊರತೆ ಇದೆ. ಇದರಿಂದ ಸಕಾಲಕ್ಕೆ ಚಿಕಿತ್ಸೆ ಸಿಗುವುದು ದುಸ್ತರವಾಗಿದೆ.

ಹಾವು ಕಚ್ಚಿದ ತಕ್ಷಣ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತರುವ ವ್ಯವಸ್ಥೆ ಆಗಬೇಕಿದೆ. ವಿಷದ ಪ್ರಮಾಣವನ್ನು ಗಮನಿಸಿ ಔಷಧ ನೀಡಬೇಕಿದೆ. ನಾಗರಹಾವು ಕಚ್ಚಿದರೆ ಅದು ನರಮಂಡಲ ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಇದಕ್ಕೆ ಚಿಕಿತ್ಸೆ ನೀಡುವಾಗ ಕೃತಕ ಉಸಿರಾಟದ ವ್ಯವಸ್ಥೆಯ ಅಗತ್ಯವಿದೆ. ಮಂಡಲ ಹಾವು ಕಚ್ಚಿದರೆ ರಕ್ತನಾಳ ಶುದ್ಧೀಕರಣ ಹಾಗೂ ರಕ್ತ ಪೂರೈಕೆ ಮಾಡಬೇಕಾಗುತ್ತದೆ. ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈ ವ್ಯವಸ್ಥೆ ಇಲ್ಲ.

52ರಲ್ಲಿ 5 ವಿಷಕಾರಿ ಹಾವು:

‘ವಿಶ್ವದಲ್ಲಿ 150ಕ್ಕೂ ಹೆಚ್ಚು ಬಗೆಯ ಹಾವುಗಳಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ 52 ವಿಧದ ಹಾವು ಪತ್ತೆಯಾಗಿವೆ. ಇವುಗಳಲ್ಲಿ 35ಕ್ಕೂ ಹೆಚ್ಚು ವಿಧದ ಹಾವು ಕಣ್ಣಿಗೆ ಬೀಳುತ್ತವೆ. ಈ ಪೈಕಿ ಐದು ಬಗೆಯ ಹಾವುಗಳು ಮಾತ್ರ ವಿಷಕಾರಿ. ಬಹುತೇಕ ಹಾವು ಅಪಾಯಕಾರಿ ಅಲ್ಲ’ ಎನ್ನುತ್ತಾರೆ ಉರಗಪ್ರೇಮಿ ಮಿಠಾಯಿ ಮುರುಗೇಶ್‌.

‘ಕೊಳಕುಮಂಡಲ, ಉರಿಮಂಡಲ, ರಕ್ತಮಂಡಲ, ಕಟ್ಟುಹಾವು ಹಾಗೂ ನಾಗರಹಾವು ಮಾತ್ರ ವಿಷಕಾರಿ. ಕಾಳಿಂಗ ಸರ್ಪ ಜಿಲ್ಲೆಯಲ್ಲಿ ಕಂಡುಬಂದಿಲ್ಲ. ಹಾವು ಕಚ್ಚಿದ ತಕ್ಷಣ ಆತಂಕಕ್ಕೆ ಒಳಗಾಗದೇ ಯಾವ ಹಾವು ಎಂಬುದನ್ನು ಖಚಿತ ಪಡಿಸಿಕೊಳ್ಳುವುದು ಉತ್ತಮ’ ಎನ್ನುತ್ತಾರೆ ಮುರುಗೇಶ್‌.

ಹಾವು ಕಚ್ಚಿ ಆಸ್ಪತ್ರೆ ಸೇರಿದವರಲ್ಲಿ ಹಾಗೂ ಮೃತಪಟ್ಟವರಲ್ಲಿ ರೈತರೇ ಹೆಚ್ಚು. ಜಮೀನು, ಕೊಟ್ಟಿಗೆಯಲ್ಲಿ ಹಾವು ಕಡಿತಕ್ಕೆ ಬಲಿಯಾಗಿದ್ದಾರೆ. ಶೇ 70ರಷ್ಟು ಜನರ ಕಾಲಿಗೆ, ಶೇ 20ರಷ್ಟು ಜನರ ಕೈಗೆ ಹಾವು ಕಚ್ಚಿವೆ. ಇತ್ತೀಚೆಗೆ ಮಳೆ ಯಥೇಚ್ಛವಾಗಿ ಸುರಿದಿದ್ದು, ಹುಲ್ಲು ಭೂಮಿಯನ್ನು ಆವರಿಸಿದೆ. ಎಚ್ಚರತಪ್ಪಿದರೆ ಹಾವು ಕಡಿತ ನಿಶ್ಚಿತ. ಭೀಮಸಮುದ್ರದ ಗಣಿಗಾರಿಕೆ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ಲಾರಿ ಚಾಲಕರೊಬ್ಬರು ಇಂತಹ ನಿರ್ಲಕ್ಷ್ಯದಿಂದ ಹಾವು ಕಡಿತಕ್ಕೆ ಒಳಗಾಗಿದ್ದರು.

‘ಜಮೀನುಗಳಲ್ಲಿ ಕೆಲಸ ಮಾಡುವ ರೈತರಿಗೆ ಹಾವಿನ ಬಗ್ಗೆ ಎಚ್ಚರಿಕೆ ಇರಬೇಕು. ಮೊಳಕಾಲಿನವರೆಗೆ ಶೂ ಧರಿಸಿ ಕೆಲಸ ಮಾಡುವುದು ಉತ್ತಮ. ಹುಲ್ಲು, ಪೈರುಗಳ ಕೊಯ್ಲು ಮಾಡುವಾಗಲೂ ಇದೇ ರೀತಿಯ ಎಚ್ಚರಿಕೆ ಇದ್ದರೆ ಒಳಿತು. ಮನೆ, ಕೊಟ್ಟಿಗೆ ಹಾಗೂ ಜಮೀನು ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು’ ಎಂದು ಸಲಹೆ ನೀಡುತ್ತಾರೆ ಮುರುಗೇಶ್‌.

ವಿಷಕ್ಕಿಂತ ಭಯಕ್ಕೆ ಹೆಚ್ಚು ಸಾವು!

ಹಾವು ಕಡಿತಕ್ಕೆ ಒಳಗಾದವರಿಗೆ ತುರ್ತಾಗಿ ನೀಡಲು ಬೇಕಿರುವ ಚುಚ್ಚುಮದ್ದು ತಾಲ್ಲೂಕಿನಲ್ಲಿ ಲಭ್ಯವಿದೆ. ಆದರೆ, ಸರಿಯಾದ ವೈದ್ಯಕೀಯ ವ್ಯವಸ್ಥೆ ಇಲ್ಲದೇ ತಾಲ್ಲೂಕಿನ ಅನೇಕರು ಪ್ರಾಣ ಕಳೆದುಕೊಳ್ಳಬೇಕಾಗಿದೆ.

ಪ್ರಸಕ್ತ ವರ್ಷ ಸಾರ್ವಜನಿಕ ಆಸ್ಪತ್ರೆಗೆ 260 ಸ್ನೇಕ್ ವೆನಮ್ ಆ್ಯಂಟಿಸೆರಮ್ ಚುಚ್ಚುಮದ್ದು ಸರಬರಾಜು ಮಾಡಲಾಗಿದೆ. ಅವುಗಳಲ್ಲಿ 140 ವಾಯ್ಲ್ ಔಷಧಿ ಉಗ್ರಾಣದಲ್ಲಿ, 20 ವಾಯ್ಲ್ ತುರ್ತು ಚಿಕಿತ್ಸಾ ಘಟಕದಲ್ಲಿದ್ದು, 100 ವಾಯ್ಲ್ ಈವರೆಗೆ ಬಳಕೆಯಾಗಿವೆ ಎನ್ನುತ್ತಾರೆ ಆಸ್ಪತ್ರೆಯ ಕೆಮಿಸ್ಟ್ ರಮೇಶ್.

‘ತಿಂಗಳಿಗೆ ಕನಿಷ್ಠ ಮೂರು ಹಾವು ಕಡಿತದ ಪ್ರಕರಣಗಳಾದರೂ ದಾಖಲಾಗುತ್ತವೆ. ಚುಚ್ಚುಮದ್ದು ದಾಸ್ತಾನು ಇದೆ. ಕಡಿತಕ್ಕೆ ಒಳಗಾದವರು ಸ್ಥಳೀಯವಾಗಿ ನಾಟಿ ಚಿಕಿತ್ಸೆ ಮಾಡಿಕೊಂಡು ನಗರಕ್ಕೆ ಬರುವ ವೇಳೆಗೆ ಸಾಕಷ್ಟು ಸಮಯ ಆಗಿರುತ್ತದೆ. ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ (ಐಸಿಯು) ಇಲ್ಲದ ಕಾರಣಕ್ಕೆ ಚುಚ್ಚುಮದ್ದು ನೀಡಿ ಜಿಲ್ಲಾ ಆಸ್ಪತ್ರೆಗೆ ಕಳಿಸಿಕೊಡುತ್ತೇವೆ’ ಎನ್ನುತ್ತಾರೆ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕುಮಾರನಾಯ್ಕ್.

‘ಹಿರಿಯೂರು ತಾಲ್ಲೂಕಿನಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆ ಹೊರತುಪಡಿಸಿ, ಎರಡು ಸಮುದಾಯ ಆರೋಗ್ಯ ಕೇಂದ್ರ, 22 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಪ್ರತಿ ಕೇಂದ್ರದಲ್ಲೂ ಹಾವು ಕಡಿತಕ್ಕೆ ಒಳಗಾದವರಿಗೆ ನೀಡಲು ಎರಡೆರಡು ವಾಯ್ಲ್ ಔಷಧ ದಾಸ್ತಾನು ಇಡಲಾಗಿದೆ. ನಾಗರಹಾವು ಒಳಗೊಂಡು ನಾಲ್ಕು ರೀತಿಯ ಹಾವುಗಳು ಈ ಭಾಗದಲ್ಲಿ ವಿಷಕಾರಿಯಾಗಿದ್ದು, ಕಡಿತದ ಪರಿಣಾಮ ತೀವ್ರವಾಗಿದ್ದಲ್ಲಿ ನರಮಂಡಲಕ್ಕೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಜಿಲ್ಲಾ ಆಸ್ಪತ್ರೆಗೆ ಕಳಿಸಿಕೊಡಲಾಗುತ್ತದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ವಿವರಿಸುತ್ತಾರೆ.

ಹೊಲ–ತೋಟಗಳಲ್ಲಿ ರಾತ್ರಿ ವೇಳೆ ನೀರು ಹಾಯಿಸಲು ಹೋದಾಗ, ಕಳೆ ತೆಗೆಯುವಾಗ, ಹೊಲದ ಬದುಗಳಲ್ಲಿ ದನ–ಕರುಗಳನ್ನು ಮೇಯಿಸುವಾಗ, ಮನೆಯ ಹಿತ್ತಲುಗಳಲ್ಲಿ ಕಟ್ಟಿಗೆ ಕತ್ತರಿಸುವಾಗ, ಬಣವೆಯಲ್ಲಿ ಹುಲ್ಲು ತೆಗೆಯುವಾಗ, ಬಯಲು ಶೌಚಕ್ಕೆ ಪೊದೆಗಳ ಮರೆಗೆ ಹೋದಾಗ ಹಾವು ಕಡಿತಕ್ಕೆ ಒಳಗಾದವರು ಹೆಚ್ಚು. ಹಾವು ಕಡಿತಕ್ಕೆ ಒಳಗಾದ ಭಾಗದಿಂದ ವಿಷವನ್ನು ಹೊರ ತೆಗೆದು, ತಕ್ಷಣ ಆಸ್ಪತ್ರೆಗೆ ಕರೆತರಬೇಕು. ಬಹಳಷ್ಟು ಜನ ಭಯದಿಂದ ಮೃತಪಟ್ಟಿರುವುದೂ ಉಂಟು ಎನ್ನುತ್ತಾರೆ ವೈದ್ಯರು.

ಮೌಢ್ಯದ ಮೊರೆಹೋಗಿ ಪ್ರಾಣ ತೆತ್ತರು

ಜನವರಿಯಿಂದ ಈವರೆಗೆ ತಾಲ್ಲೂಕಿನಲ್ಲಿ ದಾಖಲಾದ 106 ವಿಷಜಂತಿನ ಕಡಿತದ ಪ್ರಕರಣಗಳಲ್ಲಿ ಹಾವು ಕಡಿತದ ಪ್ರಕರಣಗಳೇ ಹೆಚ್ಚು. ಸಕಾಲಕ್ಕೆ ತುರ್ತು ಚಿಕಿತ್ಸೆ ಸಿಗದೇ ಅನೇಕರು ಬಲಿಯಾಗಿದ್ದಾರೆ. ಕೃಷಿ ಚಟವಟಿಕೆಗಳಲ್ಲಿ ತೊಡಗಿಸಿಕೊಂಡ ರೈತರೇ ಹಾವಿನ ಕಡಿತಕ್ಕೆ ಸಿಲುಕಿದ್ದಾರೆ.

ಮೌಢ್ಯ, ದೈವದ ಬಗ್ಗೆ ಅತೀವ ನಂಬಿಕೆಯಿಂದ ಕಾಡುಗೊಲ್ಲ ಮತ್ತು ಮ್ಯಾಸಬೇಡ ಬುಡಕಟ್ಟು ಸಮುದಾಯ ಹಾವು, ಚೇಳು ಕಡಿತಕ್ಕೆ ತಮ್ಮ ಆರಾಧ್ಯ ದೈವದ ಮೊರೆ ಹೋಗುತ್ತಾರೆ. ಹಾವು, ಚೇಳು ಕಡಿದಾಗ ಮೀಸಲು ಹರಕೆ ಮಾಡಿಕೊಳ್ಳುತ್ತಾರೆ. ದೇವರ ತೀರ್ಥವನ್ನು ಕುಡಿದು ಆಸ್ಪತ್ರೆಗೆ ತೆರಳಲು ಹಿಂದೇಟು ಹಾಕುತ್ತಾರೆ. ಇದು ಸಾವಿನ ಪ್ರಮಾಣವನ್ನು ಹೆಚ್ಚಿಸಿದೆ ಎಂಬುದು ವೈದ್ಯರ ಅಭಿಪ್ರಾಯ.

‘ಪತಿಯೊಂದಿಗೆ ಶೇಂಗಾಬಳ್ಳಿ ಬಣವೆ ಹಾಕುವಾಗ ಹಾವು ಕಚ್ಚಿತು. ಗಿಡಮೂಲಿಕೆ ಹಾಕಿಸಿ ಎಂದು ಗ್ರಾಮಸ್ಥರು ಸಲಹೆ ನೀಡಿದರು. ಈ ಸಲಹೆ ತಿರಸ್ಕರಿಸಿದ ಪತಿ ಗೋಪಿ, ನನ್ನನ್ನು ತಕ್ಷಣ ಬೈಕಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಇದರಿಂದ ಜೀವ ಉಳಿಯಿತು’ ಎನ್ನುತ್ತಾರೆ ಕುರುಡಿಹಳ್ಳಿಯ ಮಹಿಳೆ ಬೇಬಿ.

‘ಪ್ರತಿ ತಿಂಗಳು ಕನಿಷ್ಠ 12 ವಿಷ ಜಂತು ಕಡಿತ ಪ್ರಕರಣಗಳು ತಾಲ್ಲೂಕಿನಲ್ಲಿ ದಾಖಲಾಗುತ್ತಿವೆ. ಔಷಧದೊಂದಿಗೆ ಪ್ರಥಮ ಚಿಕಿತ್ಸೆ ನೀಡುತ್ತೇವೆ. ಹಾವು ಕಚ್ಚಿದ ಭಾಗದ ರಕ್ತ ತೆಗೆದು ಬಾಟಲಯಲ್ಲಿ ಹಾಕಿ ಪರೀಕ್ಷಿಸುತ್ತೇವೆ. ರಕ್ತ ದ್ರವರೂಪದಲ್ಲಿ ಇದ್ದರೆ ಆ್ಯಂಟಿ ಸ್ನೇಕ್‌ ವೆನಮ್‌ (ಎಎಸ್‌ವಿ) ನೀಡುತ್ತೇವೆ. ಆಸ್ಪತ್ರೆಯಲ್ಲಿ ಔಷಧಿಯ ಕೊರತೆ ಇಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು ಮೃತಪಟ್ಟಿದ್ದು ವಿರಳ. ಭಯ, ಗಾಬರಿ, ಗಿಡಮೂಲಿಕೆ ಮತ್ತು ಮೌಢ್ಯದ ಮೊರೆ ಹೋದವರು, ಆಸ್ಪತ್ರೆಗೆ ಸಕಾಲಕ್ಕೆ ಬರದೇ ವಿಳಂಬ ಮಾಡಿದವರು ಬಲಿಯಾಗಿದ್ದಾರೆ’ ಎಂದು ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯ ಡಾ.ವೆಂಕಟೇಶ್ ತಿಳಿಸಿದರು.

ಹಿನ್ನೀರು ಪ್ರದೇಶದಲ್ಲಿ ಹೆಚ್ಚಾದ ಹಾವು

ತಾಲ್ಲೂಕಿನ ಮತ್ತೋಡು ಹೋಬಳಿ ಭಾಗದಲ್ಲಿ ಹಾವು ಕಡಿತದ ಪ್ರಕರಣಗಳು ಹೆಚ್ಚು. ವಿ.ವಿ. ಸಾಗರದ ಹಿನ್ನೀರು ಗ್ರಾಮಗಳ ಸುತ್ತ ಆವರಿಸಿದ ಪರಿಣಾಮ ಹಾವುಗಳಿಗೆ ಸ್ಥಳಾವಕಾಶವಿಲ್ಲದೇ ಮನೆ ಮತ್ತು ಜಮೀನುಗಳಲ್ಲಿ ಬೀಡುಬಿಟ್ಟಿವೆ.

ತಾಲ್ಲೂಕಿನಲ್ಲಿ ಏಪ್ರಿಲ್‌ನಿಂದ ಈಚೆಗೆ 6 ಜನ ರೈತರು ಹಾವು ಕಡಿತದಿಂದ ಮೃತಪಟ್ಟಿದ್ದಾರೆ. ಜಾನುವಾರು ಮೇಯಿಸುವಾಗ, ಮೇವು ಕೀಳುವಾಗ, ರಾಗಿ ಕೊಯ್ಲು... ಹೀಗೆ ಕೃಷಿಗೆ ಸಂಬಂಧಿಸಿದ ವಿವಿಧ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ರೈತರು ಹಾವು ಕಡಿತಕ್ಕೆ ತುತ್ತಾಗುತ್ತಿದ್ದಾರೆ.

‘ತಾಲ್ಲೂಕಿನಾದ್ಯಂತ 6 ರೈತರು ಹಾವು ಕಡಿತದಿಂದ ಸಾವನ್ನಪ್ಪಿದ್ದು, ಅವರಲ್ಲಿ 3 ರೈತ ಕುಟುಂಬಕ್ಕೆ ಸರ್ಕಾರಿಂದ ತಲಾ ₹ 2 ಲಕ್ಷ ಪರಿಹಾರ ತಲುಪಿದೆ. ಶೀಘ್ರವೇ ಉಳಿದ ಕುಟುಂಬಗಳಿಗೂ ನೆರವು ನೀಡಲಾಗುವುದು. ಕಳೆದ ವರ್ಷಕ್ಕಿಂತ ಈ ಬಾರಿ ಹಾವು ಕಡಿತ ಪ್ರಮಾಣ ಹೆಚ್ಚಾಗಿದೆ’ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್‌. ಈಶ.

‘ರೈತರು ಎಚ್ಚರದಿಂದ ಇರಬೇಕು. ರಾತ್ರಿ ಸಮಯದಲ್ಲಿ ಕೃಷಿ ಚಟುವಟಿಕೆ ಸ್ಥಗಿತಗೊಳಿಸಬೇಕು. ಜಮೀನುಗಳಲ್ಲಿರುವ ಅನಾವಶ್ಯಕ ಕಸಕಡ್ಡಿ, ಗಿಡಗಂಟಿಗಳನ್ನು ಕಿತ್ತು, ಆಗಾಗ ಸ್ವಚ್ಛಗೊಳಿಸಿದರೆ, ವಿಷ ಜಂತುಗಳ ಸಂಖ್ಯೆ ಕಡಿಮೆಯಾದೀತು’ ಎಂಬುದು ಕೃಷಿ ಅಧಿಕಾರಿ ಸಲಹೆ.

ಸಾವಿನ ಸಂಖ್ಯೆ ಶೂನ್ಯ!

ಹಾವು ಕಚ್ಚಿ ಜಿಲ್ಲೆಯಲ್ಲಿ ಯಾವೊಬ್ಬರೂ ಮೃತಪಟ್ಟಿಲ್ಲ ಎಂಬುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ. ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 716 ಜನ ಹಾವು ಕಡಿತಕ್ಕೆ ಚಿಕಿತ್ಸೆ ಪಡೆದಿದ್ದಾರೆ. ಇವರಲ್ಲಿ ಯಾವೊಬ್ಬರೂ ಮೃತಪಟ್ಟಿಲ್ಲ ಎಂಬುದು ಅಧಿಕಾರಿಗಳ ಹೇಳಿಕೆ. ‘ಹಾವು ಕಚ್ಚಿ ಮೃತಪಟ್ಟರೆ ಮರಣೋತ್ತರ ಪರೀಕ್ಷೆ ನಡೆಸಬೇಕು. ಹಾವು ಕಚ್ಚಿದ ಪರಿಣಾಮವಾಗಿ ಮೃತಪಟ್ಟಿರುವುದು ಖಚಿತವಾದರೆ ಮಾತ್ರ ಪರಿಹಾರಕ್ಕೆ ಪರಿಗಣಿಸಲಾಗುತ್ತದೆ. ಬಹುತೇಕರು ಮರಣೋತ್ತರ ಪರೀಕ್ಷೆಗೆ ಹಿಂದೇಟು ಹಾಕುತ್ತಾರೆ. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರೆ ಶವ ಪಡೆದು ಮರಳುತ್ತಾರೆ’ ಎಂದು ವಿವರಿಸುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

ಕೋಟ್‌...

ಹಾವು ಕಚ್ಚಿದಾಗ ನೀಡುವ ಔಷಧದ ಕೊರತೆ ಇಲ್ಲ. ಸಕಾಲಕ್ಕೆ ಚಿಕಿತ್ಸೆ ಪಡೆದ ಅನೇಕರು ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಗೆ ದಾಖಲಾದವರು ಮೃತಪಟ್ಟಿದ್ದು ಕಡಿಮೆ.
ಡಾ.ಆರ್‌. ರಂಗನಾಥ್‌, ಜಿಲ್ಲಾ ಆರೋಗ್ಯಾಧಿಕಾರಿ

   ಹಾವು ಕಡಿತಕ್ಕೆ ಕೂಡಲೇ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸಾ ಸೌಲಭ್ಯ ಕಲ್ಪಿಸಬೇಕು. ರೈತರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು.

-ವೆಂಕಟೇಶ್, ರೈತ, ಹೊಸದುರ್ಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು