ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ್ವಾಸ್‌ ವಿರಾಸತ್‌: ಕಲೆಯ ಸೊಬಗಿಗೆ ರಥಾರತಿಯ ಮೆರುಗು

ಮೂಡುಬಿದಿರೆಯಲ್ಲಿ ಆಳ್ವಾಸ್‌ ವಿರಾಸತ್‌ಗೆ ಚಾಲನೆ
Published 14 ಡಿಸೆಂಬರ್ 2023, 20:25 IST
Last Updated 14 ಡಿಸೆಂಬರ್ 2023, 20:25 IST
ಅಕ್ಷರ ಗಾತ್ರ

ಮೂಡುಬಿದಿರೆ (ದಕ್ಷಿಣ ಕನ್ನಡ): ನೇಸರ ಬಾನಿನಿಂದ ಮರೆಯಾಗುತ್ತಿದ್ದಂತೆ ಬೆಳಕು, ಬೆರಗಿನ‌ ಪ್ರಪಂಚ ತೆರೆದುಕೊಂಡಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿರುವ ನಾಲ್ಕು ದಿನಗಳ ‘ಆಳ್ವಾಸ್ ವಿರಾಸತ್‌–2023 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ’ದ ವೈಭವವು ಗುರುವಾರ ಅನಾವರಣಗೊಂಡಿತು.

300ಕ್ಕೂ ಹೆಚ್ಚು ಕಲಾವಿದರು ಕಲೆಯ ರೋಮಾಂಚನವನ್ನುಂಟು ಮಾಡಿದರು. ಡೋಲು, ಕಹಳೆ ನಾದ ಅಷ್ಟ ದಿಕ್ಕುಗಳಲ್ಲಿ ಮಾರ್ದನಿಸಿತು. ಚೆಂಡೆಯ ಸದ್ದಿಗೆ ಮಾರೆತ್ತರದ ಬೊಂಬೆಗಳು ಬಳುಕುತ್ತ ಬಾಗುತ್ತ ಮಂದಹಾಸ ಬೀರಿದವು. ನಾದ ಸ್ವರದ ಇಂಪು, ಆಂಜನೇಯನ ವಿರಾಟ್ ರೂಪ, ಮರಕಾಲು ಕಟ್ಟಿದ ಹುಲಿವೇಷ ಕುಣಿತ, ಗೊರವರ ಕುಣಿತ, ಸುಗ್ಗಿ ಕುಣಿತ, ಈ ನಡುವೆ ನುಗ್ಗಿ ಬಂದ ಗೂಳಿ ಎದೆ ಝಲ್ಲೆನಿಸಿತು.

ಕೈಲಾಸದಿಂದ ಹೊರಟ ಶಿವ ಆಳ್ವಾಸ್ ಎದುರು ಪ್ರತ್ಯಕ್ಷನಾಗಿದ್ದ, ಕೀಲುಗೊಂಬೆಗಳು ಶಿವನಿಗೆ ಸನ್ನಿಧಾನದಲ್ಲಿ ನಮಿಸುತ್ತಿದ್ದವು. ಸಾಂಸ್ಕೃತಿಕ ಯಾತ್ರೆ ಕೊನೆಯಲ್ಲಿ ಹೊರಟ ದೇವಾನುದೇವತೆಗಳ ರಥವು ಕಿಕ್ಕಿರಿದು ಸೇರಿದ್ದ ಜನರನ್ನು ಭಾವಪರವಶರನ್ನಾಗಿಸಿತು.

‘ವಕ್ರತುಂಡ ಮಾಹಾಕಾಯ ಸೂರ್ಯಕೋಟಿ ಸಮಪ್ರಭ...’ ಶ್ಲೋಕ, ವೇದಘೋಷ ಮೊಳಗುತ್ತಿದ್ದರೆ ಪ್ರೇಕ್ಷಕ ಸಮೂಹ ಕೈ‌ಮುಗಿದು ನಮಸ್ಕರಿಸಿತು.‌

ಮರ್ಯಾದಾ ಪುರುಷೋತ್ತಮ ಶ್ರೀರಾಮ, ಶ್ರೀಕೃಷ್ಣ, ವಿಘ್ನ‌ನಿವಾರಕ ವಿನಾಯಕ, ಸರಸ್ವತಿ, ಶ್ರೀಲಕ್ಷ್ಮಿ, ಹನುಮಂತ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದ ರಥವು ವೇದಿಕೆಯ ಬಲಭಾಗದಿಂದ ಎಡಭಾಗಕ್ಕೆ ಚಲಿಸಿತು. ಹರಿದ್ವಾರದಿಂದ ಬಂದ ವೈದಿಕರು ವೇದಿಕೆಯಲ್ಲಿ ನಿಂತು ಗಂಗಾರತಿ ಮಾದರಿಯಲ್ಲಿ ಮಂತ್ರ ಘೋಷದೊದಿಗೆ ರಥಾರತಿ ಬೆಳಗಿದರು.

ದೇಶಕ್ಕಾಗಿ ದೇಹತ್ಯಾಗ ಮಾಡಿದ ಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಗೌರವ ಅರ್ಪಿಸಲಾಯಿತು.

‘ವಿರಾಸತ್‌’ ಅನ್ನು ಉದ್ಘಾಟಿಸಿದ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌, ‘ವಸುಧೈವ ಕುಟುಂಬಕಂ ಪರಿಕಲ್ಪನೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ಸಾಕಾರಗೊಳ್ಳುತ್ತಿದೆ’ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ‘ಆಳ್ವಾಸ್‌ನಲ್ಲಿ ಜ್ಞಾನದ ಜಾತ್ರೆ ಮತ್ತು ಯಾತ್ರೆ ನಡೆಯುತ್ತಿದೆ. ಮಕ್ಕಳಿಗೆ ಪಠ್ಯ ಶಿಕ್ಷಣದ ಜೊತೆಗೆ ಸಂಸ್ಕೃತಿ, ಸಂಸ್ಕಾರದ ಶಿಕ್ಷಣ ಬಹುಮುಖ್ಯ. ಜ್ಞಾನದ ಜೊತೆಗೆ ‌ವಿಜ್ಞಾನ ಬೆಳೆಯಬೇಕು. ಇವೆಲ್ಲವುಗಳ ಸಮ್ಮಿಳಿತವಾದ ಶಿಕ್ಷಣ ಆಳ್ವಾಸ್‌ನಲ್ಲಿ ದೊರೆಯುತ್ತಿದೆ’ ಎಂದರು.

ಭಾರತ್ ಸ್ಕೌಟ್ಸ್ ಗೈಡ್ಸ್‌ನ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಸ್ಥಳೀಯ ಜನಪ್ರತಿನಿಧಿಗಳು, ಗಣ್ಯರು ಪಾಲ್ಗೊಂಡಿದ್ದರು.

28 ವರ್ಷಗಳ ಹಿಂದೆ ಆರಂಭಿಸಿದ ವಿರಾಸತ್ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಒಂದು ಜಿಲ್ಲೆಗೆ ಸೀಮಿತವಾಗಿದ್ದ ಈ ಕಾರ್ಯಕ್ರಮ ಜಾಗತಿಕ ಮಟ್ಟಕ್ಕೆ ವಿಸ್ತರಿಸಿರುವುದು ಮನಸ್ಸಿಗೆ ಮುದ ನೀಡಿದೆ.

–ಡಾ.ಎಂ.ಮೋಹನ್‌ ಆಳ್ವ  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT