ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಭವನಕ್ಕೆ ಹೆಚ್ಚುವರಿ ₹ 2 ಕೋಟಿ: ಸಚಿವ ಕೋಟ ಭರವಸೆ

ಎರಡು ತಿಂಗಳಲ್ಲಿ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ ಸಭಾಭವನ
Last Updated 19 ಜುಲೈ 2022, 14:46 IST
ಅಕ್ಷರ ಗಾತ್ರ

ಮಂಗಳೂರು: ‘ಉರ್ವಸ್ಟೋರ್‌ನಲ್ಲಿರುವ ಜಿಲ್ಲಾ ಅಂಬೇಡ್ಕರ್ ಭವನಕ್ಕೆ ಕೆಲವು ಸೌಕರ್ಯ ಕಲ್ಪಿಸಲು ಹೆಚ್ಚುವರಿಯಾಗಿ ₹ 2 ಕೋಟಿ ಅನುದಾನ ಒದಗಿಸಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನಗರದ ಉರ್ವಸ್ಟೋರ್‌ನಲ್ಲಿರುವ ಅಂಬೇಡ್ಕರ್ ಭವನಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ಅಂಬೇಡ್ಕರ್ ಭವನದಲ್ಲಿ ಇನ್ನೂ ಪೂರ್ಣಪ್ರಮಾಣದಲ್ಲಿ ಸೌಕರ್ಯ ಕಲ್ಪಿಸಿಲ್ಲ. ಇದನ್ನು ಮನಗಂಡು ಮಂಗಳೂರಿನ ಮೇಯರ್, ಉಪಮೇಯರ್ ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳ ಜೊತೆ ಅಂಬೇಡ್ಕರ್ ಭವನವನ್ನು ಮತ್ತಷ್ಟು ಸುಸಜ್ಜಿತಗೊಳಿಸುವ ಬಗ್ಗೆ ಚರ್ಚಿಸಿದ್ದೇನೆ. ಇದನ್ನು ಸುಸಜ್ಜಿತಗೊಳಿಸುವುದಕ್ಕೆ ಯೋಜನೆ ರೂಪಿಸಲಾಗಿದೆ’ ಎಂದರು.

‘ಸಭಾಂಗಣದ ವೇದಿಕೆಗೆ ಸುವ್ಯವಸ್ಥಿತ ನೆಲಹಾಸು, ಪರದೆ ವ್ಯವಸ್ಥೆ, ಧ್ವನಿ–ಬೆಳಕಿನವ್ಯವಸ್ಥೆ, ಅಗ್ನಿಶಾಮಕ ವ್ಯವಸ್ಥೆಗಳನ್ನು ಕಲ್ಪಿಸಲು ಅಂದಾಜು ₹ 2ಕೋಟಿ ಬೇಕಾಗುತ್ತದೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಮಹಾ ನಗರ ಪಾಲಿಕೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ ಅನುದಾನವನ್ನು ಇದಕ್ಕೆ ಬಳಸಲಾಗುತ್ತದೆ. ರಾಜ್ಯ ಸರ್ಕಾರದಿಂದಲೂ ವಿಶೇಷ ಅನುದಾನ ನೀಡಲಾಗುವುದು. ಮುಂದಿನ 2 ತಿಂಗಳ ಒಳಗೆ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಿ ಸಾರ್ವಜನಿಕ ಕಾರ್ಯಕ್ರಮಕ್ಕೆ ಸಭಾಭವನ ಬಿಟ್ಟುಕೊಡುವ ಉದ್ದೇಶವಿದೆ’ ಎಂದರು.

ಶೇ.50ರಷ್ಟು ರಿಯಾಯಿತಿ: ‘ಅಂಬೇಡ್ಕರ್ ಭವನ ಬಾಡಿಗೆ ನಿಗದಿಪಡಿಸಲು ಪಾಲಿಕೆ ಈಗಾಗಲೇ ನಿಯಮಗಳನ್ನು ರೂಪಿಸಿದೆ. ಪುರಭವನಕ್ಕಿಂತಲೂ ಕಡಿಮೆ ದರದಲ್ಲಿ ಈ ಭವನವು ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಾರ್ಯಕ್ರಮಗಳಿಗೆ ಶೇ.50ರಷ್ಟು ರಿಯಾಯಿತಿ ಸಿಗಲಿದೆ’ ಎಂದು ಸಚಿವರು ಮಾಹಿತಿ ನೀಡಿದರು.

‘ಅಂಬೇಡ್ಕರ್ ಭವನ ಮಂಗಳೂರು ಮಹಾನಗರಕ್ಕೆ ಬಹುದೊಡ್ಡ ಆಸ್ತಿ. ಸರ್ಕಾರದ ವಿವಿಧ ಇಲಾಖೆಗಳ ಕಾರ್ಯಕ್ರಮಗಳನ್ನೂ ಈ ಸಭಾಂಗಣದಲ್ಲೇ ಆದ್ಯತೆ ಮೇರೆಗೆ ನಡೆಸುವ ಚಿಂತನೆಯಿದೆ. ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ನಿಟ್ಟಿನಲ್ಲೂ ಚರ್ಚಿಸಲಾಗಿದೆ’ ಎಂದು ಹೇಳಿದರು.

ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಸುಮಂಗಲಾ ರಾವ್, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ಧಲಿಂಗೇಶ್ ಬೇವಿನಕಟ್ಟಿ, ಪಾಲಿಕೆ ಸದಸ್ಯರಾದ ಗಣೇಶ್ ಕುಲಾಲ್, ಎಂಜಿನಿಯರ್ ನರೇಶ್ ಶೆಣೈ, ಅಂಬೇಡ್ಕರ್ ಭವನ ವ್ಯವಸ್ಥಾನಾ ಸಮಿತಿ ಸದಸ್ಯ ವಿನಯ್‌ನೇತ್ರ ದಡ್ಡಲಕಾಡ್, ದಲಿತ ದೌರ್ಜನ್ಯ ವಿರೋಧಿ ಸಮಿತಿ ವಿಶ್ವನಾಥ್ ಚೆಂತಿಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT