ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಹರಿದು ಇಬ್ಬರು ಮಹಿಳೆಯರು ಸಾವು: ತಬ್ಬಲಿ ಮಕ್ಕಳಿಗೆ ಸಮುದಾಯವೇ ಆಸರೆ

ತಾಯಿ ನಿರೀಕ್ಷೆಯಲ್ಲಿ ಹಸುಗೂಸು
Last Updated 17 ಡಿಸೆಂಬರ್ 2021, 3:08 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ಯಾಟೆಗೆ ಹೋದ ತಾಯಿ ಮನೆಗೆ ಮರಳುವ ನಿರೀಕ್ಷೆಯಲ್ಲಿರುವ ಮೂರು ವರ್ಷದ ಬಾಲಕಿ. ತಾಯಿ ಎದೆಹಾಲಿಗೆ ಹಂಬಲಿಸಿ ಅಳುತ್ತಿರುವ ಹಸುಗೂಸು. ಕುಟುಂಬಕ್ಕೆ ಆಸರೆಯಾಗಿದ್ದ ಅಮ್ಮ ಇನ್ನಿಲ್ಲ ಎಂಬ ವಾಸ್ತವ ಕಂಡು ಆಘಾತಕ್ಕೊಳಗಾದ ಮಕ್ಕಳು. ಇವರನ್ನು ನೋಡಿ ಮರುಗುತ್ತಿರುವ ಗೋಸಾಯಿ ಸಮುದಾಯ.

ಇದು ಚಿತ್ರದುರ್ಗದ ವೆಂಕಟೇಶ್ವರ ಬಡಾವಣೆಯಲ್ಲಿ ಗುರುವಾರ ಕಂಡುಬಂದ ದೃಶ್ಯ. ಚಿಂದಿ ಆಯಲು ಹೋಗಿ ರೈಲಿಗೆ ಬಲಿಯಾದ ಇಬ್ಬರು ಮಹಿಳೆಯರ ಕುಟುಂಬದ ಸ್ಥಿತಿ. ಜಿಲ್ಲಾ ಆಸ್ಪತ್ರೆಯ ಶವಾಗಾರದಿಂದ ಬರುವ ಮೃತದೇಹಗಳಿಗೆ ಕಾಯುತ್ತ ಕಂಬನಿ ಸುರಿಸುತ್ತ ಸಂಬಂಧಿಕರು ಕುಳಿತಿದ್ದರು.

ಕನಕನಗರ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಿರುವ ರೈಲ್ವೆ ಮೇಲ್ಸೇತುವೆ ಬಳಿ ಬುಧವಾರ ಸಂಭವಿಸಿದ ರೈಲು ಅಪಘಾತದಲ್ಲಿ ವೆಂಕಟೇಶ್ವರ ಬಡಾವಣೆಯ ನೇತ್ರಾ (25) ಹಾಗೂ ಸುಶೀಲಮ್ಮ (40) ಮೃತಪಟ್ಟಿದ್ದಾರೆ. ನೇತ್ರಾ ಅವರಿಗೆ ಒಂದು ವರ್ಷದ ಗಂಡು ಹಾಗೂ ಮೂರು ವರ್ಷದ ಹೆಣ್ಣು ಮಗು ಇದೆ. ಸುಶೀಲಮ್ಮ ಅವರಿಗೆ 18 ವರ್ಷದ ಪುತ್ರ, 14 ಮತ್ತು 12 ವರ್ಷದ ಪುತ್ರಿಯರು ಇದ್ದಾರೆ.

‘ಊಟಕ್ಕೆ ಅನ್ನ, ಸಾಂಬಾರು ತಯಾರಿಸಿ ಬೆಳಿಗ್ಗೆ 8ಕ್ಕೆ ಅಮ್ಮ ಮನೆಯಿಂದ ಹೊರಟರು. ನಾನು ಆಗಷ್ಟೇ ಎದ್ದು ಶಾಲೆಗೆ ಸಿದ್ಧಳಾಗುತ್ತಿದ್ದೆ. ಮಧ್ಯಾಹ್ನ ಮನೆಗೆ ಬರುವುದಾಗಿ ಅಮ್ಮ ತಿಳಿಸಿದ್ದರು. ಅಕ್ಕ ಹಾಗೂ ನಾನು ಇಬ್ಬರೂ ಶಾಲೆಗೆ ಹೋಗಿದ್ದೆವು. ಆದರೆ, ಅಮ್ಮ ಮನೆಗೆ ಮರಳಲೇ ಇಲ್ಲ...’ ಎಂದು ಸುಶೀಲಮ್ಮ ಅವರ ಕಿರಿಯ ಪುತ್ರಿ ಸಂಧ್ಯಾ ಗದ್ಗದಿತಳಾದಳು.

ಸುಶೀಲಮ್ಮ ಅವರದು ಚಿಕ್ಕ ಸಂಸಾರ. ಪತಿ ಸುಬ್ಬರಾಯ ಗೋಸಾಯಿ ಅನಾರೋಗ್ಯದಿಂದ ಹಲವು ವರ್ಷಗಳ ಹಿಂದೆಯೇ ಅಗಲಿದ್ದಾರೆ. ಪತಿ ಕೊನೆಯುಸಿರೆಳೆದ ಬಳಿಕ ಕುಟುಂಬಕ್ಕೆ ಸುಶೀಲಮ್ಮನೇ ಆಸರೆಯಾಗಿದ್ದರು. ನಿತ್ಯ ಚಿಂದಿ ಆಯ್ದು ಕುಟುಂಬ ಸಾಗಿಸುತ್ತಿದ್ದರು. ಬೆಳಿಗ್ಗೆ 8ಕ್ಕೆ ಮನೆಯಿಂದ ಹೊರಟರೆ ಮಧ್ಯಾಹ್ನ 3ಕ್ಕೆ ಮರಳುತ್ತಿದ್ದರು. ಇದರಿಂದ ಸರಿಸುಮಾರು ₹ 300 ಸಂಪಾದನೆ ಆಗುತ್ತಿತ್ತು. ಮನೆಯ ಅಗತ್ಯಗಳನ್ನು ಇದರಲ್ಲೇ ಈಡೇರಿಸಿಕೊಳ್ಳುತ್ತಿದ್ದರು.

ಸುಶೀಲಮ್ಮ ಅವರ ಪುತ್ರ ಅರ್ಜುನ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ್ದಾನೆ. ಚಿಂದಿ ಆಯುವ ಕೆಲಸ ಬಿಟ್ಟರೆ ಬೇರೆ ಇನ್ನೇನೂ ಗೊತ್ತಿಲ್ಲ. ಕುಟುಂಬದ ಹೊಣೆ ನಿಭಾಯಿಸುತ್ತಿದ್ದ ತಾಯಿ ಕಣ್ಣು ಮುಚ್ಚಿರುವುದು ದಿಗ್ಬ್ರಮೆ ಮೂಡಿಸಿದೆ. ಕಂಠದಿಂದ ಧ್ವನಿ ಹೊರಬರದಷ್ಟು ನಿತ್ರಾಣಗೊಂಡಿದ್ದರು.

‘ನಾವೆಲ್ಲ ಒಂದೇ ಸಮುದಾಯ. ಕರುಳಬಳ್ಳಿ ಸಂಬಂಧ ಬೆಸೆದುಕೊಂಡಿದೆ. ಸುಶೀಲಮ್ಮ ಅವರ ಮಕ್ಕಳನ್ನು ನಾವೇ ನೋಡಿಕೊಳ್ಳುತ್ತೇವೆ. ಅವರಿಗೆ ಅನಾಥ ಪ್ರಜ್ಞೆ ಬಾರದಂತೆ ಕಾಪಾಡುತ್ತೇವೆ’ ಎಂದಾಗ ಸುತ್ತ ನೆರೆದಿದ್ದ ಇತರರೂ ಧ್ವನಿಗೂಡಿಸಿದರು.

‘ಸೌದೆ ತರುವುದಾಗಿ ಹೇಳಿದ್ದರು’
‘ಅಡುಗೆಗೆ ಸೌಧೆ, ಕಿರಾಣಿ ಸಾಮಗ್ರಿ ತರುವುದಾಗಿ ನೆರೆಹೊರೆಯವರ ಬಳಿ ಹೇಳಿ ಪತ್ನಿ ತೆರಳಿದ್ದಳು. ಮರಳಿ ಬಾರದ ಲೋಕಕ್ಕೆ ಹೋಗುತ್ತಾಳೆ ಎಂಬುದು ಗೊತ್ತಿರಲಿಲ್ಲ...’ ಎಂದು ನೇತ್ರಾ ಅವರ ಪತಿ ಮಧುರಾಜ್‌ ಗದ್ಗದಿತರಾದರು.

‘ನಾನು ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತೇನೆ. ಪತ್ನಿಯನ್ನು ಎಂದಿಗೂ ಹೊರಗೆ ಕಳುಹಿಸುತ್ತಿರಲಿಲ್ಲ. ಮನೆಯ ಅಗತ್ಯಗಳನ್ನು ನಾನೇ ಪೂರೈಸುತ್ತಿದ್ದೆ. ನನಗೆ ಹೇಳದೇ ಪತ್ನಿ ಹೊರಹೋಗಿದ್ದಳು. ಬುಧವಾರ ಮಧ್ಯಾಹ್ನ ಮಾಹಿತಿ ತಿಳಿದು ಅಪಘಾತ ಸ್ಥಳಕ್ಕೆ ತೆರಳಿದೆ. ಪತ್ನಿಯ ಸ್ಥಿತಿ ಕಂಡು ದಿಕ್ಕು ತೋಚದಂತೆ ಆಯಿತು’ ಎಂದು ನೋವು ತೋಡಿಕೊಂಡರು.

ಚಿಂದಿ ಆಯುವುದೇ ಕಾಯಕ
ಚಿತ್ರದುರ್ಗ–ಚಳ್ಳಕೆರೆ ರಸ್ತೆಗೆ ಹೊಂದಿಕೊಂಡಿರುವ ವೆಂಕಟೇಶ್ವರ ಬಡಾವಣೆಯಲ್ಲಿ ಗೋಸಾಯಿ ಸಮುದಾಯದ 50 ಕುಟುಂಬಗಳಿವೆ. ಪುರುಷರು ಗುಜರಿ ಅಂಗಡಿಯಲ್ಲಿ ಕೆಲಸ ಮಾಡಿದರೆ ಮಹಿಳೆಯರು ಮತ್ತು ಮಕ್ಕಳು ಚಿಂದಿ ಆಯುತ್ತಾರೆ. ಪ್ಲಾಸ್ಟಿಕ್‌, ಕಬ್ಬಿಣ, ತಗಡು, ರಟ್ಟು, ಚೀಲ, ಕಾಗದ ಹೀಗೆ ಸಿಗುವುದೆಲ್ಲವನ್ನೂ ಆಯ್ದು ಗುಜರಿಗೆ ಹಾಕುತ್ತಾರೆ. ಬೆಳಿಗ್ಗೆ 8ರಿಂದ ಮಧ್ಯಾಹ್ನ 3ರ ವರೆಗೆ ಈ ಕಾಯಕ ಮಾಡಿದರೆ ₹ 250ರಿಂದ ₹ 400 ಸಿಗುತ್ತದೆ. ‘ಮೂಲ ಮಹಾರಾಷ್ಟ್ರವಾದರೂ ತಾತನ ಕಾಲದಿಂದ ಕರ್ನಾಟಕದಲ್ಲಿಯೇ ನೆಲೆಸಿದ್ದೇವೆ. ಚಿಂದಿ ಆಯುವುದು, ಗುಜರಿ ಕೆಲಸ ಮಾಡುವುದು ಬಿಟ್ಟರೆ ಬೇರೆ ಕಾಯಕ ಗೊತ್ತಿಲ್ಲ. ರೈಲ್ವೆ ಹಳಿಯ ಮೇಲೆ ನೀರಿನ ಬಾಟಲಿಗಳು ಹೆಚ್ಚಾಗಿ ಬಿದ್ದಿರುತ್ತವೆ. ಕೆ.ಜಿಗೆ ₹ 25 ಸಿಗುತ್ತದೆ. ಹೀಗಾಗಿ, ಇಬ್ಬರು ಮಹಿಳೆಯರು ರೈಲ್ವೆ ಹಳಿ ಸಮೀಪ ಚಿಂದಿ ಆಯುತ್ತಿದ್ದರು. ಹೇಗೆ ಅಪಘಾತಕ್ಕೆ ಬಲಿಯಾದರೂ ಎಂಬುದೇ ಯಕ್ಷ ಪ್ರಶ್ನೆ’ ಎಂದು ನೇತ್ರಾ ಅವರ ಮಾವ ರವಿ ಗೋಸೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT