ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ತಂಗಡಿ ತಾಲ್ಲೂಕಿನಲ್ಲಿ ಕೃಷಿಗೆ ಬಸವನ ಹುಳುಗಳ ಕಾಟ

ನಿಯಂತ್ರಣಕ್ಕೆ ಕ್ರಮ ಸೂಚಿಸಿದ ತೋಟಗಾರಿಕೆ ಇಲಾಖೆ
Last Updated 14 ಆಗಸ್ಟ್ 2020, 4:20 IST
ಅಕ್ಷರ ಗಾತ್ರ

ಮಂಗಳೂರು: ಆಫ್ರಿಕನ್‌ ಬಸವನ ಹುಳು ಕಾಟ ಹೆಚ್ಚಾಗಿದ್ದು, ಬೆಳ್ತಂಗಡಿ ತಾಲ್ಲೂಕಿನ ಉರುವಾಲು ಗ್ರಾಮದ 100 ಎಕರೆ ಪ್ರದೇಶದಲ್ಲಿ ರೈತರ ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆ ಕಾಸರಗೋಡು ಸೇರಿದಂತೆ ಆಲಂಕಾರು, ಸವಣೂರು, ಕೊಯಿಲ ಗ್ರಾಮಗಳ ಕೃಷಿಕರಿಗೆ ತೊಂದರೆ ಉಂಟು ಮಾಡಿದ್ದ ಆಫ್ರಿಕನ್‌ ಬಸವನ ಹುಳು, ಉರುವಾಲು ಗ್ರಾಮದಲ್ಲಿ ವ್ಯಾಪಕವಾಗಿವೆ.

ತರಕಾರಿ, ನೆಡುತೋಪು ಬೆಳೆಗಳು, ಅರಣ್ಯ ಹಾಗೂ ಹೊಲದ ಬೆಳೆಗಳನ್ನು ತಿಂದು ನಾಶ ಮಾಡುತ್ತಿರುತ್ತವೆ. ಈ ಹುಳುವಿನ ಚಟುವಟಿಕೆ ಅಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಹೆಚ್ಚಿರುತ್ತದೆ. ಹಗಲಿನ ವೇಳೆಯಲ್ಲಿ ಎಲೆ ಮತ್ತು ಕಲ್ಲುಗಳ ಕೆಳಗೆ ಅವಿತುಕೊಳ್ಳುತ್ತವೆ. ರಾತ್ರಿಯ ವೇಳೆ ಪ್ರೌಢಾವಸ್ಥೆಯ ಹುಳುಗಳು ಹೊರಬಂದು, ಹಣ್ಣು ಮತ್ತು ತರಕಾರಿಗಳನ್ನು ತಿಂದು ಹಾನಿ ಮಾಡುತ್ತವೆ. ಕೆಲವೊಮ್ಮೆ ತುಂತುರು ಮಳೆ ಹಾಗೂ ಸೂರ್ಯನ ಪ್ರಕಾಶದಲ್ಲಿ ಹಗಲಿನ ವೇಳೆಯಲ್ಲೂ ಇವುಗಳ ಬಾಧೆಯನ್ನು ಕಾಣಬಹುದು ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.

ನಿರ್ವಹಣೆ ಕ್ರಮ: ತೋಟದಲ್ಲಿ ಕಳೆ ಗಿಡಗಳನ್ನು ತೆಗೆದು ಸ್ವಚ್ಛತೆಯನ್ನು ಕಾಪಾಡಬೇಕು. ಪ್ರಾರಂಭದ ಹಂತಗಳಲ್ಲಿ ಹುಳುಗಳನ್ನು ಆಯ್ದು ಗುಂಡಿಯಲ್ಲಿ ಹಾಕಿ, ಸುಣ್ಣ ಸಿಂಪಡಿಸುವುದರಿಂದ ನಾಶಪಡಿಸಬಹುದು. ಹಸಿ ಗೋಣಿ ಚೀಲಗಳನ್ನು ತೋಟದಲ್ಲಿ ಅಲ್ಲಲ್ಲಿ ಇಡುವುದರಿಂದ ಹುಳುಗಳು ಚೀಲದ ಕೆಳಗೆ ಅವಿತುಕೊಳ್ಳುತ್ತವೆ. ಹೀಗೆ ಸಂಗ್ರಹಿಸಿದ ಹುಳುಗಳನ್ನು ಉಪ್ಪು ಅಥವಾ ಕಾಪರ್ ಸಲ್ಫೇಟ್ ಹಾಕಿ ನಾಶಪಡಿಸಬಹುದು.

ಮೆಟಾಲ್ಡಿಹೈಡ್ ರಾಸಾಯನಿಕ ಪೀಡೆನಾಶಕದ ಸಣ್ಣ ಸಣ್ಣ ತುಣುಕುಗಳನ್ನು ಹೊಲದಲ್ಲಿ ಅಲ್ಲಲ್ಲಿ ಚೆಲ್ಲಿದಾಗ ಹುಳುಗಳು ಆಕರ್ಷಣೆಗೊಂಡು ಕೀಟನಾಶಕಗಳನ್ನು ತಿನ್ನುವುದರಿಂದ ಹುಳುಗಳನ್ನು ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು.

ಯಾವುದೇ ರಾಸಾಯನಿಕದಿಂದ ಈ ಹುಳುಗಳು ಸತ್ತಿದ್ದು ಕಂಡುಬಂದಲ್ಲಿ, ತಕ್ಷಣ ಅವುಗಳನ್ನು ಆರಿಸಿ ಆಳವಾಗಿ ನೆಲದಲ್ಲಿ ಹೂಳಬೇಕು. ಇಲ್ಲದಿದ್ದರೆ ಸಾಕು ಪ್ರಾಣಿಗಳು ಹೀಗೆ ಸತ್ತಿರುವ ಶಂಖು ಹುಳುಗಳನ್ನು ತಿನ್ನುವುದರಿಂದ ಅವುಗಳಿಗೆ ತೊಂದರೆಯಾಗಬಹುದು.

ಶಂಖು ಹುಳಗಳು ನಿಸರ್ಗದಲ್ಲಿ ಶೇ 75 ರಿಂದ 80 ರಷ್ಟು ತಮ್ಮ ಆಹಾರವನ್ನು ಕೊಳೆಯುತ್ತಿರುವ ಪ್ರಾಣಿ ಮತ್ತು ಸಸ್ಯಜನ್ಯ ಪದಾರ್ಥಗಳನ್ನು ತಿಂದು ನಿಸರ್ಗದಲ್ಲಿ ಸಮತೋಲನವನ್ನು ಕಾಪಾಡುತ್ತವೆ. ಇಂತಹ ಸಂದರ್ಭದಲ್ಲಿ ಬೆಳೆಗಳ ಮೇಲೆ ಹಾವಳಿಯಿದ್ದಾಗ ಮಾತ್ರ ಹತೋಟಿ ಕ್ರಮ ಕೈಗೊಂಡು ನಿಸರ್ಗದ ಸಮತೋಲನವನ್ನು ಕಾಪಾಡಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ವಿಷಯತಜ್ಞ ರಿಶಲ್ ಡಿಸೋಜ (ಮೊ.ಸಂ. 8277806372) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT