ಹಿರಿಯೂರು: 19ರಿಂದ ಅಚ್ಚುಕಟ್ಟು ಪ್ರದೇಶಕ್ಕೆ ವಾಣಿವಿಲಾಸದಿಂದ ನೀರು
ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ಫೆಬ್ರುವರಿ 19ರಿಂದ ನೀರು ಹರಿಸಲಾಗುತ್ತದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿ ಪ್ರಕಟಣೆ ತಿಳಿಸಿದೆ.
ಕಳೆದ 8ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಚಿತ್ರದುರ್ಗದಲ್ಲಿ ನಡೆದಿದ್ದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅಚ್ಚುಕಟ್ಟು ಪ್ರದೇಶದ ತೋಟಗಾರಿಕೆ ಬೆಳೆಗಳಿಗೆ ನೀರು ಹರಿಸುವ ಬಗ್ಗೆ ಒಮ್ಮತದ ಅಭಿಪ್ರಾಯ ಮೂಡಿತ್ತು. ನೀರು ಬಿಡುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ ಎಂದು ತಿಳಿಸಿದೆ.
‘ಜಲಾಶಯದಲ್ಲಿ ಪ್ರಸ್ತುತ 105.60 ಅಡಿ ನೀರಿದ್ದು, ಮೊದಲು ಅಚ್ಚುಕಟ್ಟು ಪ್ರದೇಶದ ಕೊನೆ ಗಡಿಗೆ ನೀರನ್ನು ಕೊಡಲಾಗುತ್ತದೆ. ರೈತರು ಒಂದು ಸಾರಿ ಮಾತ್ರ ನೀರನ್ನು ಹಾಯಿಸಬೇಕು. ತೋಟಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ನಿಲ್ಲಿಸಬಾರದು. ಸೀಳು ಕಾಲುವೆಗಳನ್ನು ಚೊಕ್ಕವಾಗಿ ಇಟ್ಟುಕೊಳ್ಳಬೇಕು. ಎಡ–ಬಲ ನಾಲೆಗಳು ಮತ್ತು ಎತ್ತರದ ಕಾಲುವೆಗಳಲ್ಲಿ ಬರುವ ಪಂಪ್‌ಸೆಟ್ ಅಚ್ಚುಕಟ್ಟುದಾರರು ತಮ್ಮ ಸರದಿ ಬರುವವರೆಗೆ ನೀರನ್ನು ಎತ್ತಬಾರದು’ ಎಂದು ಸೂಚಿಸಲಾಗಿದೆ.
‘ಪ್ರತಿ ತೂಬುಗಳ ಬಳಿ ನೀರಾವರಿ ಸೌಡಿಗಳನ್ನು ಕಾವಲಿಗೆ ಹಾಕಿದ್ದು, ಕಾಲುವೆಯ ಗೇಟುಗಳನ್ನು ಬಲವಂತದಿಂದ ಕೀಳುವುದಾಗಲಿ, ಸಿಬ್ಬಂದಿಗೆ ತೊಂದರೆ ಕೊಡುವುದಾಗಲಿ, ಮಧ್ಯದಲ್ಲಿ ಯಾರಾದರೂ ನಾಲೆಗೆ ಅಡ್ಡ ಹಾಕಿ ನೀರು ಬಿಟ್ಟುಕೊಳ್ಳುವದನ್ನು ಮಾಡಬಾರದು. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ. ರೈತರು ತಮ್ಮ ಸರದಿ ಬಂದಾಗ ಹಗಲು–ರಾತ್ರಿ ಪಾಳಿಯಲ್ಲಿ ನೀರನ್ನು ಹಾಯಿಸಿಕೊಳ್ಳಬೇಕು’ ಎಂದು ತಿಳಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.