ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ತೆರಿಗೆ ಸಂಗ್ರಹ; ಸೂಕ್ತ ಕ್ರಮಕ್ಕೆ ಒತ್ತಾಯ

ರಾಮನಗರ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ
Last Updated 4 ಜುಲೈ 2018, 14:38 IST
ಅಕ್ಷರ ಗಾತ್ರ

ರಾಮನಗರ: ಆಸ್ತಿ ತೆರಿಗೆ ಸಂಗ್ರಹ ವಿಷಯದಲ್ಲಿ ಏಕರೂಪತೆ ಇರಬೇಕು. ಈವರೆಗೆ ಯಾರಿಂದ ಎಷ್ಟು ತೆರಿಗೆ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ನೀಡಬೇಕು ಎಂದು ನಗರಸಭೆಯ ಸದಸ್ಯರು ಒತ್ತಾಯಿಸಿದರು.

ಇಲ್ಲಿನ ನಗರಸಭೆಯ ಪ್ರಶಸ್ತಿ ಭವನದಲ್ಲಿ ಬುಧವಾರ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಹೆಚ್ಚು ಚರ್ಚೆಯಾಯಿತು. ‘ನಗರಸಭೆ ವತಿಯಿಂದ ತೆರಿಗೆಯನ್ನು ಸಮರ್ಪಕವಾಗಿ ಸಂಗ್ರಹಿಸುತ್ತಿಲ್ಲ. ಇದರಿಂದ ನಗರದ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ’ ಎಂದು ಸದಸ್ಯ ಎ. ರವಿ ಆರೋಪಿಸಿದರು. ‘ಇಲ್ಲಿಯವರೆಗೆ ಎಷ್ಟು ತೆರಿಗೆ ಸಂಗ್ರಹವಾಗಿದೆ. ನಕಲು ಮೊಹರು ಬಳಸಿ ಬ್ಯಾಂಕ್‌ ಹಾಗೂ ನಗರಸಭೆಗೆ ಆರ್ಥಿಕವಾಗಿ ನಷ್ಟ ಉಂಟು ಮಾಡಿದ ಪ್ರಕರಣ ಏನಾಯಿತು’ ಎಂದು ಪ್ರಶ್ನಿಸಿದರು.

‘ಏಪ್ರಿಲ್, ಮೇನಲ್ಲಿ ₨1.23ಲಕ್ಷ ತೆರಿಗೆಯನ್ನು ಸಂಗ್ರಹಿಸಲಾಗಿದೆ. ಜೂನ್‌ನಲ್ಲಿ ಸುಮಾರು ₨50 ಲಕ್ಷ ತೆರಿಗೆಯನ್ನು ಸಂಗ್ರಹಿಸಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದರಿಂದ ಅಸಮಾಧಾನಗೊಂಡ ರವಿ ‘ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತೆರಿಗೆ ಸಂಗ್ರಹಿಸುತ್ತಿಲ್ಲ. ಇದರಿಂದ ನಗರಸಭೆಗೆ ನಷ್ಟವಾಗುತ್ತಿದೆ. ರಾಮನಗರ ವ್ಯಾಪ್ತಿಯಲ್ಲಿ ಐದು, ಆರು ಅಂತಸ್ತಿನ ಕಟ್ಟಡಗಳು ಎಷ್ಟಿವೆ ಎಂಬುದು ಅಧಿಕಾರಿಗಳಿಗೆ ಗೊತ್ತಿಲ್ಲ. ಇನ್ನು ತೆರಿಗೆಯನ್ನು ಹೇಗೆ ಸಂಗ್ರಹಿಸುತ್ತೀರಿ’ ಎಂದು ಮರು ಪ್ರಶ್ನಿಸಿದರು.

‘ಈಗಾಗಲೇ ಹಲವರು ಸ್ವಯಂ ಘೋಷಣೆ ಪದ್ಧತಿ ಅಡಿ ತೆರಿಗೆ ಕಟ್ಟುತ್ತಿದ್ದಾರೆ. ಕಟ್ಟದಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು. ಬಹುಮಹಡಿ ಕಟ್ಟಡಗಳ ಕುರಿತು ಮುಂದಿನ ಸಭೆಯಲ್ಲಿ ಮಾಹಿತಿ ನೀಡಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಪಿ. ರವಿಕುಮಾರ್ ಪ್ರತಿಕ್ರಿಯಿಸಿದರು.

ಸದಸ್ಯ ಆರ್.ಎ. ಮಂಜುನಾಥ್ ಮಾತನಾಡಿ ‘ನಗರಸಭೆಯ ಅಧಿಕಾರಿಗಳು ಒಬ್ಬೊಬ್ಬ ಕಟ್ಟಡದ ಮಾಲೀಕರ ಬಳಿ ಒಂದೊಂದು ರೀತಿಯಲ್ಲಿ ತೆರಿಗೆ ಸಂಗ್ರಹಿಸುತ್ತಿದ್ದಾರೆ. ಐದು ವರ್ಷಗಳಿಂದಲೂ ನಗರಸಭೆಗೆ ಎಷ್ಟು ತೆರಿಗೆ ಸಂಗ್ರಹವಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ನೀಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ‘ತೆರಿಗೆಯನ್ನು ಸಂಗ್ರಹಿಸಲು ಸಿಬ್ಬಂದಿಯ ಕೊರತೆಯಿದ್ದರೆ, ಸರ್ಕಾರಕ್ಕೆ ಪತ್ರ ಬರೆದು ತಿಳಿಸಿ’ ಎಂದು ಸದಸ್ಯ ಪರ್ವೀಜ್‌ ಪಾಷಾ ಸಲಹೆ ನೀಡಿದರು.

ಸದಸ್ಯ ನಾಗೇಶ್‌ ಮಾತನಾಡಿ ‘ನಗರದ ಮೇಲ್ಭಾಗದಲ್ಲಿ ಮಾತ್ರ ತೆರಿಗೆಯನ್ನು ಸಂಗ್ರಹಿಸಲಾಗುತ್ತಿದೆ. ರೈಲ್ವೆ ನಿಲ್ದಾಣದ ಸುತ್ತುಮುತ್ತಲಿನ ಪ್ರದೇಶಗಳಲ್ಲಿ ತೆರಿಗೆ ಸಂಗ್ರಹಿಸಿದ ಮಾಹಿತಿಯನ್ನು ಅಧಿಕಾರಿಗಳು ನೀಡುತ್ತಿಲ್ಲ. ಇಲ್ಲಿ ನೂರಾರು ನೂಲು ಬಿಚ್ಚಾಣಿಕೆಯ ಕಾರ್ಖಾನೆಗಳಿವೆ. ಇಲ್ಲಿಂದಲೂ ಸರಿಯಾಗಿ ತೆರಿಗೆಯನ್ನು ಸಂಗ್ರಹಿಸಬೇಕು’ ಎಂದು ಆಗ್ರಹಿಸಿದರು.

ತಾರತಮ್ಯ: ‘ನಗರಸಭೆಯಲ್ಲಿ ಕೆಲವು ಪೌರ ಕಾರ್ಮಿಕರಿಗೆ ಕೆಲಸ ನೀಡದೇ ಸಂಬಳ ನೀಡಲಾಗುತ್ತಿದೆ’ ಎಂದು ರವಿ ಅಸಮಾಧಾನ ವ್ಯಕ್ತಪಡಿಸಿದರು. ‘ಅಧಿಕಾರಿಗಳನ್ನು ಓಲೈಸುವ ಪೌರಕಾರ್ಮಿಕರನ್ನು ನಗರಸಭೆಯಲ್ಲಿಯೇ ಉಳಿಸಿಕೊಳ್ಳಲಾಗುತ್ತಿದೆ. ಮನೆ ಮನೆ ಕಸ ಸಂಗ್ರಹಿಸುವ ಆಟೊಗಳ ನಿರ್ವಹಣೆ ಸರಿಯಿಲ್ಲ. ಆಟೊ ಸಂಚರಿಸುವಾಗ ಕಸವೆಲ್ಲಾ ರಸ್ತೆಗೆ ಬೀಳುತ್ತಿರುತ್ತದೆ’ ಎಂದು ದೂರಿದರು.

ಸದಸ್ಯ ನಾಗರಾಜ್ ಮಾತನಾಡಿ ‘ನಗರಸಭೆಯಲ್ಲಿನ ಕೆಲವು ಸಿಬ್ಬಂದಿ ಯಾವುದೇ ಕೆಲಸ ಮಾಡದೇ 15 ವರ್ಷದಿಂದ ಸಂಬಳ ತೆಗೆದುಕೊಳ್ಳುತ್ತಿದ್ದಾರೆ. ಅವರು ಯಾರು ಎಂದು ನಗರಸಭೆ ಅಧ್ಯಕ್ಷರಿಗೆ, ಆಯುಕ್ತರಿಗೆ ಗೊತ್ತಿದೆ. ಈಗಲಾದರೂ ಅವರ ವಿರುದ್ಧ ಕ್ರಮ ಕೈಗೊಂಡು ನಿಮ್ಮ ತಾಕತ್ತು ತೋರಿಸಿ’ ಎಂದು ಸವಾಲು ಹಾಕಿದರು.

‘ಸಾಮಾನ್ಯ ಸಭೆಗಳಲ್ಲಿ ಚರ್ಚೆಯಾಗುತ್ತಿರುವ ವಿಷಯಗಳು ಕಾರ್ಯರೂಪಕ್ಕೆ ಬರುತ್ತಿಲ್ಲ’ ಎಂದು ಸದಸ್ಯ ಸದಸ್ಯ ಎಚ್.ಎಸ್. ಲೋಹಿತ್‌ ದೂರಿದರು. ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.

ನಗರಸಭೆ ಉಪಾಧ್ಯಕ್ಷೆ ಮಂಗಳಾ ಶಂಭುಗೌಡ, ಪೌರಾಯುಕ್ತ ಕೆ. ಮಾಯಣ್ಣಗೌಡ ಇದ್ದರು.

ಕಪ್ಪು ಪಟ್ಟಿಗೆ ಸೇರಿಸಲು ಆಗ್ರಹ
ನಾಲ್ಕನೇ ವಾರ್ಡ್ ವ್ಯಾಪ್ತಿಯಲ್ಲಿ ಕಾಮಗಾರಿಯೊಂದರ ಟೆಂಡರ್ ಕರೆದು ವರ್ಷವಾದರೂ ಕಾಮಗಾರಿ ಆರಂಭಗೊಂಡಿಲ್ಲ. ಸಂಬಂಧಿಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಸದಸ್ಯ ನಾಗರಾಜ್‌ ಆಗ್ರಹಿಸಿದರು.
‘ಈ ಕಾಮಗಾರಿ ನನ್ನ ಮನೆಯ ಮುಂದೆಯೇ ನಡೆಯಬೇಕಿದೆ. ಹಲವು ಬಾರಿ ಅಧ್ಯಕ್ಷರು, ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕಾಮಗಾರಿ ಪ್ರಾರಂಭವಾಗುವವರೆಗೂ ಸಭೆ ಮುಂದೂಡಿ’ ಎಂದು ಒತ್ತಾಯಿಸಿದರು.
ಅಧ್ಯಕ್ಷರು ಪ್ರತಿಕ್ರಿಯಿಸಿ ‘ಹದಿನೈದು ದಿನದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT