ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ: ಇಲಿ, ಹೆಗ್ಗಣಗಳ ಆಶ್ರಯತಾಣವಾದ ವಾಲ್ಮೀಕಿ ಭವನ

‘ಒಳಗೆ ತಳಕು ಹೊರಗೆ ಹುಳುಕು’ ಸ್ಥಿತಿಯಲ್ಲಿ ಕಟ್ಟಡ; ಪ್ರವೇಶದ್ವಾರದಲ್ಲಿ ದುರ್ವಾಸನೆ, ಅವೈಜ್ಞಾನಿಕ ಕಾಮಗಾರಿ
Published : 14 ಸೆಪ್ಟೆಂಬರ್ 2024, 6:36 IST
Last Updated : 14 ಸೆಪ್ಟೆಂಬರ್ 2024, 6:36 IST
ಫಾಲೋ ಮಾಡಿ
Comments

ಚಿತ್ರದುರ್ಗ: ನಗರದ ಹೃದಯಭಾಗ ಮದಕರಿ ವೃತ್ತದಲ್ಲಿ ಮುಗಿಲೆತ್ತರಕ್ಕೆ ಬೆಳೆದಂತೆ, ಹೈಟೆಕ್‌ ಮಾಲ್‌ನಂತೆ ಕಾಣುವ ಮಹರ್ಷಿ ವಾಲ್ಮೀಕಿ ಭವನ ನೋಡುಗರ ಗಮನ ಸೆಳೆಯುತ್ತದೆ. ಆದರೆ, ಕಟ್ಟಡದ ಕಾಂಪೌಂಡ್‌ ಪ್ರವೇಶಿಸಿದರೆ ಅಲ್ಲಿಯ ದುಃಸ್ಥಿತಿಯ ದರ್ಶನವಾಗುತ್ತದೆ. ಇಲಿ, ಹೆಗ್ಗಣಗಳ ಆಶ್ರಯತಾಣವಾಗಿರುವ ಭವನ ಕಳೆದೊಂದು ವರ್ಷದಿಂದ ಪಾಳು ಬಂಗಲೆಯಾಗಿದೆ.

ಪರಿಶಿಷ್ಟ ವರ್ಗಗಳ ಅಸ್ಮಿತೆಯಾಗಬೇಕಾಗಿದ್ದ ವಾಲ್ಮೀಕಿ ಭವನದ ಸ್ಥಿತಿ ‘ಹೊರಗೆ ತಳಕು, ಒಳಗೆ ಹುಳುಕು’ ಎಂಬಂತಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ₹10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಾಲ್ಮೀಕಿ ಭವನ ಉದ್ಘಾಟನೆಯಾಗಿ ಒಂದೂವರೆ ವರ್ಷ ಕಳೆದಿದೆ. ಉದ್ಘಾಟನೆ ದಿನದಿಂದ ಇಲ್ಲಿಯವರೆಗೂ ಭವನ ಬೀಗ ಹಾಕಿದ ಸ್ಥಿತಿಯಲ್ಲೇ ಇದೆ.

ಕಾಂಗ್ರೆಸ್‌ ಸರ್ಕಾರವಿದ್ದ 2017ರಲ್ಲಿ ವಾಲ್ಮೀಕಿ ಭವನದ ಕಾಮಗಾರಿ ಆರಂಭವಾಗಿತ್ತು. ಕುಂಟುತ್ತಲೇ ಸಾಗುತ್ತಿದ್ದ ಕಾಮಗಾರಿ 2023ರವರೆಗೂ ಪೂರ್ಣಗೊಳ್ಳಲಿಲ್ಲ. ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿದ್ದಾಗ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತರಾತುರಿಯಲ್ಲಿ ಅಪೂರ್ಣ ಕಟ್ಟಡವನ್ನೇ ಉದ್ಘಾಟನೆ ಮಾಡಿದರು. ಸಮಾಜದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳಿಗೂ ಮಾಹಿತಿ ನೀಡಿದೇ ಅಧಿಕಾರಿಗಳ ಸಮ್ಮುಖದಲ್ಲೇ ಉದ್ಘಾಟನೆ ನೆರವೇರಿಸಲಾಗಿತ್ತು.

‘ಇನ್ನೂ ಶೇ 30ರಷ್ಟು ಕಾಮಗಾರಿ ಬಾಕಿ ಉಳಿದಿದ್ದು ಇಲ್ಲಿಯವರೆಗೂ ಕೆಲಸವಾಗಿಲ್ಲ. ಭವನದ ಮುಖ್ಯದ್ವಾರ, ಗೇಟ್‌ ಬಂದ್ ಆಗಿದ್ದು, ಭವನವನ್ನು ನಿರ್ವಹಣೆ ಮಾಡುತ್ತಿಲ್ಲ. ನಿರ್ವಹಣಾ ಸಮಿತಿಯನ್ನೂ ಮಾಡಿಲ್ಲ. ಪ್ರಶ್ನೆ ಮಾಡಿದವರಿಗೆ ಕುಂಟುನೆಪ ಹೇಳುತ್ತಿರುವ ಅಧಿಕಾರಿಗಳೂ ಕೋಟ್ಯಂತರ ರೂಪಾಯಿ ಹಣ ಅವ್ಯವಹಾರ ನಡೆಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ಸಮಾಜದ ಮುಖಂಡರು ಒತ್ತಾಯಿಸುತ್ತಾರೆ.

‘ಜಿಲ್ಲೆಯ ಅಧಿಕಾರಿಗಳೇ ಇಲಿ, ಹೆಗ್ಗಣಗಳಾಗಿದ್ದು ಹಣವನ್ನು ಲೂಟಿ ಹೊಡೆದಿದ್ದಾರೆ. ಸಿನಿಮಾ ಥಿಯೇಟರ್‌ನಂತೆ ಕಾಮಗಾರಿ ಮಾಡಿ ಕಟ್ಟಡವನ್ನು ಹಾಳು ಮಾಡಿದ್ದಾರೆ. ನಾವು ಈ ಬಗ್ಗೆ ಮೊದಲೇ ಧ್ವನಿ ಎತ್ತಿದ್ದೆವು. ಆದರೂ ಅಧಿಕಾರಿಗಳು ನಮ್ಮ ಆಕ್ಷೇಪಕ್ಕೆ ಕಿವಿಗೊಡಲಿಲ್ಲ’ ಎಂದು ಮಾನವ ಬಂಧುತ್ವ ವೇದಿಕೆಯ ಮುಖಂಡ ಆಂಜಿನಪ್ಪ ಆರೋಪಿಸಿದರು.

200X 100 ಅಳತೆಯ ಜಾಗದಲ್ಲಿ ವಾಲ್ಮೀಕಿ ಭವನ ನಿರ್ಮಾಣವಾಗಿದ್ದು ಜಿಲ್ಲೆಯಲ್ಲಿ ಬೃಹತ್‌ ಸಭಾಂಗಣ, ಸಾಂಸ್ಕೃತಿಕ ತಾಣವಾಗುವ ಕನಸು ಹೊಂದಲಾಗಿತ್ತು. ಹಳೆಯ ನಗರಸಭೆ ಕಟ್ಟಡ ತೆರವುಗೊಳಿಸಿ ವಾಲ್ಮೀಕಿ ಭವನದ ಯೋಜನೆ ರೂಪಿಸಲಾಗಿತ್ತು. ಬೆಂಗಳೂರಿನ ಕಂಪನಿಯೊಂದಕ್ಕೆ ನಿರ್ಮಾಣ ಜವಾಬ್ದಾರಿ ನೀಡಲಾಗಿತ್ತು. ಆದರೆ ಕಾಮಗಾರಿ ಅಪೂರ್ಣಗೊಂಡಿದ್ದು ಗುತ್ತಿಗೆದಾರರು ಕಾಲ್ಕಿತ್ತಿದ್ದಾರೆ. ವಿಧಾನಸಭಾ ಚುನಾವಣೆ ವೇಳೆ ಸ್ಥಗಿತಗೊಂಡಿದ್ದ ಕಾಮಗಾರಿ ಈವರೆಗೂ ಆರಂಭವಾಗಿಲ್ಲ.

ಬೀಗ ಹಾಕಿರುವ ಕಾರಣ ಸುತ್ತಲೂ ಇಲಿ, ಹೆಗ್ಗಣ, ಹಾವು, ಹಲ್ಲಿಗಳು ಓಡಾಡುತ್ತಿವೆ. ಪ್ರವೇಶ ದ್ವಾರದಲ್ಲೇ ಚರಂಡಿಗಳು ದುರ್ವಾಸನೆ ಬೀರುತ್ತಿದ್ದು ಅಲ್ಲಿ ಜನರು ಮೂಗು ಮುಚ್ಚಿ ಓಡಾಡಬೇಕಾದ ಪರಿಸ್ಥಿತಿ ಇದೆ. ನಗರಸಭೆ ಕಚೇರಿ ಪಕ್ಕದಲ್ಲೇ ಇದ್ದರೂ ಭವನದ ಸುತ್ತಲೂ ಸ್ವಚ್ಛತೆ ಇಲ್ಲದಿರುವುದಕ್ಕೆ ಸಾರ್ವಜನಿಕರು ಆಶ್ರೋಕ ವ್ಯಕ್ತಪಡಿಸುತ್ತಾರೆ.

‘ಭವನದ ಊಟದ ಹಾಲ್‌ ಕಾಮಗಾರಿ ಸರಿಯಾಗಿಲ್ಲ. ಇಲ್ಲಿಯವರೆಗೂ ಭವನಕ್ಕೆ ನೀರಿನ ಸಂಪರ್ಕ ಕಲ್ಪಿಸಿಲ್ಲ. ಶೌಚಾಲಯಗಳಿಂದ ಯುಜಿಡಿಗೆ ಸಂಪರ್ಕವೂ ಇಲ್ಲ. ಯಾವುದೇ ಯೋಜನೆ ಇಲ್ಲದೇ ಕೇವಲ ಗೋಡೆಗಳನ್ನಷ್ಟೇ ಕಟ್ಟಿದ್ದಾರೆ. ಭವನಕ್ಕೆ ಸಾಂಸ್ಕೃತಿಕವಾದ ರೂಪ ಕೊಟ್ಟಿಲ್ಲ, ಬೀಮ್‌, ಆಸನಗಳ ಅಳವಡಿಕೆಯೂ ಅವೈಜ್ಞಾನಿಕವಾಗಿದೆ’ ಎಂದು ಮುಖಂಡರೊಬ್ಬರು ಆರೋಪಿಸಿದರು.

ಮುಗಿಲೆತ್ತರಕ್ಕೆ ನಿಂತಿರುವ ವಾಲ್ಮೀಕಿ ಭವನ ಅನಾಥ ಚುನಾವಣೆ ವೇಳೆ ತರಾತುರಿಯಲ್ಲಿ ಕಟ್ಟಡ ಉದ್ಘಾಟನೆ ತನಿಖೆಗೆ ಒಳಪಡಿಸುವಂತೆ ಸ್ಥಳೀಯರ ಒತ್ತಾಯ
ವಾಲ್ಮೀಕಿ ಭವನದ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಜಿಲ್ಲಾಧಿಕಾರಿ ಅನುಮತಿ ಪಡೆದು ಭವನವನ್ನು ಇಲಾಖೆಗೆ ಹಸ್ತಾಂತರ ಮಾಡಿಕೊಳ್ಳಲಾಗುವುದು. ನಂತರ ನಿರ್ವಹಣಾ ಸಮಿತಿ ರಚಿಸಲಾಗುವುದು
ದಿವಾಕರ್‌ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ
ಬೀಗದ ಕೀ ಯಾರ ಬಳಿ ಇದೆ?
ವಾಲ್ಮೀಕಿ ಭವನದ ಬಾಗಿಲು ತೆರೆಸಿ ಒಳಗಿನ ಸ್ಥಿತಿಯನ್ನು ವೀಕ್ಷಿಸಲು ನಡೆಸಿದ ಪ್ರಯತ್ನಗಳು ಫಲಕೊಡಲಿಲ್ಲ. ಭವನದ ಬೀಗದ ಕೀ ಯಾರ ಬಳಿ ಇದೆ ಎಂಬುದೇ ಅಧಿಕಾರಿಗಳಿಗೆ ಗೊತ್ತಿಲ್ಲ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ‘ಗುತ್ತಿಗೆ ಕಂಪನಿಯವರು ನಮಗೆ ಇನ್ನೂ ಹಸ್ತಾಂತರ ಮಾಡಿಲ್ಲ ಹೀಗಾಗಿ ನಮ್ಮ ಬಳಿ ಕೀ ಇಲ್ಲ’ ಎಂದರು. ಗುತ್ತಿಗೆದಾರರನ್ನು ಸಂಪರ್ಕಿಸಲು ಯತ್ನಿಸಿದಾಗ ಯಾರೂ ಕರೆ ಸ್ವೀಕಾರ ಮಾಡಲಿಲ್ಲ. ‘ಭವನದ ಬಾಗಿಲು ತೆರೆದರೆ ಒಳಗಿನ ಸ್ಥಿತಿ ತಿಳಿಯುತ್ತಿದೆ ಎಂಬ ಕಾರಣಕ್ಕೆ ಅಧಿಕಾರಿಗಳು ಯಾರಿಗೂ ಕೀ ಕೊಡುತ್ತಿಲ್ಲ. ಅಧಿಕಾರಿಗಳ ನಡೆ ಅನುಮಾನಾಸ್ಪದವಾಗಿದ್ದು ಜಿಲ್ಲಾಧಿಕಾರಿ ಮಧ್ಯಪ್ರವೇಶ ಮಾಡಿ ಭವನದ ಕಾಮಗಾರಿ ಪರಿಶೀಲಿಸಬೇಕು’ ಪರಿಶಿಷ್ಟ ವರ್ಗಗಳ ಮುಖಂಡರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT