ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ| ಕಲ್ಲಂಗಡಿ ಬೆಳೆ ನೀರು ಪಾಲು: ಬೆಳೆಗಾರ ಕಂಗಾಲು

ಟೊಮೆಟೊ , ಬೂದುಗುಂಬಳ ಕಾಯಿ ಬಳ್ಳಿಗೂ ಅಪಾಯ
Last Updated 6 ಆಗಸ್ಟ್ 2022, 4:15 IST
ಅಕ್ಷರ ಗಾತ್ರ

ಚಳ್ಳಕೆರೆ: ನಾಲ್ಕೈದು ದಿನ ನಿರಂತರವಾಗಿ ಸುರಿದಮಳೆಯಿಂದಾಗಿ ತಾಲ್ಲೂಕಿನ ಪರಶುರಾಂಪುರ ಹೋಬಳಿ ಹುಲಿಕುಂಟೆ ಗ್ರಾಮದಲ್ಲಿ ಮಲ್ಚಿಂಗ್ ಪೇಪರ್ ವಿಧಾನದಲ್ಲಿ ಬೆಳೆದ ಕಲ್ಲಂಗಡಿ ಬೆಳೆ ಸಂಪೂರ್ಣವಾಗಿ ಜಲಾವೃತವಾಗಿದೆ.

ಮಳೆಯಿಂದಾಗಿ ಬೆಳೆಹಾನಿ ಯಾಗಿದ್ದು, ಬೆಳೆಗಾರರು ನಷ್ಟದ ಆತಂಕಕ್ಕೆ ಸಿಲುಕಿದ್ದಾರೆ. ಎರಡು ವರ್ಷಗಳಿಂದ ಈರುಳ್ಳಿಯ ಬೆಲೆ ಕುಸಿದಿದ್ದರಿಂದ ಈರುಳ್ಳಿಗೆ ಪರ್ಯಾಯವಾಗಿ ಈ ಭಾಗದಲ್ಲಿ ಕಲ್ಲಂಗಡಿ ಬೆಳೆಯಲಾಗಿತ್ತು.

ನಾಲ್ಕು ಎಕರೆ ಭೂಮಿಯಲ್ಲಿ ₹ 2.5 ಲಕ್ಷ ವ್ಯಯಿಸಿ ಕಲ್ಲಂಗಡಿ ಬೆಳೆ ಬೆಳೆದಿದ್ದೆವು. ಹೂವು ಮತ್ತು ಕಾಯಿ ಕಟ್ಟುವ ಹಂತದಲ್ಲಿ ಸುರಿದ ಸತತ ಮಳೆಯಿಂದ ಜಮೀನಿನಲ್ಲಿ ನೀರು ನಿಂತು ಬೆಳೆ ಹಾನಿಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದುರೈತ ಮಹಿಳೆ ನಾಗಮ್ಮ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

‘ಕಲ್ಲಂಗಡಿ ಬೆಳೆಯಲ್ಲಿ ಅಧಿಕ ಆದಾಯ ಪಡೆಯುವ ಸಲುವಾಗಿ ಮಲ್ಚಿಂಗ್ ಪೇಪರ್ ಹಾಗೂ ಹನಿ ನೀರಾವರಿ ಪದ್ಧತಿಯಲ್ಲಿ ಕೊಯಮತ್ತೂರು ವಿವೆಂಟಾ ತಳಿಯ ಬೀಜ ತರಿಸಿ ನಾಟಿ ಮಾಡಿಸಲಾಗಿತ್ತು.ಬೇಸಾಯ, ಕೂಲಿ, ರಸಗೊಬ್ಬರ ಹಾಗೂ ಔಷಧಕ್ಕೆ ಸೇರಿ ಬೆಳೆಗೆ ಒಟ್ಟು ₹ 2.5 ಲಕ್ಷ ಖರ್ಚಾಗಿತ್ತು. ಕನಿಷ್ಠ ₹ 5 ಲಕ್ಷದಿಂದ ₹ 6 ಲಕ್ಷ ಆದಾಯದ ನಿರೀಕ್ಷೆ ಇತ್ತು. ಆದರೆ ಈಗ ಎಲ್ಲವೂ ಹಾಳಾಗಿದೆ’ ಎಂದು ಅವರು ವಿವರಿಸಿದರು.

ಬೂದುಗುಂಬಳ ಹಾಗೂ ಕಲ್ಲಂಗಡಿ ಸೇರಿ ತಾಲ್ಲೂಕಿನಲ್ಲಿ ಒಟ್ಟು 80 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಲಾಗಿದೆ. ತಗ್ಗು ಪ್ರದೇಶದ ಹಣ್ಣು ಮತ್ತು ತರಕಾರಿ ಬೆಳೆಯಲ್ಲಿ ಮಳೆನೀರು ನಿಲ್ಲದಂತೆ ಹೊಲದಲ್ಲಿ ಬಸಿ ಕಾಲುವೆ ನಿರ್ಮಾಣ ಮಾಡಬೇಕು.ಮಳೆನೀರು ಜಮೀನಿನಲ್ಲಿ 2ರಿಂದ 3 ದಿನ ಹಾಗೇ ನಿಂತರೆ ಬೆಳೆ ಕೊಳೆಯುತ್ತದೆ. ಹಾಗಾಗಿ ಮಳೆ ಬಿದ್ದ ಮರುದಿನವೇ ನೀರನ್ನು ಹೊರಗೆ ಬಿಡಬೇಕು. ಕಾರ್ಬೋಡ್ರೈಜಿನಿಯಾ ಲೀಟರ್ ನೀರಿನೊಂದಿಗೆ ಬೆಳೆಗೆ ಸಿಂಪಡಿಸಬೇಕು. ಇದರಿಂದ ಉಷ್ಣಾಂಶ ಹೆಚ್ಚು ಉತ್ಪತ್ತಿಯಾಗಿ ಬೆಳೆಗೆ ಹರಡಬಹುದಾದ ಶೀಲಿಂಧ್ರ ಬಾಧೆ ಎದುರಾಗುವುದಿಲ್ಲ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ.ವಿರೂಪಾಕ್ಷಪ್ಪ ಸಲಹೆ ನೀಡಿದರು.

ತಾಲ್ಲೂಕಿನಲ್ಲಿ ಮಳೆಯಿಂದಾಗಿ ಕಲ್ಲಂಗಡಿ, ಬೂದುಗುಂಬಳ, ಟೊಮೆಟೊ ಹಾಗೂ ತರಕಾರಿ ಬೆಳೆ ಹಾನಿಯಾಗಿದ್ದು, ಕೂಡಲೇ ಸರ್ಕಾರದಿಂದ ಪರಿಹಾರ ಕೊಡಿಸಬೇಕು ಎಂದು ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ ಮನವಿ ಮಾಡಿದ್ದಾರೆ.

₹ 35 ಲಕ್ಷದ ವೆಚ್ಚದ ಕಲ್ಲಂಗಡಿ ನಷ್ಟ

5-6 ದಿನಗಳ ಕಾಲ ನಿರಂತರವಾಗಿ ಮಳೆ ಸುರಿದು ಪರಿಣಾಮವಾಗಿ ತಾಲ್ಲೂಕಿನಲ್ಲಿ ಬೆಳೆದ 45 ಹೆಕ್ಟೇರ್‌ ಪ್ರದೇಶದ ಕಲ್ಲಂಗಡಿ ಬೆಳೆಯಲ್ಲಿ 20 ಎಕರೆ ಜಮೀನಿನಲ್ಲಿ ಮಳೆ ನೀರು ತುಂಬಿಕೊಂಡಿದೆ. ಇದರಿಂದ ₹ 35 ಲಕ್ಷಕ್ಕೂ ಹೆಚ್ಚು ವೆಚ್ಚದ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ. ವಿರೂಪಾಕ್ಷಪ್ಪ ತಿಳಿಸಿದ್ದಾರೆ.

...

ಬೆಳೆಯಲ್ಲಿ ಮಳೆನೀರು ತುಂಬಿರುವ ಕಾರಣ ಕಲ್ಲಂಗಡಿ ಕೊಳೆಯುವ ಹಂತ ತಲುಪಿದೆ. ಸಾಲ ಮಾಡಿ ಬೆಳೆ ಬೆಳೆದಿದ್ದು, ನೀರು ಪಾಲಾಗಿದೆ. ಮುಂದಿನ ದಾರಿಯೇ ತೋರುತ್ತಿಲ್ಲ.

ನಾಗಮ್ಮ, ರೈತ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT