ಶುಕ್ರವಾರ, ಜುಲೈ 1, 2022
21 °C
ಹಿರಿಯೂರಿನ ಬೀರೇನಹಳ್ಳಿ ರೈತ ಮಂಜುನಾಥ್‌ ವ್ಯಥೆ

ಟೊಮೆಟೊ ಹಣ್ಣಿಗೆ ದರ ಕುಸಿತ: ಸಂಕಷ್ಟದಿಂದ ಮುಕ್ತವಾಗುವ ಕನಸು ನುಚ್ಚುನೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ‘ಟೊಮೆಟೊ ಹಣ್ಣಿನ ಬಳ್ಳಿ ಭೂಮಿಗೆ ಬೀಳುವಂತೆ ಜಗ್ಗಿತ್ತು. ಮಾರುಕಟ್ಟೆಯಲ್ಲಿ ಉತ್ತಮ ದರ ಸಿಕ್ಕರೆ ನಮ್ಮೆಲ್ಲ ಸಂಕಷ್ಟಗಳಿಂದ ಮುಕ್ತರಾಗುತ್ತೇವೆ ಎಂಬ ಕನಸು ನುಚ್ಚುನೂರಾಗಿದೆ’.

ತಾಲ್ಲೂಕಿನ ಬೀರೇನಹಳ್ಳಿಯಲ್ಲಿ ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಎರಡು ಎಕರೆಯಲ್ಲಿ ಸಾವಾ ಸೀಡ್ಸ್ ತಳಿಯ ಟೊಮೆಟೊ ಬೆಳೆದು ದರ ಕುಸಿತದಿಂದ ಕಂಗಾಲಾಗಿರುವ ರೈತ ಮಂಜುನಾಥ್ ಅವರ ನೋವಿನ ನುಡಿಗಳು ಇವು.

‘ಪ್ರತಿ ಸಸಿಗೆ ಒಂದೂವರೆ ರೂಪಾಯಿಯಂತೆ ಚಳ್ಳಕೆರೆಯಿಂದ 16,500 ಸಸಿ ತಂದು ನಾಟಿ ಮಾಡಿದ್ದೆ.
ನಾಟಿ ಮಾಡಿದ್ದ ಸಮಯದಲ್ಲಿ ವಿಪರೀತ ಮಳೆ ಬಂದ ಕಾರಣ ಸಸಿಗಳು ಕೊಳೆಯುವುದನ್ನು ತಪ್ಪಿಸಲು ₹ 70 ಸಾವಿರ ಖರ್ಚು ಮಾಡಿ ರಾಸಾಯನಿಕ ಸಿಂಪಡಿಸಲಾಗಿತ್ತು. ₹ 30 ಸಾವಿರ ವ್ಯಯಿಸಿ ಕೊಟ್ಟಿಗೆ ಗೊಬ್ಬರ ಹಾಕಿದ್ದೆ. ಬಳ್ಳಿ ನೆಲದ ಮೇಲೆ ಹರಡಿದಲ್ಲಿ ಹಣ್ಣು ಕೊಳೆಯುತ್ತದೆ ಎಂದು ಐದಾರು ಸಾವಿರ ಖರ್ಚು ಮಾಡಿ ಸಾಲಿಗೆ ಗೂಟಗಳನ್ನು ನಿಲ್ಲಿಸಿದ್ದೆ. ಟೊಮೆಟೊ ಕಾಯಿ ಕಟ್ಟಲು ಆರಂಭಿಸಿದಾಗ ನಮ್ಮ ಮನೆಯ ಅದೃಷ್ಟದ ಬಾಗಿಲು ತೆರೆಯಿತು ಅಂದುಕೊಂಡಿದ್ದೆ. ಆದರೆ ಕೆಲವೇ ದಿನಗಳಲ್ಲಿ ನನ್ನ ಲೆಕ್ಕಾಚಾರಗಳೆಲ್ಲ ತಲೆಕೆಳಗಾದವು’ ಎಂದು ಮಂಜುನಾಥ್ ನೋವು ವ್ಯಕ್ತಪಡಿಸಿದರು.

‘ಒಂದೂವರೆ ತಿಂಗಳ ಹಿಂದೆ ನಿತ್ಯ 30–40 ಬಾಕ್ಸ್ ಸಿಗುತ್ತಿತ್ತು. ಕೋಲಾರಕ್ಕೆ ಕಳಿಸುವ ಮೊದಲು ಗ್ರೇಡಿಂಗ್ ಮಾಡಬೇಕು. ಹಣ್ಣು ಕೀಳುವ ಕೂಲಿ, ಸಾರಿಗೆ ವೆಚ್ಚ ಎಲ್ಲಾ ಸೇರಿ ₹ 55ರಿಂದ ₹ 60 ರೂಪಾಯಿ ಖರ್ಚು ಬರುತ್ತಿತ್ತು. ಮೊದ ಮೊದಲು ಪ್ರತಿ ಬಾಕ್ಸ್‌ಗೆ ₹ 150ರಿಂದ ₹ 160 ರೂಪಾಯಿ ಸಿಗುತ್ತಿತ್ತು. ಹಿಂದಿನ 10–12 ದಿನದಿಂದ ದರ ಕುಸಿದಿದ್ದು, 20–22 ಕೆ.ಜಿ.ತೂಕದ ಬಾಕ್ಸ್ ಒಂದಕ್ಕೆ ₹ 40ರಿಂದ ₹ 45 ರೂಪಾಯಿ ದರವಿದೆ. ಕೋಲಾರಕ್ಕೆ ಹಣ್ಣು ಒಯ್ದರೆ ಬಾಕ್ಸ್‌ ಒಂದಕ್ಕೆ ₹ 15ರಿಂದ
₹ 20 ರೂಪಾಯಿ ನಷ್ಟವಾಗುತ್ತದೆ. ಹೀಗಾಗಿ ಹಣ್ಣು ಕೀಳುವುದನ್ನು ನಿಲ್ಲಿಸಿದ್ದೇನೆ. ಹೊಲದಲ್ಲಿಯೇ ಹಣ್ಣು ಕೊಳೆತು ನೆಲಕ್ಕೆ ಬೀಳುತ್ತಿವೆ. ಪರಿಚಯದವರಿಗೆ ಪುಕ್ಕಟೆಯಾಗಿ ಕಿತ್ತುಕೊಂಡು ಹೋಗಿ ಎಂದರೆ ‘ಅಯ್ಯೋ ಪಾಪ’ ಎಂದುಕೊಂಡು ಹೋಗುತ್ತಾರೆ’ ಎಂದು ಬೇಸರಿಸಿದರು.

‘ಪಿಯು ಪಾಸಾದ ನಂತರ ಬಿಬಿಎಂಗೆ ಸೇರಿದ್ದೆ. ಆದರೆ, ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಮನಸ್ಸು ತುಡಿಯುತ್ತಿತ್ತು. ಹೀಗಾಗಿ ಓದು ನಿಲ್ಲಿಸಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡೆ. ತರಕಾರಿ ಬೆಳೆದಲ್ಲಿ ಕಡಿಮೆ ಅವಧಿಯಲ್ಲಿ ಹಣ ಗಳಿಸಬಹುದು ಎಂದು ಯೋಚಿಸಿದ್ದೆ. ಎರಡು ತಿಂಗಳ ಹಿಂದೆ ಪ್ರತಿ ಬಾಕ್ಸ್ ಟೊಮೆಟೊಗೆ ₹ 250ರಿಂದ ₹ 300 ಇತ್ತು. ಅಷ್ಟು ದರ ಸಿಕ್ಕಿದ್ದರೆ ಲಕ್ಷಗಟ್ಟಲೆ
ಹಣ ಕೈ ಸೇರುತ್ತಿತ್ತು. ನಮ್ಮ ಜಮೀನಿನ ಹಣ್ಣಿಗೆ ಬೇರೆಯವರದ್ದಕ್ಕಿಂತ ಎಂಟ್ಹತ್ತು ರೂಪಾಯಿ ಹೆಚ್ಚು ನೀಡುತ್ತಿದ್ದರು. ಒಂದೊಂದು ಬಳ್ಳಿಯಲ್ಲಿ 3–4 ಕೆ.ಜಿ. ಹಣ್ಣು ಹಿಡಿದಿವೆ. ಜಮೀನಿನಲ್ಲಿ ಕೊಳೆಯುತ್ತಿರುವ ಹಣ್ಣುಗಳನ್ನು ನೋಡಿದರೆ ಕರುಳು ಕಿವುಚಿ
ದಂತಾಗುತ್ತದೆ’ ಎಂದು ನೊಂದು ನುಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು