ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ

Published 10 ಮೇ 2024, 5:04 IST
Last Updated 10 ಮೇ 2024, 5:04 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಲ್ಲಿನ ಮಾದಾರ ಚನ್ನಯ್ಯ ಗುರುಪೀಠಕ್ಕೆ 9 ವರ್ಷದ ಜಯಬಸವ ದೇವರು ಅವರನ್ನು ಶುಕ್ರವಾರ ವಟುವಾಗಿ ಸ್ವೀಕರಿಸಲಾಯಿತು. ಪೀಠಾಧ್ಯಕ್ಷ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು ಶುಕ್ರವಾರ ನೆರವೇರಿದವು.

ಬಸವೇಶ್ವರ ಜಯಂತಿ ದಿನದಂದು ಮಠದಲ್ಲಿ ವಟು ಸ್ವೀಕಾರ ಸಮಾರಂಭವನ್ನು ಆಯೋಜಿಸಲಾಗಿತ್ತು. ವಿಭೂತಿ ಧಾರಣೆ, ಇಷ್ಟಲಿಂಗ ಪೂಜೆ, ಪಾದಪೂಜೆ ಸೇರಿ ಬಸವ ತತ್ವದ ಪ್ರಕಾರ ಧಾರ್ಮಿಕ ವಿಧಿವಿಧಾನಗಳು ನಡೆದವು. ರಾಜ್ಯದ ಹಲವು ಮಠಾಧೀಶರು ಈ ಕ್ಷಣಕ್ಕೆ ಸಾಕ್ಷಿಯಾದರು. ಮುಂದಿನ ದಿನಗಳಲ್ಲಿ ವಟು ಮಠದ ಉತ್ತರಾಧಿಕಾರಿಯಾಗುವ ಸಾಧ್ಯತೆ ಇದೆ.

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಮಹಾಲಿಂಗ ಹಾಗೂ ಸವಿತಾ ದಂಪಯಿಯ ನಾಲ್ವರು ಮಕ್ಕಳಲ್ಲಿ ಬಸವಲಿಂಗ ದೇವರು ದ್ವಿತೀಯ ಪುತ್ರ. ಲಕನ್ ಇವರ ಪೂರ್ವಾಶ್ರಮದ ಹೆಸರು. ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಮುಂದಿನ ವ್ಯಾಸಂಗ ಆದಿಚುಂಚನಗಿರಿ ಮಠದ ಗುರುಕುಲದಲ್ಲಿ ನಡೆಯಲಿದೆ.

‘ಮಠದ ಬೆಳವಣಿಗೆಯಲ್ಲಿ ಇದೊಂದು ಸ್ಮರಣೀಯ ದಿನ. ಬಸವ ಜಯಂತಿ ದಿನವೇ ವಟು ಸ್ವೀಕಾರ ಮಾಡಿರುವುದು ಭಕ್ತರಲ್ಲಿ ಸಂತಸವುಂಟು ಮಾಡಿದೆ. ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ವಟು ಅಧ್ಯಯನ ಮಾಡಲಿದ್ದಾರೆ. ಮುರುಘಾ ಮಠ ಹಾಗೂ ಬಸವ ತತ್ವದ ಪರಂಪರೆ ಮುಂದುವರಿಯಲಿದೆ’ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.

‘ವಟು ಶಿಕ್ಷಣಕ್ಕೆ ಒತ್ತು ನೀಡಲಾಗುತ್ತದೆ. ಮಠಾಧೀಶರಿಗೆ ಅಗತ್ಯ ಇರುವ ಎಲ್ಲ ವಿದ್ಯೆಗಳನ್ನು ಕಲಿಸಿಕೊಡುವ ಜವಾಬ್ದಾರಿ ಮಠದ ಮೇಲಿದೆ. ಅಧ್ಯಯನದ ಬಳಿಕ ಇವರನ್ನು ಪೀಠದ ಉತ್ತರಾಧಿಕಾರಿಯಾಗಿ ಮಾಡುವ ತೀರ್ಮಾನ ಮಠದ ಟ್ರಸ್ಟ್ ಆಡಳಿತ ಮಂಡಳಿ ಹಾಗೂ ಸಮಾಜದ ಮುಖಂಡರಿಗೆ ಬಿಟ್ಟಿದ್ದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT