ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ನಿಗದಿಪಡಿಸಿ: ಭೂಮಿ ನೀಡುತ್ತೇವೆ

ರೈತರೊಂದಿಗೆ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಸಭೆ
Last Updated 10 ಆಗಸ್ಟ್ 2020, 12:29 IST
ಅಕ್ಷರ ಗಾತ್ರ

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ನೀಡಲು ಸಿದ್ಧರಿದ್ದೇವೆ. ಆದರೆ, ಭೂಮಿಗೆ ಬೆಲೆ ನಿಗದಿ ಪಡಿಸಿ, ಅಂತಿಮ ಅಧಿಸೂಚನೆ ಹೊರಡಿಸದ ಹೊರತು ಕಾಮಗಾರಿ ಆರಂಭಿಸಬೇಡಿ ಎಂದು ರೈತರು ಆಗ್ರಹಿಸಿದರು.

ಯೋಜನೆ ಸಂಬಂಧ ತಾಲ್ಲೂಕಿನಲ್ಲಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವ ಕುರಿತು ಭದ್ರಾ ಮೇಲ್ದಂಡೆ ಕಚೇರಿಯಲ್ಲಿಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಡೆಯಿತು.

ಪರಿಹಾರದ ಮೊತ್ತ ಎಷ್ಟು ಎಂದು ನಿಖರವಾಗಿ ಹೇಳಿದರೆ ಭೂಮಿ ನೀಡಲು ಅಭ್ಯಂತರವಿಲ್ಲ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ 8 ವರ್ಷದ ಹಿಂದೆ ಮದಕರಿಪುರದ ಕೆಲ ರೈತರ ಜಮೀನನ್ನು ವಶಪಡಿಸಿಕೊಳ್ಳಲಾಯಿತು. ಈವರೆಗೂ ಪರಿಹಾರ ಬಂದಿಲ್ಲ. ನ್ಯಾಯಾಲಯಕ್ಕೆ ಅಲೆದು ಹೈರಾಣಾಗಿದ್ದಾರೆ. ಸರ್ಕಾರದ ವಿರುದ್ಧ ಹೋರಾಡಲು ನಾವು ಸಿದ್ಧರಿಲ್ಲ. ಭೂಮಿ ಕೊಟ್ಟು ಪ್ರಾಣ ಕಳೆದುಕೊಳ್ಳುವ ಸ್ಥಿತಿ ತಂದುಕೊಳ್ಳಬೇಕೆ ಎಂದು ರೈತರು ಪ್ರಶ್ನಿಸಿದರು.

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಮಾತನಾಡಿ,‘ತಾಲ್ಲೂಕಿನಲ್ಲಿ ಮೂರು ಹಂತಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಎಂಟತ್ತು ಹಳ್ಳಿಗಳ ರೈತರು ಒಪ್ಪಿಗೆ ಸೂಚಿಸಿದ್ದಾರೆ. ದೊಡ್ಡಸಿದ್ಧವ್ವನಹಳ್ಳಿ ಹಾಗೂ ಮದಕರಿಪುರ ಭಾಗದ ರೈತರು ಒಪ್ಪಿಗೆ ನೀಡಿದರೆ ಭೂಮಿ ಪೂಜೆ ನೆರವೇರಿಸಲಾಗುವುದು’ ಎಂದು ಹೇಳಿದರು.

‘ಪರಿಹಾರದ ವಿಚಾರದಲ್ಲಿ ಸರ್ಕಾರ ಮೋಸ ಮಾಡಲು ಸಾಧ್ಯವಿಲ್ಲ. ಸರ್ಕಾರದ ನಿಯಮಾವಳಿ ಪ್ರಕಾರ ಖಂಡಿತ ಪರಿಹಾರ ಬರಲಿದೆ. ಈ ಕುರಿತು ಆತಂಕ ಬೇಡ. ಉಪನೋಂದಣಾಧಿಕಾರಿ ಕಚೇರಿಯಲ್ಲಿ ನಿಗದಿಯಾಗಿರುವ ಹಾಗೂ ಪ್ರಸ್ತುತ ಮಾರುಕಟ್ಟೆಯಲ್ಲಿ ಯಾವ ದರ ಇದೆಯೋ ಅಷ್ಟಕ್ಕೆ ಬೆಲೆ ನಿಗದಿಪಡಿಸಲಿದ್ದಾರೆ’ ಎಂದು ರೈತರನ್ನು ಮನವೊಲಿಸಲು ಶಾಸಕರು ಮುಂದಾದರು.

₹ 20 ಸಾವಿರ ಪರಿಹಾರ ನೀಡಿ: ‘ಹಿಂದಿನ ವರ್ಷ ಜಮೀನು ನೀಡಿದ ರೈತರಿಗೆ ಗುತ್ತಿಗೆದಾರರು ಬೆಳೆ ಪರಿಹಾರವಾಗಿ ₹ 20 ಸಾವಿರ ನೀಡಿದ್ದಾರೆ. ಪ್ರಸಕ್ತ ವರ್ಷ ಎರಡನೇ ಸುತ್ತಿನ ಬೆಳೆ ಪರಿಹಾರವಾಗಿ ₹ 20 ಸಾವಿರ ಪರಿಹಾರವನ್ನು ಗುತ್ತಿಗೆದಾರರಿಂದ ಕೊಡಿಸಿ’ ಎಂದು ಎಂಜಿನಿಯರ್‌ಗಳಿಗೆ ತಾಕೀತು ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ, ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್ ರಾಘವನ್, ವಿಶೇಷ ಭೂಸ್ವಾಧೀನ ಅಧಿಕಾರಿ ಹರಿಶಿಲ್ಪಾ, ಎಂಜಿನಿಯರ್‌ಗಳಾದ ಗುರುಬಸವರಾಜ್, ಶ್ರೀಧರ್, ಕಿರಣ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT