ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರತ್‌ನಿಂದ ಬಂದ ಇಬ್ಬರಲ್ಲಿ ಸೋಂಕು ಶಂಕೆ?

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ಹೇಳಿಕೆ
Last Updated 6 ಏಪ್ರಿಲ್ 2020, 13:44 IST
ಅಕ್ಷರ ಗಾತ್ರ

ವಿಜಯಪುರ: ಸೂರತ್‌ನಿಂದ ಜಿಲ್ಲೆಗೆ ಬಂದಿರುವ 10 ಜನ ತಬ್ಲೀಗ್‌ ಜಮಾತ್‌ನ ಇಬ್ಬರಲ್ಲಿ ಶೀತ, ಜ್ವರ, ಕೆಮ್ಮು ಸೇರಿದಂತೆ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಂಕು ಲಕ್ಷಣ ಇರುವವರ ಗಂಟಲದ್ರವವನ್ನು ಕೋವಿಡ್‌–19 ಪರೀಕ್ಷೆಗಾಗಿ ಕಲಬುರ್ಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇನ್ನೂ ವೈದ್ಯಕೀಯ ವರದಿ ಬಂದಿಲ್ಲ ಎಂದು ತಿಳಿಸಿದರು.

ಮಾರ್ಚ್‌ 30ರಂದು ಸೂರತ್‌ನಿಂದ ಮಹಾರಾಷ್ಟ್ರ ಮೂಲಕವಾಗಿ ನಾಗಠಾಣಕ್ಕೆ ನಡೆದುಕೊಂಡು ಬಂದಿರುವ 10 ಜನ ಮುಸ್ಲಿಂ ಧರ್ಮ ಪ್ರಚಾರಕರಲ್ಲಿ ಎಂಟು ಜನರನ್ನು ಸರ್ಕಾರಿ ಸಂಸ್ಥೆಯೊಂದರಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಸೋಂಕು ಕಂಡುಬಂದಿರುವ ಇಬ್ಬರನ್ನು ಐಸೋಲೇಷನ್‌ನಲ್ಲಿ ಇಡಲಾಗಿದೆ ಎಂದು ತಿಳಿಸಿದರು.

ಸೂರತ್‌ನಿಂದ ನಾಗಠಾಣ ವರೆಗೆ ಯಾವ ಮಾರ್ಗದ ಮೂಲಕವಾಗಿ ಬಂದಿದ್ದಾರೆ ಮತ್ತು ಯಾರೊಂದಿಗೆಲ್ಲ ಸಂಪರ್ಕ ಸಾಧಿಸಿದ್ದರು (ಟ್ರಾವಲಿಂಗ್‌ ಹಿಸ್ಟರಿ) ಎಂಬುದರ ಬಗ್ಗೆ ತನಿಖೆ ನಡೆದಿದೆ ಎಂದು ಅವರು ಹೇಳಿದರು.

38 ಜನ ಹೋಂ ಕ್ವಾರಂಟೈನ್‌:

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇದುವರೆಗೆ 416 ಜನರನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಇದರಲ್ಲಿ 216 ಜನ ಈಗಾಗಲೇ 28 ದಿನ ಪೂರೈಸಿದ್ದಾರೆ. 162 ಜನ ರಿಪೋಟಿಂಗ್‌ ಅವಧಿಯಲ್ಲಿ ಇದ್ದಾರೆ. 38 ಜನ ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದು ತಿಳಿಸಿದರು.

ಹೋಂಕ್ವಾರಂಟೈನ್‌ನಲ್ಲಿ ಇರುವ 38 ಜನರಲ್ಲಿ 9 ಜನರನ್ನು ಸರ್ಕಾರಿ ಕ್ವಾರಂಟೈನ್‌ನಲ್ಲಿ ಇದ್ದಾರೆ. ವೈದ್ಯಕೀಯ ಪರೀಕ್ಷೆಯ ಬಳಿಕ ಇಬ್ಬರ ವರದಿ ನೆಗೆಟಿವ್‌ ಬಂದಿದೆ. ಇನ್ನು ಏಳು ಜನರ ವೈದ್ಯಕೀಯ ವರದಿ ಬರುವುದು ಬಾಕಿ ಇದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಇದುವರೆಗೆ 57 ಜನರ ಗಂಟಲದ್ರವ ಮಾದರಿಯನ್ನು ಕೋವಿಡ್‌–19 ಪರೀಕ್ಷೆಗಾಗಿ ಕಲಬುರ್ಗಿಗೆ ಕಳುಹಿಸಲಾಗಿದ್ದು, 54 ಜನರ ವರದಿ ನೆಗೆಟಿವ್‌ ಆಗಿದೆ. ಇನ್ನು ಮೂರು ಜನರ ವರದಿ ಬರುವುದು ಬಾಕಿ ಇದೆ ಎಂದು ತಿಳಿಸಿದರು.

ಕೋವಿಡ್‌–19ನಿಂದ ಮೃತಪಟ್ಟಿರುವ ಬಾಗಲಕೋಟೆಯ ವೃದ್ಧನ ಪುತ್ರನೊಂದಿಗೆ ನೇರ ಸಂಪರ್ಕದಲ್ಲಿದ್ದ ಮುದ್ದೇಬಿಹಾಳದ ಇಬ್ಬರ ವೈದ್ಯಕೀಯ ಫಲಿತಾಂಶ ನೆಗೆಟಿವ್‌ ಬಂದಿದೆ. ಅಲ್ಲದೇ, ಈ ಇಬ್ಬರ ಜೊತೆ ಸಂಪರ್ಕಕ್ಕೆ ಬಂದಿದ್ದ(ಸೆಕೆಂಡರಿ ಕಾಂಟ್ಯಾಕ್ಟ್‌) ಆರು ಜನರನ್ನು ಸರ್ಕಾರಿ ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ ಇದ್ದರು.

ಖಾಸಗಿ ವೈದ್ಯರ ಸೇವೆ ಪಡೆಯಲು ಸೂಚನೆ

ವಿಜಯಪುರ: ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಪಾಸಿಟಿವ್ ಪ್ರಕರಣ ಕಂಡುಬಂದರೆ ಖಾಸಗಿ ತಜ್ಞವೈದ್ಯರ ಸೇವೆ ಪಡೆಯಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕೋವಿಡ್-19 ಮುನ್ನೆಚ್ಚರಿಕೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜಿಲ್ಲಾಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತಿಸಲು ಬೇಕಾದ ಅವಶ್ಯಕ ಖರ್ಚು–ವೆಚ್ಚದ ವರದಿ ಸಿದ್ಧಪಡಿಸುವಂತೆಯೂ ತಿಳಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ರೋಗಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಅವಶ್ಯಕ ಮುಂಜಾಗ್ರತೆ ವಹಿಸಿಕೊಳ್ಳುವಂತೆ ಜಿಲ್ಲಾಸ್ಪತ್ರೆಯ ಸರ್ಜನ್ ಅವರಿಗೆ ಸೂಚಿಸಿದರು.

ಅಕ್ರಮ ಮದ್ಯ ಮಾರಾಟ: ದೂರು ದಾಖಲು

ವಿಜಯಪುರ: ಅಕ್ರಮ ಮದ್ಯ ಮಾರಾಟದ ಆರೋಪದ ಮೇರೆಗೆ ವಿಜಯಪುರ ತಾಲ್ಲೂಕಿನ ಹೊನ್ನುಟಗಿ ಗ್ರಾಮದ ಸೌರಭ ಜನರಲ್‌ ಸ್ಟೋರ್‌ ಮಾಲೀಕನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಮಪ್‌ ಅಗರವಾಲ್‌ ತಿಳಿಸಿದರು.

ಕುಡಿಯಲು ಮದ್ಯ ನೀಡದಿದ್ದರೆ ಪತ್ರಿಕೆ, ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುವುದಾಗಿ ಬೆದರಿಕೆ ಒಡ್ಡಿದ್ದ ಆರೋಪದ ಮೇಲೆ ಒಬ್ಬ ಪತ್ರಕರ್ತ ಸೇರಿದಂತೆ ನಾಲ್ವರ ವಿರುದ್ಧ ಅಂಗಡಿ ಮಾಲೀಕ ಸುರೇಶ ತೇರದಾಳ ದೂರು ನೀಡಿದ್ದರು.

ಪ್ರಕರಣದ ವಿಚಾರಣೆ ಬಳಿಕ ಅಂಗಡಿ ಮಾಲೀಕ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಸದ್ಯ ಯಾರ ವಿರುದ್ಧವೂ ಕ್ರಮಕೈಗೊಂಡಿಲ್ಲ ಎಂದು ಹೇಳಿದರು.

ನವಿಲುಗಳಿಗೂ ಆಹಾರ ಧಾನ್ಯ

ವಿಜಯಪುರ: ನಗರದ ಐತಿಹಾಸಿಕ ಗೋಳಗುಮ್ಮಟದ ಆವರಣದಲ್ಲಿರುವ ನವಿಲುಗಳಿಗೂ ಆಹಾರದ ಕೊರತೆಯಾಗದಂತೆ ನಿಗಾವಹಿಸಲು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

ದಿನಕ್ಕೆ ಎರಡು ಬಾರಿ ನವಿಲುಗಳಿಗೆ ಆಹಾರ ಪೂರೈಕೆ ಮಾಡುವಂತೆ ಪ್ರಾಚ್ಯವಸ್ತು ಮತ್ತು ಸರ್ವೇಕ್ಷಣಾ ಇಲಾಖೆಗೆ ಸೂಚಿಸುವಂತೆ ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT