ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯೋಮೆಟ್ರಿಕ್ ಮಾಹಿತಿ ಕದ್ದು ಆನ್‌ಲೈನ್‌ ವಂಚನೆ: ಬಿಹಾರದ ಮೂವರು ಆರೋಪಿಗಳ ಬಂಧನ

Published 30 ಅಕ್ಟೋಬರ್ 2023, 16:32 IST
Last Updated 30 ಅಕ್ಟೋಬರ್ 2023, 16:32 IST
ಅಕ್ಷರ ಗಾತ್ರ

ಮಂಗಳೂರು: ಆಧಾರ್‌ ಆಧರಿತ ಪಾವತಿ ವ್ಯವಸ್ಥೆಯನ್ನು (ಎಇಪಿಎಸ್‌)  ದುರ್ಬಳಕೆ ಮಾಡಿಕೊಂಡು ಆನ್‌ಲೈನ್‌ನಲ್ಲಿ ವಂಚನೆ ನಡೆಸುತ್ತಿದ್ದ ಬಿಹಾರದ ಮೂವರು ಆರೋಪಿಗಳನ್ನು ಇಲ್ಲಿನ ಪೊಲೀಸರ ವಿಶೇಷ ತಂಡವು ಬಂಧಿಸಿದೆ.

‘ಬಿಹಾರ ರಾಜ್ಯದ ಸುಪೌಲ್‌ ಜಿಲ್ಲೆಯ ಕರಣಪುರ್‌ನ ದೀಪಕ್ ಕುಮಾರ್ ಹೆಂಬ್ರಮ್ (33 ವರ್ಷ), ಅರರಿಯಾ ಜಿಲ್ಲೆಯ ಚೌಕ್ತದ ವಿವೇಕ್ ಕುಮಾರ್ ಬಿಸ್ವಾಸ್ (24)  ಹಾಗೂ ಪೆಚೈಲಿಯ ಮದನ್ ಕುಮಾರ್ (23 ) ಬಂಧಿತರು. ಆಸ್ತಿ ನೊಂದಣಿಗೆ ಸಂಬಂಧಿಸಿದ ಕಾವೇರಿ–2 ಪೋರ್ಟಲ್‌ ಹ್ಯಾಕ್‌ ಮಾಡಿದ್ದ ಆರೋಪಿಗಳು, ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡಿದವರ ಬಯೊಮೆಟ್ರಿಕ್‌ ದಾಖಲೆಗಳನ್ನು ಕದ್ದು ವಂಚನೆ ನಡೆಸುತ್ತಿದ್ದರು’ ಎಂದು ನಗರ ಪೊಲೀಸ್‌ ಆಯುಕ್ತ ಅನುಮಪ್‌ ಅಗರ್ವಾಲ್‌ ತಿಳಿಸಿದ್ದಾರೆ.

‘ಆರು ತಿಂಗಳ ಅವಧಿಯಲ್ಲಿ ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ಹಾಗೂ ಇತರ ನೊಂದಣಿ ಮಾಡಿಸಿದ ಕೆಲವರ ಬ್ಯಾಂಕ್‌ ಖಾತೆಯಿಂದ ಎಇಪಿಎಸ್‌ ಮೂಲಕ ಬೇರೆ ಖಾತೆಗಳಿಗೆ ವರ್ಗಾವಣೆಯಾದ ಬಗ್ಗೆ ದೂರುಗಳು ಬಂದಿದ್ದವು. ಎರಡು ತಿಂಗಳ ಅವಧಿಯಲ್ಲಿ ನಗರದ ಸೆನ್‌ ಕ್ರೈಂ ಠಾಣೆಯಲ್ಲಿ ಇಂತಹ 10 ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳನ್ನು ಭೇದಿಸಲು ವಿಶೇಷ ತಂಡವನ್ನು ರಚಿಸಿದ್ದೆವು. ಈ ತಂಡವು ಬಿಹಾರದಲ್ಲಿ ಮೂವರು ಆರೋಪಿಗಳನ್ನು ಅ.22ರಂದು ಬಂಧಿಸಿದೆ’ ಎಂದು  ಅವರು ಮಾಹಿತಿ ನೀಡಿದ್ದಾರೆ.

‘ಆರೋಪಿಗಳು ಕಾವೇರಿ-2 ಪೋರ್ಟಲ್‌ನಿಂದ ದಾಖಲಾತಿಗಳ ಆಧಾರ್ ಸಂಖ್ಯೆ ಮತ್ತು ಹೆಬ್ಬೆರಳ ಗುರುತಿನ ಬಯೊಮೆಟ್ರಿಕ್‌ ಮಾಹಿತಿಯನ್ನು ಸಂಗ್ರಹಿಸಿ ಸ್ಕ್ಯಾನರ್ ಮೂಲಕ ಬೆರಳುಮುದ್ರೆಯನ್ನು ಸ್ಕ್ಯಾನ್ ಮಾಡಿ ಬ್ಯಾಂಕ್‌ ಖಾತೆಯ ಹಣವನ್ನು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡುತ್ತಿದ್ದರು’ ಎಂದು ಅವರು ವಿವರಿಸಿದ್ದಾರೆ.

‘ಆರೋಪಿಗಳು 10 ಬ್ಯಾಂಕ್ ಖಾತೆಗಳಿಂದ ಬೇರೆ ಬ್ಯಾಂಕ್‌ ಖಾತೆಗಳಿಗೆ ₹ 3,60,242 ಅನ್ನು ವರ್ಗಾಯಿಸಿದ್ದು, ಈ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗಿದೆ. ಆರೋಪಿಗಳ ‌ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದು, ತಾಂತ್ರಿಕ ಪರಿಶೀಲನೆ ನಡೆಸುತ್ತಿದ್ದೇವೆ. ಇದುವರೆಗೆ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಸಾವಿರಕ್ಕೂ ಹೆಚ್ಚು ನೊಂದಣೆ ಪತ್ರಗಳ ಪಿಡಿಎಫ್‌ ಮತ್ತು ಆಂಧ್ರಪ್ರದೇಶ ಹಾಗೂ ಇತರ ಕೆಲವು ರಾಜ್ಯಗಳಿಗೆ ಸಂಬಂಧಿಸಿದ 300 ಕ್ಕೂ ಹೆಚ್ಚು ಪತ್ರಗಳ ಪಿಡಿಎಫ್‌ ಪ್ರತಿಗಳನ್ನು ಆರೋಪಿಗಳು ಸಂಗ್ರಹಿಸಿಟ್ಟಿರುವುದು ಕಂಡು ಬಂದಿದೆ’ ಎಂದು ಅವರು ತಿಳಿಸಿದ್ದಾರೆ.

‘ಆರೋಪಿಗಳಲ್ಲಿ ದೀಪಕ್‌ ಸಾಮನ್ಯ ಸೇವಾ ಕೇಂದ್ರವನ್ನು ನಡೆಸುತ್ತಿದ್ದ. ವಿವೇಕ್‌ ಬಿಸಿಎ ಪದವೀಧರ ಹಾಗೂ ಮದನ್‌ ಕೇವಲ ಪಿ.ಯು.ವರೆಗೆ ಶಿಕ್ಷಣ ಪಡೆದಿದ್ದಾನೆ. ಪ್ರಕರಣದ ಹೆಚ್ಚುವರಿ ತನಿಖೆಗಾಗಿ ಆರೋಪಿಗಳನ್ನು ಬಿಹಾರಕ್ಕೆ ಕರೆದೊಯ್ದು ಸ್ಥಳ ಪರಿಶೀಲನೆ ಮಾಡಬೇಕಿದೆ. ಇನ್ನಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಬೇಕಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT