ಮಂಗಳವಾರ, ಸೆಪ್ಟೆಂಬರ್ 21, 2021
21 °C

ಲೈಂಗಿಕ ಅಲ್ಪಸಂಖ್ಯಾತೆ ಕೊಲೆ: ಆಟೊ ಚಾಲಕ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಲೈಂಗಿಕ ಅಲ್ಪಸಂಖ್ಯಾತೆ ಅಂಜಲಿ (27) ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮುತ್ತಯ್ಯನಹಟ್ಟಿ ಗ್ರಾಮದ ಆಟೊ ಚಾಲಕ ಮಧುಸೂದನ (24) ಎಂಬಾತನನ್ನು ಬಂಧಿಸಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಕೃತ್ಯಕ್ಕೆ ಬಳಸಿದ ಆಟೊ, ಅಂಜಲಿಯ ಮೊಬೈಲ್‌ ಜಪ್ತಿ ಮಾಡಲಾಗಿದೆ.

‘ಆರೋ‍ಪಿಯು ಆ.28ರಂದು ಮಧ್ಯಾಹ್ನ ಸಂತೆಹೊಂಡದಿಂದ ಇಂಗಳದಾಳ್‌ ಗೇಟಿನವರೆಗೆ ಪ್ರಯಾಣಿಕರಿಗೆ ಆಟೊ ಸೇವೆ ಒದಸಿದ್ದನು. ಅಲ್ಲಿಂದ ನಗರಕ್ಕೆ ಬರುವ ಬದಲು ಕ್ಯಾದಿಗೇರೆ ಗೇಟ್‌ ಕಡೆಗೆ ತೆರಳಿದ್ದನು. ಮೊದಲೇ ಪರಿಚಿತರಾಗಿದ್ದ ಅಂಜಲಿ ಅವರನ್ನು ರಾಮ್‌ದೇವ್ ಡಾಬಾ ಸಮೀಪ ಕೂರಿಸಿಕೊಂಡು ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆಟ್ರೋಲ್‌ ಬಂಕ್‌ ಹಿಂಬಾಗದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದನು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಅಂಜಲಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ ಆರೋಪಿ ಹಣಕಾಸಿನ ವಿಚಾರಕ್ಕೆ ಗಲಾಟೆ ತೆಗೆದಿದ್ದಾನೆ. ಹೆಚ್ಚಿನ ಹಣ ನೀಡದಿದ್ದರೆ ಲೈಂಗಿಕ ಕ್ರಿಯೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಮಾನ ಹರಾಜು ಹಾಕುವುದಾಗಿ ಅಂಜಲಿ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಹೆದರಿದ ಆರೋಪಿ ಅಂಜಲಿಯ ಕೊಲೆಗೆ ಸಂಚು ರೂಪಿಸಿದ್ದನು’ ಎಂದು ಪೊಲೀಸರು ತಿಳಿಸಿದ್ದಾರೆ.

ಅಂಜಲಿಯನ್ನು ಪುಸಲಾಯಿಸಿ ಹಣ ನೀಡುವುದಾಗಿ ನಂಬಿಸಿ ಗಮನ ಬೇರೆಡೆ ಸೆಳೆದಿದ್ದಾನೆ. ಬಳಿಕ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದನು. ಅಂಜಲಿ ಬಳಿ ಇದ್ದ ಮೊಬೈಲ್‌ ಹಾಗೂ ಬ್ಯಾಗ್‌ ಕಿತ್ತುಪರಾರಿಯಾಗಿದ್ದನು. ಜಮೀನಿನಲ್ಲಿ ಅಪರಿಚಿತ ಶವ ಪತ್ತೆಯಾಗಿರುವ ಬಗ್ಗೆ ನರೇಹಾಳ್‌ ಗ್ರಾಮದ ಕರಿಯಪ್ಪ ಎಂಬುವರು ಆ.30ರಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತೆರಳಿದ ಪೊಲೀಸರಿಗೆ ಲೈಂಗಿಕ ಅಲ್ಪಸಂಖ್ಯಾತೆ ಕೊಲೆ ಆಗಿರುವುದು ಗೊತ್ತಾಗಿತ್ತು.

ಬೆಂಗಳೂರು ರಸ್ತೆಯ ಗಾಂಧಿನಗರದ ಸರ್ಕಾರಿ ಶಾಲೆ ಸಮೀಪ ನೆಲೆಸಿದ್ದ ಅಂಜಲಿ ಆ.28ರಂದು ಮನೆಯಿಂದ ಹೊರ ಹೋದವರು ಮತ್ತೆ ಮರಳಿರಲಿಲ್ಲ. ಪರಿಚಯಸ್ಥರ ಊರುಗಳಲ್ಲಿ ಹುಡುಕಾಟ ನಡೆಸಿದ ಲೈಂಗಿಕ ಅಲ್ಪಸಂಖ್ಯಾತರು ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು