ಶನಿವಾರ, ನವೆಂಬರ್ 28, 2020
24 °C

ವಾಣಿ ವಿಲಾಸ ಜಲಾಶಯ: ನೂರು ಅಡಿ ತಲುಪಿದ ನೀರಿನ ಮಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯೂರು: ತಾಲ್ಲೂಕಿನ ವಾಣಿ ವಿಲಾಸ ಜಲಾಶಯದ ನೀರಿನ ಮಟ್ಟ ಸೋಮವಾರ 100.05 ಅಡಿ ತಲುಪಿದ್ದು, ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂತಸ ಮೂಡಿಸಿದೆ.

1897ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ತಾಯಿ ಕೆಂಪನಂಜಮ್ಮಣ್ಣಿ ಅವರ ಹೆಸರಿನಲ್ಲಿ ಈ ಜಲಾಶಯ ನಿರ್ಮಾಣ ಕಾರ್ಯ ಆರಂಭಿಸಿ, 1907ರಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದರು. 1911ರಿಂದ ಜಲಾಶಯದಲ್ಲಿ ನೀರಿನ ಸಂಗ್ರಹ ಆರಂಭವಾಗಿದ್ದು, ಪ್ರಸಕ್ತ ವರ್ಷದ್ದೂ ಸೇರಿ 58 ಬಾರಿ ಜಲಾಶಯದ ನೀರಿನ ಮಟ್ಟ ನೂರು ಅಡಿ ದಾಟಿದೆ.

ಅಣೆಕಟ್ಟೆ 1,330 ಅಡಿ ಉದ್ದ, 150 ಅಡಿ ಅಗಲ, 142 ಅಡಿ ಎತ್ತರ ಇದೆ. 29,985 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಜಲಾಶಯದ ಪೂರ್ಣಮಟ್ಟ 130 ಅಡಿ. ನೀರಿನ ಸಂಗ್ರಹಣಾ ಸಾಮರ್ಥ್ಯ 30 ಟಿಎಂಸಿ ಅಡಿ. ಜಲಾಶಯವು ಸಮುದ್ರಮಟ್ಟದಿಂದ 2050 ಅಡಿ ಎತ್ತರದಲ್ಲಿದ್ದು, 2075 ಚದರ ಮೈಲಿ ಕ್ಯಾಚ್‌ಮೆಂಟ್ ಪ್ರದೇಶ ಹೊಂದಿದೆ.

1933ರಲ್ಲಿ ಒಮ್ಮೆ ಮಾತ್ರ ಭರ್ತಿಯಾಗಿರುವ ಜಲಾಶಯದಲ್ಲಿ ಇದುವರೆಗೆ 11 ಬಾರಿ 120 ಅಡಿಗಿಂತ ಹೆಚ್ಚು ನೀರು ಶೇಖರಣೆ ಆಗಿದೆ. ಭದ್ರಾ ಜಲಾಶಯದಿಂದ ನಿತ್ಯ 450ರಿಂದ 550 ಕ್ಯುಸೆಕ್ ಒಳ ಹರಿವು ಇದ್ದು, ಇನ್ನೊಂದು ಪಂಪ್ ಚಾಲೂ ಮಾಡಿದರೆ 850ರಿಂದ 900 ಕ್ಯುಸೆಕ್ ನೀರು ಹರಿದು ಬರಲಿದೆ. ಮಾರ್ಚ್‌ವರೆಗೆ ನೀರು ಹರಿಸಿದರೆ ಈ ವರ್ಷವೂ 120 ಅಡಿ ದಾಟಬಹುದು ಎಂಬುದು ರೈತರ ಲೆಕ್ಕಾಚಾರ.

2019ರ ಜನವರಿ ತಿಂಗಳಲ್ಲಿ 102.50 ಅಡಿ ನೀರು ಸಂಗ್ರಹವಾಗಿತ್ತು. ಈ ವರ್ಷ ಡಿಸೆಂಬರ್ ಒಳಗೆ ಅಷ್ಟು ನೀರು ಬರಬಹುದು ಎಂದು ಅಂದಾಜಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು