ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಯಕನಹಟ್ಟಿ ಬಂದ್‌ಗೆ ಅಭೂತಪೂರ್ವ ಬೆಂಬಲ

Published 13 ಫೆಬ್ರುವರಿ 2024, 14:25 IST
Last Updated 13 ಫೆಬ್ರುವರಿ 2024, 14:25 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತ್ವರಿತಗತಿಯ ಅನುಷ್ಠಾನಕ್ಕಾಗಿ ಒತ್ತಾಯಿಸಿ ನಾಯಕನಹಟ್ಟಿ ಹೋಬಳಿ ನೀರಾವರಿ ಮತ್ತು ಸಾಮಾಜಿಕ ಹೋರಾಟ ಸಮಿತಿ ಸೇರಿ ವಿವಿಧ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ನಾಯಕನಹಟ್ಟಿ ಬಂದ್‌ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.

ಬೆಳಿಗ್ಗೆ 6ರಿಂದ ಸಂಜೆ 5ರವರೆಗೆ ಹೂವು, ಹಣ್ಣು, ಸೊಪ್ಪು ತರಕಾರಿ ಅಂಗಡಿಗಳು ಸೇರಿ ಎಲ್ಲಾ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಪಟ್ಟಣದಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತು. 9 ಗಂಟೆ ನಂತರ ರೈತಸಂಘ, ಕರವೇ, ಕೆಆರ್‌ಎಸ್ ಪಕ್ಷ, ಮಾದಿಗ ಸೇವಾ ಟ್ರಸ್ಟ್, ವರ್ತಕರ ಸಂಘ, ಖಾಸಗಿ ಶಾಲೆಗಳ ಒಕ್ಕೂಟ, ಖಾಸಗಿ ಬಸ್‌ ಮಾಲೀಕರ ಸಂಘ ಸೇರಿ 35ಕ್ಕೂ ಹೆಚ್ಚು ಸಂಘಟನೆಗಳ ಕಾರ್ಯಕರ್ತರು ಬಂದ್ ಬೆಂಬಲಿಸಿ ಬೀದಿಗಿಳಿದರು.

ಬೆಳಿಗ್ಗೆ 10ಗಂಟೆಗೆ ವಾಲ್ಮೀಕಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಕಾರರು ಬಂದ್ ಬೆಂಬಲಿಸುವಂತೆ ಸಾರ್ವಜನಿಕರಲ್ಲಿ ಧ್ವನಿವರ್ಧಕದ ಮೂಲಕ ಮನವಿ ಮಾಡಿದರು. ಪಟ್ಟಣದ ವಿಧಧ ಅಂಗಡಿಗಳು, ಹೋಟೆಲ್‌ಗಳ ಮಾಲೀಕರು ಸ್ವಯಂಪ್ರೇರಿತರಾಗಿ ಬಾಗಿಲು ಮುಚ್ಚಿದರು. ಪಾದಗಟ್ಟೆ, ವಾಲ್ಮೀಕಿ ವೃತ್ತ, ಹಟ್ಟಿಮಲ್ಲಪ್ಪನಾಯಕ ವೃತ್ತದಲ್ಲಿ ಜಮಾಯಿಸಿ ಘೋಷಣೆ ಕೂಗಿದರು. ಚಿತ್ರದುರ್ಗ, ಬಳ್ಳಾರಿ, ಬೆಂಗಳೂರು, ರಾಯದುರ್ಗ, ಕಲ್ಯಾಣದುರ್ಗ, ಹೊಸಪೇಟೆ, ದಾವಣಗೆರೆ ಮಾರ್ಗಗಳನ್ನು ಪ್ರತಿಭಟನಕಾರರು ಬ್ಯಾರಿಕೇಡ್‌ಗಳ ಮೂಲಕ ಮುಚ್ಚಿದ್ದರು.

ಖಾಸಗಿ ಬಸ್ ಸಂಚಾರ, ಆಟೊ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ಗಳು ಪಟ್ಟಣ ಪ್ರವೇಶಿಸಲಿಲ್ಲ. ಬೇರೆ ಊರುಗಳಿಗೆ ಸಂಪರ್ಕ ಕಲ್ಪಿಸಿದ್ದ ಬಸ್‌ಗಳು ಪಟ್ಟಣದ ಹೊರಭಾಗದಲ್ಲಿ ಸಂಚರಿಸಿದವು. ಪಟ್ಟಣ ಮತ್ತು ಸುತ್ತಮುತ್ತಲ ಹಳ್ಳಿಗಳಿಗೆ ತೆರಳುವ ಆಟೊಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಬಂದ್‌ ಹಿನ್ನೆಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದವು. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.

11 ಗಂಟೆಗೆ ಹಟ್ಟಿಮಲ್ಲಪ್ಪನಾಯಕ ಆವರಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪಾದಗಟ್ಟೆ, ತೇರುಬೀದಿ, ಹಟ್ಟಿಮಲ್ಲಪ್ಪನಾಯಕ ವೃತ್ತ, ಒಳಮಠ ದಏಗುಲ, ನಾಗರಕಟ್ಟೆ, ಅಂಬೇಡ್ಕರ್ ವೃತ್ತ, ಜೆ.ಸಿ.ರಸ್ತೆ ಮಾರ್ಗವಾಗಿ ವಾಲ್ಮೀಕಿವೃತ್ತವನ್ನು ತಲುಪಿ ಅಲ್ಲಿ ಬಹಿರಂಗ ಸಮಾವೇಶ ನಡೆಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಬಹಿರಂಗ ಸಮಾವೇಶದಲ್ಲಿ ಜೆ.ಯಾದವರೆಡ್ಡಿ, ಚಿಕ್ಕಪ್ಪನಹಳ್ಳಿ ಷಣ್ಮುಖ, ಬಾಲರಾಜ್, ಬಂಡೆಕಪಿಲೆ ಓಬಣ್ಣ, ಸೈಯದ್‌ ಅನ್ವರ್, ಜಿ.ಬಿ.ಮುದಿಯಪ್ಪ, ರೈತ ಮುಖಂಡ ಕೆ.ಪಿ.ಭೂತಯ್ಯ, ರೆಡ್ಡಿಹಳ್ಳಿ ವೀರಣ್ಣ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಎನ್‌ಐಎಮ್‌ಡಿ ಮನ್ಸೂರ್, ಎಸ್.ಟಿ.ಬೋರಸ್ವಾಮಿ, ಬಸವರಾಜ್ ಮಾತನಾಡಿದರು.

ಪ್ರಮುಖ ಬೇಡಿಕೆಗಳು

  • ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭದ್ರಾ ಮೇಲ್ದಂಡೆ ಯೋಜನೆಗೆ ಅಗತ್ಯ ಅನುದಾನ ಬಿಡುಗಡೆಗೊಳಿಸಬೇಕು.

  • ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು.

  • ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ತ್ವರಿತಗತಿಯಲ್ಲಿ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಬೇಕು.

  • ರೇಖಲಗೆರೆ ಫೀಡರ್‌ ಚಾನಲ್ ಪುನಶ್ಚೇತನಗೊಳಿಸಬೇಕು.

ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಮಾನ್ಯತೆ ನೀಡುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಈಗ ನುಣಚಿಕೊಳ್ಳುತ್ತಿದೆ. ಅನುದಾನವನ್ನೂ ಬಿಡುಗಡೆ ಮಾಡದೆ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ.
ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ, ಹಟ್ಟಿಮಲ್ಲಪ್ಪನಾಯಕ ಸಂಘದ ಅಧ್ಯಕ್ಷ
ಬಂದ್‌ನ ಹಿನ್ನೆಲೆಯಲ್ಲಿ ನಾಯಕನಹಟ್ಟಿ ಪಟ್ಟಣದ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು
ಬಂದ್‌ನ ಹಿನ್ನೆಲೆಯಲ್ಲಿ ನಾಯಕನಹಟ್ಟಿ ಪಟ್ಟಣದ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT