ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ವಿಜಯಪುರ ಜಿಲ್ಲೆಯ ಜನರಿಗೆ ಆತಂಕ ಬೇಡ ಎಂದ ಜಿಲ್ಲಾಧಿಕಾರಿ

Last Updated 7 ಏಪ್ರಿಲ್ 2020, 12:22 IST
ಅಕ್ಷರ ಗಾತ್ರ

ವಿಜಯಪುರ: ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇದುವರೆಗೆ 59 ಜನರ ಗಂಟಲು ದ್ರವ ಮಾದರಿಗಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದು, ಈ ಪೈಕಿ 57 ಜನರ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ವಿದೇಶ ಸೇರಿದಂತೆ ಇತರ ರಾಜ್ಯ, ಜಿಲ್ಲೆಗಳಿಂದ ಮಂಗಳವಾರದ ವರೆಗೆ ಜಿಲ್ಲೆಗೆ 418 ಜನರು ಬಂದಿದ್ದಾರೆ ಎಂದರು.

216 ಜನರು 28 ದಿನಗಳ ಅವಧಿ ಪೂರ್ಣಗೊಳಿಸಿದ್ದು, 172 ಜನರು 15 ರಿಂದ 28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. ಒಟ್ಟು 30 ಜನರು ಹೋಂ ಕ್ವಾರಂಟೈನ್‍ದಲ್ಲಿದ್ದು, 9 ಜನರು ಆಸ್ಪತ್ರೆಯ ಐಸೋಲೇಶನ್‍ದಲ್ಲಿದ್ದಾರೆ. ಇನ್ನು ಎರಡು ವೈದ್ಯಕೀಯ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ನಿರ್ದೇಶನದಂತೆ ಮಂಗಳವಾರದಿಂದ ಬೇಕರಿ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, ಪಾರ್ಸಲ್ ಮೂಲಕ ಮಾತ್ರ ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ತರಕಾರಿ ಮತ್ತು ಹಣ್ಣುಗಳ ಮಾರಾಟದ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನುಕಟ್ಟುನಿಟ್ಟಾಗಿ ಕಾಯ್ದುಕೊಳ್ಳಲು ಸೂಚಿಸಲಾಗಿದ್ದು, ಜಿಲ್ಲಾಡಳಿತದಿಂದ ಇನ್ನು ಹೆಚ್ಚಿನ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿಲ್ಲೆಗೆ ಜನವರಿಯಿಂದ ಮಾರ್ಚ್‍ವರೆಗೆ ಇತರೆ ವಿವಿಧ ಜಿಲ್ಲೆ, ರಾಜ್ಯಗಳಿಂದ ತಬ್ಲೀಗ್‌ ಜಮಾತ್‍ಗೆ ಸಂಬಂಧಿಸಿದ 375 ಜನರು ಬಂದಿರುವುನ್ನು ಪತ್ತೆ ಹಚ್ಚಲಾಗಿದೆ. ಇನ್ನು ಶೋಧಕಾರ್ಯ ಕೈಗೊಳ್ಳಲಾಗಿದೆ ಎಂದರು.

ಸೂರತ್‌ನಿಂದ ಬಂದಿದರುವ 10 ಮಂದಿಯಲ್ಲಿ ಜ್ವರ, ಕೆಮ್ಮು ಕಾಣಿಸಿಕೊಂಡಿದ್ದ ಇಬ್ಬರ ಗಂಟಲು ದ್ರವದ ವೈದ್ಯಕೀಯ ಪರೀಕ್ಷಾ ವರದಿ ನೆಗೆಟಿವ್‌ ಬಂದಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಇದ್ದರು.

ನಕಲಿ ಪಾಸ್‌: ದೂರು ದಾಖಲು
ವಿಜಯಪುರ:
ಲಾಕ್‌ಡೌನ್‌ ಸಂದರ್ಭದಲ್ಲಿ ನಗರದಲ್ಲಿ ಸಂಚರಿಸಲು ಮಹಾನಗರ ಪಾಲಿಕೆ ಹೆಸರಲ್ಲಿ ನಕಲಿ ಪಾಸ್‌ಗಳನ್ನು ಮಾಡಿ ಸಾರ್ವಜನಿಕರಿಗೆ ಹಣಕ್ಕೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಇಲ್ಲಿನ ರಾಜಾಜಿ ನಗರದ ಸುನೀಲಜಿ ಗಾಯಕವಾಡ(60) ನಕಲಿ ಐಡಿ ಕಾರ್ಡ್‌ಗಳನ್ನು ಮುದ್ರಿಸಿ, ಅವುಗಳ ಮೇಲೆ ಮಹಾನಗರ ಪಾಲಿಕೆ ಮೊಹರು(ಸೀಲ್‌) ಹಾಕಿ, ಸಹಿ ಮಾಡಿ ಹಣಕ್ಕೆ ಮಾರಾಟ ಮಾಡಿ ಜನರಿಗೆ ಮೋಸ ಮಾಡುತ್ತಿದ್ದ ಆರೋಪದ ಮೇರೆಗೆ ಜಲನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಗರದಲ್ಲಿ ಇಂತಹ ಚಟುವಟಿಕೆಗಳು ಕಂಡುಬಂದರೆ ಪೊಲೀಸ್ ಇಲಾಖೆಯ ಗಮನಕ್ಕೆ ತರುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT