ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿರ್ವಹಣೆಗೆ ಭುಗಿಲೆದ್ದ ಅಸಮಾಧಾನ

ಜಿಲ್ಲಾ ಪಂಚಾಯಿತಿ ಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಬೇಸರ
Last Updated 18 ನವೆಂಬರ್ 2020, 12:56 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋವಿಡ್ ನಿರ್ವಹಣೆಯಲ್ಲಿ ಉಂಟಾಗಿರುವ ಲೋಪಗಳನ್ನು ಬಿಡಿಸಿಟ್ಟ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ಜಿಲ್ಲೆಯಲ್ಲಿ ಈವರೆಗೆ ಆಗಿರುವ ವೆಚ್ಚದ ಲೆಕ್ಕ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ ಅವರಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೋವಿಡ್‌ ನಿರ್ವಹಣೆಯಲ್ಲಿ ಆರೋಗ್ಯ ಇಲಾಖೆ ಎಡವಿದೆ. ಕೋವಿಡ್ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗೆ ದಾಖಲಾದ ರೋಗಿಯನ್ನು ವೈದ್ಯರು ಉಪಚರಿಸುತ್ತಿಲ್ಲ. ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ನಿತ್ಯ ವೈದ್ಯರು ಭೇಟಿ ನೀಡುತ್ತಿಲ್ಲ. ಶುಶ್ರೂಷಕಿಯರಿಗೆ ಸೂಚನೆ ನೀಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ರೋಗಿಗಳು ದೂರವಾಣಿ ಕರೆ ಮಾಡಿ ನೋವು ಹಂಚಿಕೊಳ್ಳುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೋವಿಡ್ ಆಸ್ಪತ್ರೆ, ಆರೈಕೆ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲಿಸಿದ್ದೇನೆ. ರೋಗಿಗಳ ಅಹವಾಲು ಆಲಿಸಿದ್ದೇನೆ. ಕಾಲಕಾಲಕ್ಕೆ ವೈದ್ಯರು ಭೇಟಿ ನೀಡುವುದಿಲ್ಲ. ಕೋವಿಡ್‌ ಪರೀಕ್ಷಾ ವರದಿಯಲ್ಲಿ ಗೊಂದಲಗಳಿವೆ. ವರದಿ ನೆಗೆಟಿವ್‌ ಬಂದಿದ್ದರೂ ಗಂಟಲು ಮತ್ತು ಮೂಗು ದ್ರವದ ಮಾದರಿ ನೀಡಿದ ವ್ಯಕ್ತಿಗೆ ಚಿಕಿತ್ಸೆ ನೀಡಲಾಗಿದೆ’ ಎಂದು ಕಿಡಿಕಾರಿದರು.

ಇದಕ್ಕೆ ಧ್ವನಿಗೂಡಿಸಿದ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ನರಸಿಂಹರಾಜು, ‘ಕೋವಿಡ್‌ ಪ್ರಕರಣ ಹೆಚ್ಚಾಗಿದ್ದ ಸಂದರ್ಭದಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿಯೂ ರೋಗಿಗೆ ಆಕ್ಸಿಜನ್‌ ಸಿಕ್ಕಿಲ್ಲ. ಸಮಯಕ್ಕೆ ಸರಿಯಾದ ಊಟ, ಔಷಧ ನೀಡಿಲ್ಲ. ಈ ಬಗ್ಗೆ ಜನರು ದೂರು ನೀಡಿದ್ದಾರೆ. ಆರೋಗ್ಯ ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ಬೇಸರ ಹೊರಹಾಕಿದರು.

ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಯೋಗೇಶ್‌, ‘ಚಿತ್ರದುರ್ಗ ಹಾಗೂ ಚಳ್ಳಕೆರೆ ತಾಲ್ಲೂಕಿನಲ್ಲಿ ಕೋವಿಡ್‌ ಪರೀಕ್ಷೆಯಲ್ಲಿ ಹಿಂದುಳಿದಿರುವುದು ನಿಜ. ಆದರೆ, ಚಿಕಿತ್ಸೆ ವಿಚಾರದಲ್ಲಿ ಲೋಪ ಉಂಟಾಗಿಲ್ಲ. ಕೋವಿಡ್‌ ಮರಣ ಪ್ರಮಾಣ ರಾಜ್ಯದಲ್ಲಿಯೇ ಅತ್ಯಂತ ಕಡಿಮೆ ಚಿತ್ರದುರ್ಗ ಜಿಲ್ಲೆಯಲ್ಲಿದೆ’ ಎಂದು ಮಾಹಿತಿ ನೀಡಿದರು.

‘ಪದವಿ ಕಾಲೇಜು ಮಂಗಳವಾರದಿಂದ ಆರಂಭವಾಗಿವೆ. ಕೋವಿಡ್ ವರದಿ ಸರಿಯಾದ ಸಮಯಕ್ಕೆ ಕೈಸೇರದ ಪರಿಣಾಮ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಕೋವಿಡ್‌ ಪರೀಕ್ಷೆ ಹೆಚ್ಚಿಸಲು ಏನು ಸಮಸ್ಯೆ ಇದೆ’ ಎಂದು ಶಶಿಕಲಾ ಅವರು ಆರೋಗ್ಯಾಧಿಕಾರಿಯನ್ನು ಪ್ರಶ್ನಿಸಿದರು.

‘ಕೋವಿಡ್‌ ಪರೀಕ್ಷೆಗೆ ಆರ್‌ಟಿಪಿಸಿಆರ್‌ ಪ್ರಯೋಗಾಲಯ ಆರಂಭಗಿದೆ. ಮಾದರಿ ಸಂಗ್ರಹಿಸಿದ 24 ಗಂಟೆಯಲ್ಲಿ ವರದಿಯನ್ನು ನೀಡಲಾಗುತ್ತಿದೆ. ನಿತ್ಯ ಸರಾಸರಿ 2,100 ಮಾದರಿ ಪರೀಕ್ಷೆಗೆ ಸರ್ಕಾರ ಗುರಿ ನಿಗದಿಪಡಿಸಿದೆ. ಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜುಗಳ ಬಳಿಯೇ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ’ ಎಂದು ಆರೋಗ್ಯಾಧಿಕಾರಿ ಡಾ.ಸಿ.ಎಲ್‌.ಫಾಲಾಕ್ಷ ಸಮಜಾಯಿಷಿ ನೀಡಿದರು.

ನ್ಯೂಟ್ರಿಷಿಯನ್ ಗಾರ್ಡ್‍ನ್‌ಗೆ ಸೂಚನೆ

ಸರ್ಕಾರಿ ಶಾಲೆ ಹಾಗೂ ವಿದ್ಯಾರ್ಥಿನಿಲಯದ ಆವರಣದಲ್ಲಿ ನ್ಯೂಟ್ರಿಷಿಯನ್‌ ಗಾರ್ಡನ್‌ ರೂಪಿಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಯೋಗೇಶ್‌ ಸೂಚನೆ ನೀಡಿದರು.

ಜಿಲ್ಲೆಯ ಹಲವು ಸರ್ಕಾರಿ ಶಾಲೆ, ಅಂಗನವಾಡಿ ಹಾಗೂ ಹಾಸ್ಟೆಲ್‌ಗಳಲ್ಲಿ ಕೈತೋಟ ಮಾಡಲು ಅವಕಾಶವಿದೆ. ನೀರಿನ ಲಭ್ಯತೆಯೂ ಇದೆ. ಅಗತ್ಯ ಇರುವಷ್ಟು ತರಕಾರಿಯನ್ನು ಬೆಳೆಯಲು ಸಾಧ್ಯವಿದೆ. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಸ್ತಾವನೆ ಸಲ್ಲಿಸಿ ಎಂದರು.

ಪಪ್ಪಾಯಿ, ನೇರಳೆ, ಮಾವು ಸೇರಿದಂತೆ ಹಣ್ಣಿನ ಗಿಡಗಳನ್ನು ನೆಡುವುದಕ್ಕೆ ಒತ್ತು ನೀಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗೆ ಸಲಹೆ ನೀಡಿದರು.

ಕೋವಿಡ್‌ ಅನುದಾನಕ್ಕೆ ಮನವಿ

ಗ್ರಾಮ ಪಂಚಾಯಿತಿಗಳು ಕೋವಿಡ್‌ ನಿರ್ವಹಣೆಗೆ ಮಾಡಿದ ವೆಚ್ಚವನ್ನು ಪ್ರಕೃತಿ ವಿಕೋಪ ನಿರ್ವಹಣಾ ನಿಧಿಯಿಂದ ಭರಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಯೋಗೇಶ್‌ ಆರೋಗ್ಯ ಇಲಾಖೆಗೆ ಮನವಿ ಮಾಡಿದರು.

‘ಕೊರೊನಾ ಸೋಂಕು ಹೆಚ್ಚಿದ್ದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇವೆ ಸಲ್ಲಿಸಿದ್ದಾರೆ. ಹಿರಿಯೂರು ತಾಲ್ಲೂಕಿನ ಅಬ್ಬಿನಹೊಳೆ ಸೇರಿ ಹಲವು ಗ್ರಾಮ ಪಂಚಾಯಿತಿಗಳು ಕೋವಿಡ್‌ ನಿರ್ವಹಣೆಗೆ ಪಂಚಾಯಿತಿ ಹಣ ವೆಚ್ಚ ಮಾಡಿವೆ. ವೆಚ್ಚವಾದ ಹಣವನ್ನು ಪ್ರಕೃತಿ ವಿಕೋಪ ನಿಧಿಯಿಂದ ಭರಿಸುವಂತೆ ಪತ್ರ ಬರೆಯಲಾಗಿದೆ. ಆದರೆ, ಸರಿಯಾದ ಸ್ಪಂದನೆ ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

***

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ವೈದ್ಯರು ಸಿಗುತ್ತಿಲ್ಲ. ಖಾಸಗಿ ಕ್ಲಿನಿಕ್‌ಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಶುಶ್ರೂಷಕಿಯರು ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ.

–ವಿಜಯಲಕ್ಷ್ಮಿ ಉಪಾಧ್ಯಕ್ಷೆ,, ಜಿಲ್ಲಾ ಪಂಚಾಯಿತಿ

***

ಸಮರ್ಪಕ ಸೇವೆಗೆ ವೈದ್ಯರ ಕೊರತೆಯಿದೆ ಎಂಬ ಸಬೂಬು ಹೇಳಲಾಗುತ್ತಿದೆ. ಆದರೆ, ಧರ್ಮಪುರ ಆರೋಗ್ಯ ಕೇಂದ್ರದ ವೈದ್ಯರನ್ನು ಅಮಾನತು ಮಾಡಲಾಗಿದೆ. ಇದರಿಂದ ರೋಗಿಗಳಿಗೆ ತೊಂದರೆಯಾಗಿದೆ.

–ತ್ರಿವೇಣಿ, ಅಧ್ಯಕ್ಷರು, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ

***

ಇದು ಹಿಟ್ಲರ್‌ ಆಡಳಿತವಲ್ಲ; ಪ್ರಜಾಪ್ರಭುತ್ವ ವ್ಯವಸ್ಥೆ. ಜನರು ಮತ ಹಾಕಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಜಿಲ್ಲಾ ಪಂಚಾಯಿತಿಗೆ ಕಳುಹಿಸಿದ್ದಾರೆ. ಆದರೆ, ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ.

–ಆರ್‌.ನರಸಿಂಹರಾಜು, ಅಧ್ಯಕ್ಷರು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT