ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುತ್ತೂರು: ನ್ಯಾಯಾಲಯಕ್ಕೆ ನ.7ರಂದು ಹಾಜರಾಗಬೇಕಿದ್ದ ಅಕ್ಷಯ್‌

Published 9 ನವೆಂಬರ್ 2023, 16:34 IST
Last Updated 9 ನವೆಂಬರ್ 2023, 16:34 IST
ಅಕ್ಷರ ಗಾತ್ರ

ಪುತ್ತೂರು: ಹತ್ಯೆಗೊಳಗಾದ ಅಕ್ಷಯ್ ಕಲ್ಲೇಗ ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿ ನ.7ರಂದು ವಿಚಾರಣೆ ಸಲುವಾಗಿ ನ್ಯಾಯಾಲಯಕ್ಕೆ ಬರುತ್ತೇನೆ ಎಂದು ಕೊಲೆಯಾಗುವ ದಿನವೇ ವಕೀಲರೊಬ್ಬರಿಗೆ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿದ್ದರು ಎಂದು ಗೊತ್ತಾಗಿದೆ.

ಅಕ್ಷಯ್ ಕಲ್ಲೇಗ ಅವರು ಕಾಲೇಜು ಶಿಕ್ಷಣ ಪಡೆಯುತ್ತಿದ್ದ ವೇಳೆ 2018ರಲ್ಲಿ ವಿದ್ಯಾರ್ಥಿಗಳ ನಡುವೆ ಪಿ.ಜಿಯೊಂದರಲ್ಲಿ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಅಕ್ಷಯ್ ವಿರುದ್ದ ಪುತ್ತೂರು ನಗರ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ಪುತ್ತೂರು ಜಿಲ್ಲಾ 5ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಪ್ರಸ್ತುತ ಈ ನ್ಯಾಯಾಲಯದ ನ್ಯಾಯಾಧೀಶರು ರಜೆಯಲ್ಲಿರುವ ಹಿನ್ನೆಲೆಯಲ್ಲಿ ಪ್ರಭಾರ ಹೊಂದಿರುವ ಮಂಗಳೂರು ಜಿಲ್ಲಾ ಆರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ವಕೀಲರು ನ.7ರಂದು ವಿಚಾರಣೆಗೆ ಹಾಜರಾಗುವಂತೆ ಅಕ್ಷಯ್ ಅವರಿಗೆ ತಿಳಿಸಿದ್ದರು. ‘ನಾಳೆ ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ಆಗಬಹುದಾ' ಎಂದು ಅಕ್ಷಯ್‌ ವಕೀಲರಲ್ಲಿ ಕೇಳಿದ್ದರು. ‘ನಾಳೆ ಹಾಜರಾಗಲೇಬೇಕು’ ಎಂದು ವಕೀಲರು ಹೇಳಿದ್ದರು. `ಆಯಿತು ನಾಳೆ ಹಾಜರಾಗುತ್ತೇನೆ' ಎಂದು ಅಕ್ಷಯ್ ಅವರು ನ.6ರಂದು ಸಂಜೆ ವಾಟ್ಸಾಪ್‌ನಲ್ಲಿ ವಕೀಲರಿಗೆ ಸಂದೇಶ ಕಳುಹಿಸಿದ್ದರು. ಆದರೆ ಅದೇ ದಿನ  ರಾತ್ರಿ ಅವರ ಕೊಲೆ ನಡೆದಿದೆ.

ಅಕ್ಷಯ್  ಕಲ್ಲೇಗ ವ್ಯಾಪ್ತಿಯ ಹಲವಾರು ಯುವಕರ ತಂಡವನ್ನು ಕಟ್ಟಿಕೊಂಡಿದ್ದರು. ಅವರ ನೇತೃತ್ವದ ‘ಕಲ್ಲೇಗ ಟೈಗರ್ಸ್’ ಹುಲಿ ವೇಷಧಾರಿಗಳ ಬಳಗದಲ್ಲಿಯೂ ಹಲವು ಮಂದಿ ಯುವಕರಿದ್ದರು. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದರು ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT