ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಶಿಕ್ಷಣ ಕಾಯ್ದೆ ಅನುಷ್ಠಾನಕ್ಕೆ ವಿರೋಧ

2006ರ ಕಾಯ್ದೆ ಹಿಂಪಡೆಯಲು ವಿದ್ಯಾರ್ಥಿಗಳ ಆಗ್ರಹ
Last Updated 19 ಡಿಸೆಂಬರ್ 2013, 9:47 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜ್ಯ ಸರ್ಕಾರ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೃತ್ತಿ ಶಿಕ್ಷಣದಿಂದ ವಂಚಿತರನ್ನಾಗಿಸುವ ಹುನ್ನಾರಕ್ಕೆ ಮುಂದಾಗಿದ್ದು, ಕೂಡಲೇ 2006ರ ಸಿಇಟಿ ಕಾಯ್ದೆಯನ್ನು ಜಾರಿಗೊಳಿಸದೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ವೃತ್ತದ ಮುಂದೆ ಮಾನವ ಸರಪಳಿ ನಿರ್ಮಿಸಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲಕಾಲ ಪ್ರತಿಭಟನೆ ನಡೆಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌ ಅವರಿಗೆ ಮನವಿ ಸಲ್ಲಿಸಿದರು.

ಸರ್ಕಾರ ಜಾರಿಗೊಳಿಸಲು ನಿರ್ಧರಿಸಿರುವ 2006ರ ಸಿಇಟಿ ಕಾಯ್ದೆಯಿಂದಾಗಿ ಪ್ರಸ್ತುತ ಸರ್ಕಾರಿ ಕೋಟಾದಲ್ಲಿದ್ದ ಶೇ 45ರಷ್ಟು ಎಂಜಿನಿಯರಿಂಗ್‌ ಹಾಗೂ ಶೇ 40ರಷ್ಟು ವೈದ್ಯಕೀಯ ಹಾಗೂ ಶೇ 35ರಷ್ಟು ದಂತ ವೈದ್ಯಕೀಯ ಸೀಟುಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಲಿವೆ. ಯಾವುದೇ ಖಾಸಗಿ ಅನುದಾನರಹಿತ ಕಾಲೇಜಿನಲ್ಲಿ ಒಂದು ಸೀಟು ಕೂಡ ಸರ್ಕಾರಿ ಕೋಟಾದಲ್ಲಿ ಇಲ್ಲದಂತಾಗುತ್ತದೆ.

ಖಾಸಗಿ ಪಾಲಿನ ಸೀಟುಗಳಿಗಾಗಿ ನಡೆಸುವ ಕಾಮೆಡ್‌–ಕೆ ಪ್ರವೇಶ ಪರೀಕ್ಷೆ ವಿಚಾರದಲ್ಲಿ ಈಗಾಗಲೇ ಹಲವಾರು ದೂರುಗಳಿದ್ದರೂ ಕೂಡ ಸರ್ಕಾರ ಉಳಿದ ಸರ್ಕಾರಿ ಸೀಟುಗಳನ್ನು ಕಾಮೆಡ್‌–ಕೆಗೆ ಬಿಟ್ಟುಕೊಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕಾಯ್ದೆಯನ್ವಯ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಕಾಮೆಡ್‌–ಕೆ
ನಡೆಸುವ ಪರೀಕ್ಷೆ ಬರೆಯಬೇಕಾಗುತ್ತದೆ. ಸೀಟ್‌ ಬ್ಲಾಕಿಂಗ್‌ ದಂಧೆಯಲ್ಲಿ ತೊಡಗಿರುವ ಕಾಮೆಡ್‌–ಕೆ ಪರೀಕ್ಷೆ ನಡೆಸುವ ಅಧಿಕಾರ
ಸಹ ನೀಡಲಾಗಿದ್ದು, ಪರೀಕ್ಷಾ ವ್ಯವಸ್ಥೆಯೇ ಪ್ರಶ್ನಾರ್ಹವಾಗಿದೆ. ಸರ್ಕಾರಿ ಮತ್ತು ಅನುದಾನಿತ 21 ಎಂಜಿನಿಯರಿಂಗ್‌ ಮತ್ತು 10 ವೈದ್ಯಕೀಯ ಕಾಲೇಜುಗಳಿಗೆ ಮಾತ್ರ ಸರ್ಕಾರದ ಸಿಇಟಿ ಪರೀಕ್ಷೆ ಅನ್ವಯವಾಗುತ್ತದೆ.

ಸರ್ಕಾರ ವಿದ್ಯಾರ್ಥಿ ವಿರೋಧಿ ನೀತಿಯಿಂದ ಹಿಂದೆ ಸರಿದು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದರು.

ಎಬಿವಿಪಿ ರಾಜ್ಯ ಘಟಕದ
ಸಹ ಕಾರ್ಯದರ್ಸಿ ಜಿ.ಎಂ.ಪವನ್‌, ನಗರ ಕಾರ್ಯದರ್ಶಿ ಎಸ್‌.ದೇವರಾಜ್‌, ಯುವರಾಜ್‌, ಧರಣಿಕುಮಾರ್‌, ಎಲ್‌.ಪವನ್‌, ಪ್ರೀತಮ್‌, ಮನೋಹರ್‌, ರಜಾಕ್‌, ಲಕ್ಷ್ಮಣ್‌ ಸೇರಿದಂತೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ವಿಜಯ ಚೇತನ ಹಾಗೂ
ಕಂಪಳೇಶ್ವರ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾಯ್ದೆ ಜಾರಿ ಮಾಡಬಾರದು

ಸಾಮಾನ್ಯ ಪ್ರವೇಶ ಪರೀಕ್ಷೆ ಮತ್ತು ಏಕಗವಾಕ್ಷಿ ಸಂದರ್ಶನ, ಏಕರೂಪ ಶುಲ್ಕಗಳ ನೀತಿಗೆ ವಿರುದ್ಧವಾಗಿ ಸರ್ಕಾರ ವರ್ತಿಸುತ್ತಿದೆ. ಅಲ್ಲದೆ
ವಿದ್ಯಾರ್ಥಿ ಗಳು ಒಂದಕ್ಕಿಂತ ಹೆಚ್ಚು ಸಿಇಟಿ ಪರೀಕ್ಷೆ ಬರೆಯ ಬೇಕಾಗುತ್ತದೆ. ಪಾರದರ್ಶಕತೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ರಕ್ಷಣೆಯ ಮೂಲ ಉದ್ದೇಶಕ್ಕೆ ಕೊಡಲಿ ಪೆಟ್ಟು ಹಾಕಿದಂತಾಗುತ್ತದೆ.

– ಕಾವ್ಯಾ, ರಮ್ಯಶ್ರೀ, ಚಂದನಾ, ಶ್ರುತಿ, ಸೌಮ್ಯ, ನಿಖಿತಾ, ವಿದ್ಯಾರ್ಥಿನಿಯರು

ವಿದ್ಯಾರ್ಥಿಗಳ ರಕ್ಷಣೆ ಮಾಡಣ್ಣ!
‘ಅಣ್ಣ.. ಅಣ್ಣ... ಸಿದ್ದರಾಮಣ್ಣ ಹೆಚ್ಚಿನ ಶುಲ್ಕ ನೀಡಲು ಆಗಲ್ಲಣ್ಣ.. ದಯಮಾಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಣ್ಣ.. ಬಡ ಪ್ರತಿಭಾವಂತ ವಿದ್ಯಾರ್ಥಿಗಳ ರಕ್ಷಣೆ ಮಾಡಣ್ಣ.. ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸಬೇಡಣ್ಣ..!’ ಎಂದು ವಿದ್ಯಾರ್ಥಿಗಳು ಒಕ್ಕೊರಲಿನಿಂದ ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT