ಗುರುವಾರ , ಜುಲೈ 29, 2021
24 °C
ಅಂತರ್ಜಾಲದಲ್ಲಿ ನಡೆದ ಮತ್ತೆ ಕಲ್ಯಾಣದ ಸಾರರೂಪದ ಕೃತಿ ಬಿಡುಗಡೆ

ವಚನ ಸಂವಿಧಾನ ಶ್ರೇಷ್ಠ: ಸಾಣೇಹಳ್ಳಿಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಣೇಹಳ್ಳಿ (ಹೊಸದುರ್ಗ): ‘ಶರಣರ ಸಂವಿಧಾನಕ್ಕೂ ಇಂದಿನ ನಮ್ಮ ಭಾರತದ ಸಂವಿಧಾನಕ್ಕೂ ತುಂಬಾ ಅಂತರವಿದೆ. ದೇಶದ ಸಂವಿಧಾನಕ್ಕಿಂತ ಶ್ರೇಷ್ಠ ಸಂವಿಧಾನ ವಚನ ಸಂವಿಧಾನ. ವಚನ ಸಂವಿಧಾನ ಇಡೀ ವಿಶ್ವದ, ಸಕಲಜೀವಾತ್ಮರ ಲೇಸನ್ನು ಬಯಸುವಂಥ ವಿಶಾಲ ತಳಹದಿಯುಳ್ಳದ್ದು’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ 112ನೇ ಸಂಪಾದಿತ ‘ವಚನ ಸಂವಿಧಾನ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಇಂದು ಶರಣರ ತತ್ವಗಳನ್ನು ಹೇಳುವ, ಕೇಳುವ ಜನ ಸಾಕಷ್ಟಿದ್ದಾರೆ. ಆದರೆ ಅದರಂತೆ ಬದುಕನ್ನು ಕಟ್ಟಿಕೊಳ್ಳುವವರು ವಿರಳವಾಗುತ್ತಿ
ದ್ದಾರೆ. ಬುದ್ಧಿ ಮತ್ತು ಹೃದಯ ಸಮ್ಮಿಲನವಾದಾಗ ಮಾತ್ರ ಶರಣರ ವಿಚಾರಗಳನ್ನು ಆಚಾರದಲ್ಲಿ ತರಲು ಸಾಧ್ಯವಾಗುವುದು. ಶರಣರ ಬದುಕು ಬರಹಗಳನ್ನು ಅರಿಯುವ ನಿಟ್ಟಿನಲ್ಲಿ ‘ವಚನ ಸಂವಿಧಾನ' ಮಹತ್ವದ ಕೃತಿ. ನಾವೆಲ್ಲರೂ ಭಾರತದ ಸಂವಿಧಾನದ ಆಶಯಗಳನ್ನು ತಿಳಿದುಕೊಂಡಿದ್ದೇವೆ. ವಚನಗಳ ಸಾರಸಂಗ್ರಹ ಎನ್ನುವಂತೆ ಈ ಕೃತಿ ಮೂಡಿಬಂದಿದೆ. 2020ರ ಆಗಸ್ಟ್ ತಿಂಗಳಲ್ಲಿ ಅಂತರ್ಜಾಲದಲ್ಲಿ ನಡೆದ ಮತ್ತೆ ಕಲ್ಯಾಣ ಕಾರ್ಯಕ್ರಮ
ದಲ್ಲಿ 30 ದಿನಗಳಲ್ಲಿ ಮೂವತ್ತೆರಡು ಜನ ವಿದ್ವಾಂಸರು ಮಾತನಾಡಿದ ಮಾತುಗಳ ಅಕ್ಷರರೂಪವೇ ಈ ಕೃತಿ’ ಎಂದು ತಿಳಿಸಿದರು.

ವಚನ ಸಂವಿಧಾನ ಕೃತಿ ಲೋಕಾರ್ಪಣೆಗೊಳಿಸಿದ ದಾವಣಗೆರೆ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ದಾದಾಪೀರ್ ನವಿಲೇಹಾಳ್, ‘ಕರ್ನಾಟಕದ ಇತಿಹಾಸದಲ್ಲಿ ಜರುಗಿ ಹೋದ 12ನೇ ಶತಮಾನ ಕೇವಲ ಅಂಕಿ-ಸಂಖ್ಯೆಗಳ, ಸಮಯದ ದಾಖಲೆಯಲ್ಲ. ಎಲ್ಲ ರೀತಿಯ ಮಾದರಿ, ಆದರ್ಶಗಳ ಕಾಲ. ಶರಣರ ಬದುಕಿನ ನೈತಿಕ ತಳಹದಿಯೇ ವಚನಗಳು. ಪಂಚೇಂದ್ರಿಯಗಳ ನಿಗ್ರಹವೇ ಎಲ್ಲ ಬಗೆಯ ತಾರತಮ್ಯಗಳನ್ನು ನಿವಾರಿಸುವ ತಂತ್ರಗಳು. ನಮ್ಮ ಸಂವಿಧಾನ ಜಾರಿಗೆ ಬಂದುದು 1950ರಲ್ಲಿ. ಆದರೆ, ಈ ಆಶಯಗಳಂತೆ 12ನೇ
ಶತಮಾನದಲ್ಲಿಯೇ ಬಸವಣ್ಣ ಮೊದಲಾದ ಶರಣರು ಹೇಳಿದ್ದರಲ್ಲದೆ ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಜಗತ್ತಿನ ಎಲ್ಲ ದೇಶಗಳ ಸಂವಿಧಾನಕ್ಕೆ ಬೇಕಾದ ತಾತ್ವಿಕ ನೆಲೆಗಟ್ಟು ವಚನಗಳಲ್ಲಿವೆ’ ಎಂದು ವಿವರಿಸಿದರು.

ಶಿವಸಂಚಾರದ ಎಚ್‌.ಎಸ್. ನಾಗರಾಜ್ ಮತ್ತು ಶರಣ್ ವಚನಗೀತೆಗಳನ್ನು ಹಾಡಿದರು. ಅಧ್ಯಾಪಕ ಎಚ್‌.ಎಸ್. ದ್ಯಾಮೇಶ್ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು