ಶನಿವಾರ, ಏಪ್ರಿಲ್ 4, 2020
19 °C
ರಸ್ತೆಗೆ ಇಳಿಯದ ಕೆಎಸ್‌ಆರ್‌ಟಿಸಿ ಬಸ್‌, ಸಂಚಾರ ಪ್ರಯಾಸ

ಚಿತ್ರದುರ್ಗ | ಖಾಸಗಿ ಬಸ್‌ಗೆ ಮುಗಿಬಿದ್ದ ಪ್ರಯಾಣಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (ಕೆಎಸ್‌ಆರ್‌ಟಿಸಿ) ಬಸ್‌ಗಳು ಸೋಮವಾರ ರಸ್ತೆಗೆ ಇಳಿಯಲಿಲ್ಲ. ಹೀಗಾಗಿ, ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸಲು ಜನರು ಮುಗಿಬಿದ್ದಿದ್ದರು.

ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ರಸ್ತೆಗೆ ಇಳಿಸದಿರಲು ಸರ್ಕಾರ ನಿರ್ಧರಿಸಿತ್ತು. ಆದರೆ, ಖಾಸಗಿ ಬಸ್‌ಗಳು ಯಾವ ನಿರ್ಬಂಧವೂ ಇಲ್ಲದೇ ಸಂಚಾರಿಸಿದವು. ಇದರಿಂದ ಖಾಸಗಿ ಬಸ್‌ ನಿಲ್ದಾಣ ಜನಜಂಗುಳಿಯಿಂದ ತುಂಬಿತ್ತು.

ಯುಗಾದಿ ಹಬ್ಬದ ಖರೀದಿಗೆ ಗ್ರಾಮೀಣ ಪ್ರದೇಶದ ಜನರು ಕೋಟೆನಗರಿಗೆ ಬಂದಿದ್ದರು. ಖರೀದಿಯನ್ನು ಮುಗಿಸಿ ಊರುಗಳಿಗೆ ತೆರಳಲು ಪರದಾಡಿದರು. ಆಗೊಮ್ಮೆ ಈಗೊಮ್ಮೆ ತೆರಳುತ್ತಿದ್ದ ಖಾಸಗಿ ಬಸ್‌ಗಳ ಒಳತೂರಲು ಪ್ರಯಾಸಪಟ್ಟರು. ಬಸ್‌ ಟಾಪ್‌ ಮೇಲೆ ಹಲವರು ಕುಳಿತು ಪ್ರಯಾಣ ಬೆಳೆಸಿದರು.

‘ಜನತಾ ಕರ್ಫ್ಯೂ’ ಅಂಗವಾಗಿ ಭಾನುವಾರ ಯಾವುದೇ ಬಸ್‌ಗಳು ರಸ್ತೆಗೆ ಇಳಿದಿರಲಿಲ್ಲ. ಸೋಮವಾರ ಕೂಡ ಬಸ್‌ಗಳು ಸಂಚಾರ ಆರಂಭಿಸುವುದು ಅನುಮಾನ ಎನ್ನಲಾಗಿತ್ತು. ಆದರೆ, ಬೆಳಿಗ್ಗೆ 6 ಗಂಟೆಯಿಂದಲೇ ಖಾಸಗಿ ಬಸ್‌ಗಳು ನಿರಾತಂಕವಾಗಿ ಸಂಚಾರಿಸಿದವು. ಹಿರಿಯೂರು, ಚಳ್ಳಕೆರೆ ಹಾಗೂ ಹೊಳಲ್ಕೆರೆಗೆ ತೆರಳುವ ಟೆಂಪೊಗಳು ಪ್ರಯಾಣಿಕರಿಂದ ತುಂಬಿದ್ದವು.

ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗೂ ಖಾಸಗಿ ಬಸ್‌ಗಳು ಸೇವೆ ಒದಗಿಸಿದವು. ಈ ಬಸ್‌ಗಳ ಸಂಖ್ಯೆ ವಿರಳವಾಗಿದ್ದರಿಂದ ಬಹುತೇಕ ಎಲ್ಲವೂ ಭರ್ತಿಯಾಗಿದ್ದವು. ಟ್ಯಾಕ್ಸಿ, ದ್ವಿಚಕ್ರ ವಾಹನಗಳಲ್ಲಿಯೂ ಕೆಲವರು ಪ್ರಯಾಣ ಬೆಳೆಸಿದರು. ಹೊಸಪೇಟೆಗೆ ತೆರಳುವ ರಾಷ್ಟ್ರೀಯ ಹೆದ್ದಾರಿ–13, ತುರುವನೂರು ಗೇಟ್‌, ಚಳ್ಳಕೆರೆ ಗೇಟ್‌ಗಳಲ್ಲಿ ಸಾರ್ವಜನಿಕ ವಾಹನಗಳಿಗೆ ನೂರಾರು ಜನರು ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)