ಭಾನುವಾರ, ಜೂನ್ 13, 2021
28 °C
ವಾರಾಂತ್ಯ ಕರ್ಫ್ಯೂ ಕಾರಣ ಶುಕ್ರವಾರವೇ ಮಾರುಕಟ್ಟೆಗೆ ಧಾವಿಸಿದ ಗ್ರಾಹಕರು

ಕಲಬುರ್ಗಿ: ಜಿಲ್ಲೆಯಲ್ಲಿ ಮುಚ್ಚಿದ ಮಳಿಗೆಗಳು, ಜನಸಂಚಾರ ವಿರಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲೆಯಲ್ಲಿ ಗುರುವಾರದಿಂದಲೇ ಜಾರಿ ಮಾಡಿದ ಅಘೋಷಿತ ಲಾಕ್‌ಡೌನ್‌ ಕ್ರಮ ಶುಕ್ರವಾರವೂ ಮುಂದುವರಿಯಿತು. ಇಲ್ಲಿನ ಸೂಪರ್‌ ಮಾರ್ಕೆಟ್‌ನಲ್ಲಿ ಕೆಲ ವರ್ತಕರು ಬೆಳಿಗ್ಗೆ ಅಂಗಡಿಗಳ ಬಾಗಿಲು ತೆರೆದಿದ್ದನ್ನು ಕಂಡ ಪೊಲೀಸರು ಮತ್ತೆ ಮುಚ್ಚಿಸಿದರು.

ಏತನ್ಮಧ್ಯೆ, ಶನಿವಾರ ಹಾಗೂ ಭಾನುವಾರ ಇಡೀ ದಿನ ವಾರಾಂತ್ಯದ ಕರ್ಫ್ಯೂ‌ ಇರುವ ಕಾರಣ ಶುಕ್ರವಾರ ಮಾರುಕಟ್ಟೆಗಳು ತುಂಬಿ ತುಳುಕಿದವು.‌ ಇಲ್ಲಿನ ಸೂಪರ್‌ ಮಾರ್ಕೆಟ್‌, ಕಣ್ಣಿ ಮಾರ್ಕೆಟ್‌, ಶಹಾಬಜಾರ್‌, ಗಂಜ್‌ ಮುಂತಾದ ಕಡೆಗಳಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದರು.

ರೋಜಾ ಆಚರಣೆ ಕೈಗೊಂಡ ಹಲವು ಮುಸ್ಲಿಮರು ಕೂಡ ಮಾರುಕಟ್ಟೆಯಲ್ಲಿ ತಮ್ಮ ಜೀವನವಶ್ಯಕ ವಸ್ತುಗಳ ಖರೀದಿಯಲ್ಲಿ ತಲ್ಲೀಣರಾಗಿದ್ದು ಕಂಡುಬಂತು. ಅದರಲ್ಲೂ, ಮುಸ್ಲಿಂ ಚೌಕ್‌ನಿಂದ ಹಳೆ ಚೌಕ್‌ ಸ್ಟೇಷನ್‌ವರೆಗೆನ ಅಡ್ಡರಸ್ತೆಯಲ್ಲಿ ವ್ಯಾಪಾರ ಜೋರಾಗಿಯೇ ನಡೆಯಿತು.

ಬಾಗಿಲು ತೆರೆಯದ ಅಂಗಡಿಗಳು: ನಗರದ ಪ್ರಮುಖ ರಸ್ತೆ, ವೃತ್ತ, ಮಾರ್ಕೆಟ್‌ ಪ್ರದೇಶದಲ್ಲಿನ ಎಲ್ಲ ಮಳಿಗೆಗಳು ಬಾಗಿಲು ಮುಚ್ಚಿದ್ದವು. ಅತ್ಯಂತ ಜನನಿಬಿಡ ಪ್ರದೇಶಗಳಾದ ಸೂಪರ್ ಮಾರ್ಕೆಟ್, ಜಗತ್ ಸರ್ಕಲ್‌, ಎಸ್‌ವಿಪಿ ವೃತ್ತ, ಮುಸ್ಲಿಂ ಚೌಕ್, ಎಂಎಸ್‌ಕೆ ಮಿಲ್, ಖಾಜಾ ಬಂದಾ ನವಾಜ್‌ ದರ್ಗಾ, ಶರಣಬಸವೇಶ್ವರ ದೇವಸ್ಥಾನ, ರಾಮಮಂದಿರ ಸರ್ಕಲ್‌, ಬಸವೇಶ್ವರ ಸರ್ಕಲ್‌, ಮುಸ್ಲಿಂ ಚೌಕ್‌, ಬಸ್‌ ನಿಲ್ದಾಣ, ರೈಲು ನಿಲ್ದಾಣ ಹಾಗೂ ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲೂ ಅಂಗಡಿಗಳು ಬಾಗಿಲು ಮುಚ್ಚಿದ್ದವು.‌

ಹೋಟೆಲ್‌– ಬೇಕರಿ‌, ಬಟ್ಟೆ ಅಂಗಡಿ, ಪಾತ್ರೆ, ಪ್ಲಾಸ್ಟಿಕ್‌ ಸಾಮಗ್ರಿ, ಎಲೆಕ್ಟ್ರಾನಿಕ್‌ ಉಪಕರಣ, ಮೊಬೈಲ್‌ ಅಂಗಡಿ, ಗೃಹಬಳಕೆ ವಸ್ತುಗಳು, ಪುಸ್ತಕ ಮಳಿಗೆ, ಹಾರ್ಡ್‌ವೇರ್, ಪೇಂಟಿಂಗ್‌, ಅಟೊಮೊಬೈಲ್‌, ಕಂಪ್ಯೂಟರ್‌ ಮುಂತಾದ ಮಳಿಗೆಗಳಲ್ಲಿ ವ್ಯಾಪಾರ ನಡೆಯಲೇ ಇಲ್ಲ.

ಹಾಲು, ಹಣ್ಣು, ತರಕಾರಿ, ಔಷಧಿ ಹಾಗೂ ದೈನಂದಿನ ಅವಶ್ಯಕತೆಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಯಿತು. ಹೋಟೆಲ್‌, ಖಾನಾವಳಿ ಹಾಗೂ ರೆಸ್ಟೊರೆಂಟ್‌ಗಳಿಂದ ಪಾರ್ಸಲ್‌ ನೀಡಲು ಮಾತ್ರ ಅವಕಾಶ ನೀಡಲಾಗಿದೆ. ಇದರಿಂದ ಬಹುಪಾಲು ಹೋಟೆಲ್‌ ಹಾಗೂ ಖಾನಾವಳಿಯ ಜನ ಸಂಪೂರ್ಣವಾಗಿ ಅಡುಗೆ ಮಾಡುವುದನ್ನೇ ನಿಲ್ಲಿಸಿದ್ದಾರೆ. ಬೀದಿ ಬದಿಯಲ್ಲಿ ತಳ್ಳುವ ಗಾಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಎಲ್ಲರನ್ನೂ ಎತ್ತಂಗಡಿ ಮಾಡಲಾಗಿದೆ. ಬೇಕರಿಗಳು, ಕುರುಕಲು ತಿನಿಸು, ಫಾಸ್ಟ್‌ಫುಡ್, ಮಸಾಲೆ ಪದಾರ್ಥಗಳು, ಜ್ಯೂಸ್‌ ಅಂಗಡಿಗಳನ್ನೂ ಬಂದ್‌ ಮಾಡಿಸಿದ್ದರಿಂದ ತಂಪು ಪಾನೀಯಕ್ಕಾಗಿ ಜನ ಪರದಾಡುವಂತಾಯಿತು.

ಅರ್ಧ ಬಾಗಿಲು ತೆರೆದು ಮಾರಾಟ: ಸೂಪರ್‌ ಮಾರುಕಟ್ಟೆ ಪ್ರದೇಶದ ಸಣ್ಣ ಗಲ್ಲಿಗಳಲ್ಲಿ ಬಟ್ಟೆ, ಚಪ್ಪಲಿ, ಮೊಬೈಲ್‌ ಹಾಗೂ ಬೇಕರಿ ಪದಾರ್ಥಗಳನ್ನು ಕದ್ದು– ಮುಚ್ಚಿ ಮಾರಾಟ ಮಾಡಲಾಯಿತು. ಇನ್ನು ಕೆಲವು ಅಂಗಡಿಯವರು ಷಟರ್‌ ಅನ್ನು ಅರ್ಧ ತೆರೆದು ಗ್ರಾಹಕರನ್ನು ಅಂಗಡಿಯೊಳಗೆ ಕಳಿಸಿ ಹೊರಗಡೆಯಿಂದ ಮತ್ತೆ ಷಟರ್‌ ಹಾಕುವ ಮೂಲಕ ವ್ಯಾಪಾರ ಮಾಡಿದರು.

ರೈಲು ನಿಲ್ದಾಣ, ಬಸ್‌ ನಿಲ್ದಾಣ, ಜಿಲ್ಲಾ ಕೋರ್ಟ್‌ ಆವರಣ, ಎಸ್‌ವಿಪಿ ವೃತ್ತ ಸೇರಿದಂತೆ ಅಲ್ಲಲ್ಲಿ ಕೆಲವು ಚಹಾ ಅಂಗಡಿಗಳು ಮಾತ್ರ ತೆರೆದು ವ್ಯಾಪಾರ ನಡೆಸಿದವು. ಬೇಕರಿ ವ್ಯಾಪಾರಿಗಳು ಅರ್ಧ ಬಾಗಿಲು ತೆರೆದು ಕದ್ದು–ಮುಚ್ಚಿ ಕೈಗೆ ಸಿಕ್ಕಷ್ಟು ವ್ಯಾಪಾರ ಮಾಡಿಕೊಂಡರು.

ವಾಹನ ಸಂಚಾರವೂ ವಿರಳ: ಬಸ್‌, ಆಟೊ, ಬೈಕ್‌, ಕಾರ್‌ ಸಂಚಾರಕ್ಕೆ ಯಾವುದೇ ನಿಷೇಧ ಹೇರಿಲ್ಲ. ಆದರೂ ವಾಹನಗಳ ಓಡಾಟ ಕಡಿಮೆ ಆಗಿತ್ತು. ಸರ್ಕಾರಿ ಬಸ್‌ ಸಂಚಾರ ಆರಂಭವಾಗಿದ್ದರೂ ಪ್ರಯಾಣಿಕರ ಕೊರತೆಯಿಂದ ಹೆಚ್ಚಿನ ಬಸ್‌ಗಳು ಡಿಪೊದಲ್ಲೇ ಠಿಕಾಣೆ ಹೂಡಿದವು.

ಉಳಿದಂತೆ, ಬ್ಯಾಂಕ್‌, ಸರ್ಕಾರಿ ಕಚೇರಿ, ಖಾಸಗಿ ಕಂಪನಿಗಳ ಕಚೇರಿಗಳು, ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಕಣ್ಣಿ ಮಾರ್ಕೆಟ್‌: ಸಗಟು ವ್ಯಾಪಾರ ಮಾತ್ರ ಸ್ಥಳಾಂತರ
ಇಲ್ಲಿನ ಕಣ್ಣಿ ಮಾರ್ಕೆಟ್‌ನಲ್ಲಿ ಪ್ರತಿ ದಿನ ನಸುಕಿನ 4 ಗಂಟೆಯಿಂದ ನಡೆಯುತ್ತಿದ್ದ ತರಕಾರಿ ಸಗಟು ವ್ಯಾಪಾರವನ್ನು ಬಂದ್‌ ಮಾಡುವಂತೆ ಸೂಚಿಸಲಾಗಿದೆ. ಆದರೆ, ಸ್ಥಳದಲ್ಲೇ ಕುಳಿತು ಮಾಡುತ್ತಿದ್ದ ಚಿಲ್ಲರೆ ವ್ಯಾಪಾರವನ್ನು ಅಲ್ಲಿಯೇ ಮುಂದುವರಿಸಬಹುದು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ‘ಸಗಟು ವ್ಯಾಪಾರಕ್ಕೆ ನಗರ ಹೊರವಲಯದ ವಾಜಪೇಯಿ ಬಡಾವಣೆಯಲ್ಲಿ (ಕಳೆದ ವರ್ಷ ಮಾಡಿದ್ದ ತಾತ್ಕಾಲಿಕ ಮಾರ್ಕೆಟ್‌ನ ಸ್ಥಳ) ಮಾಡಲು ಅವಕಾಶ ನೀಡಲಾಗಿದೆ. ಅಲ್ಲಿ ಮರದ ಬ್ಯಾರಿಕೇಡ್‌ಗಳನ್ನು ಹಾಕಿ ಅಂತರ ಕಾಪಾಡಿಕೊಳ್ಳಲು ಅನುಕೂಲ ಆಗುವಂತೆ ವ್ಯವಸ್ಥೆ ಮಾಡಲಾಗುವುದು. ಆದಷ್ಟು ಶೀಘ್ರ ವ್ಯಾಪಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುವುದು. ಈ ಬಗ್ಗೆ ನಗರ ಪೊಲೀಸ್‌ ಕಮಿಷನರ್‌ ಅವರಿಗೂ ಸೂಚನೆ ನೀಡಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದ್ದೇನೆ’ ಎಂದರು.‌

‘ಕಣ್ಣಿ ಮಾರ್ಕೆಟ್‌ನಲ್ಲಿ ತರಕಾರಿ, ಹಣ್ಣುಗಳ ಸಗಟು ವ್ಯಾಪಾರ ಹೆಚ್ಚಾಗಿ ನಡೆಯುತ್ತದೆ. ಹಳ್ಳಿಗಳಿಂದ ಬರುವ ರೈತರು ಹಾಗೂ ವರ್ತಕರು ಇಲ್ಲಿ ಗುಂಪಾಗಿ ಸೇರಿ ವ್ಯಾಪಾರ ಮಾಡುತ್ತಾರೆ. ಇದರಿಂದ ಕೊರೊನಾ ಹಳ್ಳಿಗಳತ್ತವೂ ಹೆಚ್ಚು ವ್ಯಾಪಿಸುವ ಆತಂಕವಿದೆ. ಮೇಲಾಗಿ, ಹಲವು ಮಹಿಳೆಯರು– ಪುರುಷರು ರಾತ್ರಿಯೇ ಬಂದು ಮಾರ್ಕೆಟ್‌ನಲ್ಲಿ ಮಲಗುತ್ತಾರೆ. ಈ ಸಂಕಷ್ಟ ನೀಗಿಸುವ ಉದ್ದೇಶದಿಂದ ಅಲ್ಲಿ ಚಿಲ್ಲರೆ ತರಕಾರಿ ಮಾರಲು ಮಾತ್ರ ಅವಕಾಶ ನೀಡಿ, ಉಳಿದ ಸಗಟು ವ್ಯಾಪಾರವನ್ನು ಸ್ಥಳಾಂತರಿಸಲು ಉದ್ದೇಶಿಸಲಾಗಿದೆ’ ಎಂದೂ ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು