ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಯಕನಹಟ್ಟಿ: ನೀರಿದ್ದರೂ ಸಮರ್ಪಕ ಪೂರೈಕೆಯಿಲ್ಲ

ಜೀವಜಲಕ್ಕಾಗಿ ಹಗಲು–ರಾತ್ರಿ ತಪ್ಪಿಲ್ಲ ಪರದಾಟ
ವಿ. ಧನಂಜಯ
Published 15 ಏಪ್ರಿಲ್ 2024, 5:21 IST
Last Updated 15 ಏಪ್ರಿಲ್ 2024, 5:21 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಜನ– ಜಾನುವಾರುಗಳಿಗೆ ಕುಡಿಯುವುದಕ್ಕೂ ನೀರಿಲ್ಲದೇ ಪರದಾಡುತ್ತಿರುವ ಚಿತ್ರಣ ಹೋಬಳಿಯ ಜಾಗನೂರಹಟ್ಟಿ ಗ್ರಾಮದಲ್ಲಿ ಸಾಮಾನ್ಯ ಎಂಬಂತಾಗಿದೆ. ಅವೈಜ್ಞಾನಿಕ ಪೈಪ್‌ಲೈನ್‌ ಕಾಮಗಾರಿಯಿಂದಾಗಿ ನೀರಿದ್ದರೂ ಪೂರೈಕೆಯಲ್ಲಿ ಸಮಸ್ಯೆಯಿಂದ ಜನರು ಪರದಾಡುವಂತಾಗಿದೆ.

ದಿನ ಬೆಳಗಾದರೆ ಕುಡಿಯುವ ನೀರನ್ನು ಎಲ್ಲಿಂದ ತರಬೇಕು ? ಹೇಗೆ ತರಬೇಕು? ಎನ್ನುವುದೇ ಗ್ರಾಮಸ್ಥರಿಗೆ ದೊಡ್ಡ ಚಿಂತೆಯಾಗಿ ಕಾಡುತ್ತಿದೆ.

ನಾಯಕನಹಟ್ಟಿ ಹೋಬಳಿಯಲ್ಲಿ ಪ್ರಮುಖ ಜಲಮೂಲಗಳಿಲ್ಲ. ಈ ಭಾಗದ ಜನರಿಗೆ ಕೊಳವೆಬಾವಿಗಳೇ ಆಸರೆ. ಗ್ರಾಮದ ಅನತಿ ದೂರದಲ್ಲೇ ಕೆರೆಯಿದೆ. ಆದರೆ ಮಳೆಯಾಗದ ಕಾರಣ ಕೆರೆ ಬತ್ತಿಹೋಗಿದೆ.

ಇದರ ಪರಿಣಾಮ ಹೋಬಳಿಯ ಯಾವ ಭಾಗದಲ್ಲಿ ಕೊಳವೆಬಾವಿ ಕೊರೆಯಿಸಿದರೂ ವಿಫಲವಾಗುತ್ತವೆ. ಕಾರಣ ಅಂತರ್ಜಲದ ಮಟ್ಟ ಕುಸಿದು ಪಾತಾಳ ಸೇರಿದೆ. ಪರಿಣಾಮ 500ರಿಂದ 700ಅಡಿ ಆಳದವರೆಗೂ ಕೊರೆಯಿಸಿದರೂ  ಹನಿ ನೀರೂ ದೊರೆಯುತ್ತಿಲ್ಲ.

ಜಾಗನೂರಹಟ್ಟಿ ಗ್ರಾಮದಲ್ಲಿ ಬೇಸಿಗೆಯಲ್ಲಿ ಮಾತ್ರವಲ್ಲದೆ ವರ್ಷವಿಡೀ ನೀರಿನ ಸಮಸ್ಯೆ ಇರುತ್ತದೆ. ಈ ಗ್ರಾಮದಲ್ಲಿ ರೈತರು, ದಿನಗೂಲಿ ಕಾರ್ಮಿಕರಿದ್ದಾರೆ. ಜೀವಜಲಕ್ಕಾಗಿ ಮಹಿಳೆಯರು, ಮಕ್ಕಳು, ಯುವಕರು, ಕೆಲಸ ಕಾರ್ಯಗಳನ್ನು ಬದಿಗೊತ್ತಬೇಕಾದ ಪರಿಸ್ಥಿತಿ ಎದುರಾಗಿದೆ. ಇರುವ ಅಲ್ಪಸ್ವಲ್ಪ ನೀರಿಗಾಗಿ ಮುಖ್ಯರಸ್ತೆಯ ಪಕ್ಕದಲ್ಲಿ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮದ ಪಾಲಮ್ಮ, ರತ್ನಮ್ಮ ಅಳಲು ತೋಡಿಕೊಂಡರು.

ದಿನಗೂಲಿ ಕಾರ್ಮಿಕರು ಕೂಲಿ ಕೆಲಸ ಬಿಟ್ಟು ನೀರಿಗಾಗಿ ಕಾಯಬೇಕು. ಗ್ರಾಮಕ್ಕೆ ನೀರು ಪೂರೈಸಲು 2 ಕೊಳವೆಬಾವಿಗಳಿವೆ. ಅದರ‌ಲ್ಲಿ ಒಂದರ ನೀರು ಬಳಸಲು ಯೋಗ್ಯವಾಗಿಲ್ಲ. ಒಂದೇ ಕೊಳವೆಬಾವಿ ಇರುವ ಕಾರಣ ಗ್ರಾಮದ 350 ಮನೆಗಳಿಗೆ ನೀರು ಪೂರೈಸಲು ಸಾಕಾಗುವುದಿಲ್ಲ. ಗ್ರಾಮಸ್ಥರು ಸಮೀಪದ ರೈತರ ಜಮೀನುಗಳಿಂದ ನೀರನ್ನು ಹೊತ್ತು ತರಬೇಕು. ಬೇಸಿಗೆಯಲ್ಲಿ ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗಿ ಹಾಹಾಕಾರ ಸೃಷ್ಟಿಯಾಗುತ್ತದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸಿ ಕುಡಿಯುವ ನೀರಿನ ಬವಣೆ ತಪ್ಪಿಸಬೇಕು ಎಂದು ಗ್ರಾಮಸ್ಥರಾದ ತಿಪ್ಪೇಸ್ವಾಮಿ, ಗಾದ್ರಪ್ಪ, ಪಾಲಯ್ಯ ಒತ್ತಾಯಿಸಿದರು.

ನಾಯಕನಹಟ್ಟಿ ಚಿಕ್ಕಕೆರೆಯಲ್ಲಿ ನೀರು ಪೋಲಾಗುತ್ತಿರುವುದು.
ನಾಯಕನಹಟ್ಟಿ ಚಿಕ್ಕಕೆರೆಯಲ್ಲಿ ನೀರು ಪೋಲಾಗುತ್ತಿರುವುದು.
ತಿಪ್ಪೇಸ್ವಾಮಿ ಗೋಪಾಲಿ
ತಿಪ್ಪೇಸ್ವಾಮಿ ಗೋಪಾಲಿ
ಬಿ.ಟಿ. ಪ್ರಕಾಶ್ 
ಬಿ.ಟಿ. ಪ್ರಕಾಶ್ 

ಜಾಗನೂರಹಟ್ಟಿಯಲ್ಲಿ ಆರು ತಿಂಗಳಿಂದ ನೀರಿನ ಸಮಸ್ಯೆ ಇದೆ. ಅಧಿಕಾರಿಗಳು ಜನಪ್ರತಿನಿಧಿಗಳು ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಿಲ್ಲ.

–ತಿಪ್ಪೇಸ್ವಾಮಿ ಗೋಪಾಲಿ ಗ್ರಾಮಸ್ಥ ಜಾಗನೂರಹಟ್ಟಿ 

ನಾಯಕನಹಟ್ಟಿ ಹೋಬಳಿಯಲ್ಲಿ ಅಂತರ್ಜಲ ಕುಸಿತದ ಸಮಸ್ಯೆ ತೀವ್ರವಾಗಿದ್ದು ಭದ್ರಾ ಮೇಲ್ದಂಡೆ ಮತ್ತು ತುಂಗಭದ್ರಾ ಹಿನ್ನೀರು ಕಾಮಗಾರಿ ತುರ್ತಾಗಿ ಮುಗಿಸಿದರೆ ಶಾಶ್ವತ ಪರಿಹಾರ ದೊರೆಯುತ್ತದೆ.

–ಬಿ.ಟಿ.ಪ್ರಕಾಶ್ ಮುಖಂಡ ರಾಷ್ಟ್ರೀಯ ಕಿಸಾನ್‌ ಸಂಘ

ನೀರಿನ ನಿರ್ವಹಣೆಯಲ್ಲಿ ವಿಫಲ

ನಾಯಕನಹಟ್ಟಿ ಸಮೀಪದ ದೊಡ್ಡಕೆರೆಯಲ್ಲಿ ಈಗಾಗಲೇ 6 ಕೊಳವೆಬಾವಿಗಳಿದ್ದು ಅವುಗಳಲ್ಲಿ ಯಥೇಚ್ಛವಾಗಿ ನೀರಿನ ಲಭ್ಯತೆ ಇದೆ. ಆದರೆ ಪೈಪ್‌ಲೈನ್ ಅಳವಡಿಕೆಯ ಅವೈಜ್ಞಾನಿಕ ಕಾಮಗಾರಿಯಿಂದ 3 ಕೊಳವೆಬಾವಿಗಳ ನೀರನ್ನು ಮಾತ್ರ ಪೂರೈಸಲಾಗುತ್ತಿದೆ. ಒಂದು ವಾರ್ಡ್‌ಗೆ ಒಂದು ದಿನ ಇನ್ನೊಂದು ವಾರ್ಡ್‌ಗೆ ಇನ್ನೊಂದು ದಿನ ಎಂಬ ಪದ್ಧತಿ ಅನುಸರಿಸರಿಸುತ್ತಿರುವ ಕಾರಣ ನೀರು ಸಮರ್ಪಕ ಪೂರೈಕೆಯಾಗುತ್ತಿಲ್ಲ. ಯಥೇಚ್ಛವಾಗಿ ನೀರಿದ್ದರೂ ಪೂರೈಕೆ ಸಮಸ್ಯೆಯಿಂದ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT