ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮಿಷಕ್ಕೆ ಬಲಿಯಾಗದೇ ಮತ ಚಲಾಯಿಸಿ: ಎಸ್‌.ಬಿ.ವಸ್ತಮಠ

Last Updated 25 ಜನವರಿ 2019, 13:10 IST
ಅಕ್ಷರ ಗಾತ್ರ

ಚಿತ್ರದುರ್ಗ: ಹಣ, ಹೆಂಡದಂತಹ ಆಮಿಷಗಳಿಗೆ ಬಲಿಯಾಗದೇ ಮತದಾನ ಮಾಡಿ. ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಎಲ್ಲ ಮತದಾರರ ಮೇಲಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ ತಿಳಿಸಿದರು.

ಇಲ್ಲಿನ ತರಾಸು ರಂಗಮಂದಿರದಲ್ಲಿ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಯುವಶಕ್ತಿ ಹೆಚ್ಚಾಗಿದೆ. ಮತದಾರರ ಸಂಖ್ಯೆಯು ಸಾಕಷ್ಟಿದೆ. 18 ವರ್ಷ ತುಂಬಿದವರಿಗೆ ಮತದಾನ ಮಾಡುವ ಹಕ್ಕನ್ನು ಸಂವಿಧಾನ ಕಲ್ಪಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳುವವರನ್ನು ಆಯ್ಕೆ ಮಾಡುವ ಸಂಪೂರ್ಣ ಜವಾಬ್ದಾರಿ ಮತದಾರರ ಮೇಲಿದೆ’ ಎಂದರು.

ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಾತನಾಡಿ, ‘ಮತದಾನದ ಮಹತ್ವ ಅರಿಯಬೇಕು. ಮತದಾರರ ಪಟ್ಟಿಗೆ ಹೆಸರು ನೋಂದಣಿ ಅಥವಾ ತಿದ್ದುಪಡಿ ಮಾಡಿಸಬೇಕು. ಮತದಾನದ ಹಕ್ಕನ್ನು ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಶಕ್ತಿ ತುಂಬಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ‘ದೇಶದಲ್ಲಿ ಶೇ 20 ರಿಂದ 30ರಷ್ಟು ಯುವ ಮತದಾರರಿದ್ದಾರೆ. ಉತ್ತಮ ನಾಯಕನನ್ನು ಆಯ್ಕೆ ಮಾಡುವ ಹೊಣೆ ಯುವ ಶಕ್ತಿಯ ಮೇಲಿದೆ. ಮತದಾರರ ಪಟ್ಟಿಗೆ ಸೇರ್ಪಡೆಯಾಗದೇ ಇರುವ 18 ವರ್ಷ ಮೇಲ್ಪಟ್ಟ ಎಲ್ಲ ಯುವ ಜನತೆ ಹೆಸರು ನೋಂದಾಯಿಸಿಕೊಳ್ಳಿ’ ಎಂದರು.

ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರಯುಕ್ತ ಜಿಲ್ಲಾ ವ್ಯಾಪ್ತಿಯ ಅಂಧ ಮತದಾರರಿಗೆ ಬ್ರೈಲ್ ಮತದಾರರ ಚೀಟಿಯನ್ನು ವಿತರಣೆ ಮಾಡಲಾಯಿತು. 2018ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಪ್ರಕ್ರಿಯೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನರಾದ ಹೊಳಲ್ಕೆರೆ ಕ್ಷೇತ್ರಾಧಿಕಾರಿ ಜಿ.ಎಸ್.ಅಶ್ವತ್ಥ್‌ ಯಾದವ್, ಚಿತ್ರದುರ್ಗ ವಿಚಕ್ಷಣ ದಳದ ಟಿ. ಜಯಂತ್, ಹಿರಿಯೂರು ಮತಗಟ್ಟೆ ಅಧಿಕಾರಿ ರಾಜಣ್ಣ, ಸ್ವಾಮಿ, ಹೊಳಲ್ಕೆರೆ ಎಲ್.ಮಹೇಶ್ ಅವರನ್ನು ಗೌರವಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯ್ ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆಂಥೋನಿ, ನಗರಸಭೆ ಪೌರಾಯುಕ್ತ ಚಂದ್ರಪ್ಪ, ತಹಶೀಲ್ದಾರ್ ಕಾಂತರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಅಂಗವಿಕಲರ ಕಲ್ಯಾಣಾಧಿಕಾರಿ ವೈಶಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT