ಶನಿವಾರ, ಮಾರ್ಚ್ 25, 2023
28 °C
ಫ.ಗು. ಹಳಕಟ್ಟಿ ಜಯಂತಿಯಲ್ಲಿ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ವಚನ ಸಾಹಿತ್ಯಕ್ಕೆ ಹಳಕಟ್ಟಿ ಕೊಡುಗೆ ಅಪಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಕಾಲಗರ್ಭದಲ್ಲಿ ಹುದುಗಿಹೋಗಿದ್ದ ಅನರ್ಘ್ಯ ರತ್ನವಾದ ವಚನ ಸಾಹಿತ್ಯವನ್ನು 20 ವರ್ಷಗಳ ಕಾಲ ಕಷ್ಟಪಟ್ಟು ಶೋಧಿಸಿ, ಸಂಗ್ರಹಿಸಿ, ಪ್ರಕಟಿಸುವುದರ ಜತೆಗೆ ಪ್ರಚಾರಗೊಳಿಸಿದ ಫ.ಗು.ಹಳಕಟ್ಟಿ ಕೊಡುಗೆ ಅಪಾರ’ ಎಂದು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಭೋವಿ ಗುರುಪೀಠದಲ್ಲಿ ಶುಕ್ರವಾರ ನಡೆದ ಫ.ಗು. ಹಳಕಟ್ಟಿ ಅವರ ಜಯಂತಿ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದ ಅವರು, ‘ವಚನ ಸಾಹಿತ್ಯ ಜನಮಾನಸಕ್ಕೆ ತಲುಪಲು ಇವರ ಪರಿಶ್ರಮವೇ ಕಾರಣ’ ಎಂದರು.

‘ಸಂತೋಷದಿಂದ ಬಡತನ ಅಪ್ಪಿಕೊಂಡು ವಚನ ಪುಸ್ತಕಗಳ ಮುದ್ರಣಕ್ಕಾಗಿ ಇದ್ದ ಮನೆಯನ್ನು ಮಾರಾಟ ಮಾಡಿ ಹಿತಚಿಂತಕ ಮುದ್ರಣ ಸ್ಥಾಪಿಸುವ ಮೂಲಕ ವಚನ ಸಾಹಿತ್ಯ ಉಳಿವಿಗೆ ಅಡಿಪಾಯ ಹಾಕಿದರು. ಇದು ಅವರಲ್ಲಿದ್ದ, ಕಾಳಜಿ ಮತ್ತು ದೂರದೃಷ್ಠಿಗೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ಹೇಳಿದರು.

‘ವಚನ ಸಾಹಿತ್ಯ ಸಂಗ್ರಹ ಹಾಗೂ ಪ್ರಚಾರಕ್ಕಾಗಿ ಊರೂರು ತಿರುಗಿದರು. ಜನ ಅಷ್ಟೊಂದು ಆಸಕ್ತಿ ತೋರಿಸದಿದ್ದರೂ ಕರ್ತವ್ಯ ಪ್ರಜ್ಞೆಯನ್ನು ಮರೆಯಲಿಲ್ಲ. ಮನೆಯಲ್ಲಿ ಅನೇಕ ಕಷ್ಟಗಳು ಎದುರಾದರೂ ಎದೆಗುಂದಲಿಲ್ಲ. ರೈಲು ಪ್ರಯಾಣದ ವೇಳೆ ಕಾಲುಜಾರಿ ಪೆಟ್ಟಾಗಿ ಆರು ತಿಂಗಳು ಹಾಸಿಗೆಯಲ್ಲಿದ್ದಾಗಲೂ ವಚನ ಸಂಶೋಧನ ಕಾರ್ಯ ಮತ್ತು ಪ್ರಕಟಣೆ ನಿಲ್ಲಿಸಲಿಲ್ಲ. ಇದಕ್ಕಾಗಿ ಜೀವನವನ್ನೇ ಮೀಸಲಿಟ್ಟ ಮಹನೀಯ’ ಎಂದು ಬಣ್ಣಿಸಿದರು.

ಪ್ರಾಧ್ಯಾಪಕ ಡಾ. ಕರಿಯಪ್ಪ ಮಾಳಿಗೆ, ‘ಸಾಹಿತಿಯಾಗಿ, ಸಂಶೋಧಕರಾಗಿ, ವಕೀಲರಾಗಿ, ಪತ್ರಕರ್ತರಾಗಿ, ಗ್ರಂಥ ಸಂಪಾದಕರಾಗಿ, ಸಾಮಾಜಿಕ ಸಂಘಟನೆಗಳ ಮೂಲಕ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಶಾಶ್ವತ ನೆಲೆ ಕಟ್ಟಿಕೊಟ್ಟವರು ಫ.ಗು. ಹಳಕಟ್ಟಿ. ಅವರ ಸೇವೆ ಮತ್ತು ಸಾಧನೆ ಸರ್ವಕಾಲಕ್ಕೂ ಪ್ರಸ್ತುತ’ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಹೈಕೋರ್ಟ್‌ ಹಿರಿಯ ವಕೀಲ ಶಂಕರಪ್ಪ ಅವರನ್ನು ಸನ್ಮಾನಿಸಲಾಯಿತು. ಭೋವಿ ಗುರುಪೀಠದ ಸಿಇಒ ಗೋವಿಂದಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು