ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.25ಕ್ಕೆ ಸಿಎಎ ವಿರುದ್ಧ ಪ್ರತಿಭಟನೆ: ಭಾಷಣಕಾರರ ಪಟ್ಟಿಯಿಂದ ಅಮೂಲ್ಯ ಹೊರಕ್ಕೆ

Last Updated 22 ಫೆಬ್ರುವರಿ 2020, 9:32 IST
ಅಕ್ಷರ ಗಾತ್ರ

ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಮುಸ್ಲಿಂ ಐಕ್ಯತಾ ವೇದಿಕೆ ನೇತೃತ್ವದಲ್ಲಿ ಇದೇ 25ರಂದು ಆಯೋಜಿಸಿರುವ ಪ್ರತಿಭಟನಾ ಸಭೆಯ ಭಾಷಣಕಾರರ ಪಟ್ಟಿಯಿಂದ ಅಮೂಲ್ಯ ಲಿಯೋನ ಹೆಸರು ಕೈಬಿಡಲಾಗಿದೆ.

ಮಾಜಿ ಮೇಯರ್‌ ಕೆ.ಅಶ್ರಫ್‌ ಅಧ್ಯಕ್ಷತೆಯಲ್ಲಿ ಕುದ್ರೋಳಿಯ ಟಿಪ್ಪು ಸುಲ್ತಾನ್‌ ಗಾರ್ಡನ್‌ನಲ್ಲಿ ನಡೆಯುವ ಸಭೆಯಲ್ಲಿ ಅಮೂಲ್ಯ ಲಿಯೋನ ಕೂಡ ಭಾಷಣ ಮಾಡಬೇಕಿತ್ತು. ಈ ಸಂಬಂಧ ಕರಪತ್ರಗಳಲ್ಲೂ ಅವರ ಹೆಸರನ್ನು ಮುದ್ರಿಸಲಾಗಿತ್ತು. ಗುರುವಾರ ಬೆಂಗಳೂರಿನಲ್ಲಿ ‘ಪಾಕಿಸ್ತಾನ ಜಿಂದಾಬಾದ್‌’ ಘೋಷಣೆ ಕೂಗಿ ಬಂಧಿತರಾದ ಬಳಿಕ ಅಮೂಲ್ಯ ಹೆಸರನ್ನು ಕೈಬಿಡಲಾಗಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸಭೆಯ ವಿವರ ನೀಡಿದ ಅಶ್ರಫ್‌, ಅಮೂಲ್ಯ ಅವರ ಹೆಸರು ಕೈಬಿಟ್ಟಿರುವುದನ್ನು ತಿಳಿಸಿದರು. ಹೊಸ ಕರಪತ್ರ ಮುದ್ರಿಸಿ ಹಂಚಲಾಗುತ್ತದೆ ಎಂದು ಮಾಹಿತಿ ನೀಡಿದರು.

‘ಅಮೂಲ್ಯಗೆ ನಕ್ಸಲರ ಜತೆ ಸಂಬಂಧವಿತ್ತು’

ಮೈಸೂರು: ಸಿಎಎ ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಯುವತಿಗೆ ನಕ್ಸಲರ ಜತೆ ಸಂಬಂಧವಿರುವುದು ಈ ಹಿಂದೆ ಸಾಬೀತಾಗಿತ್ತು ಎಂದು ಯಡಿಯೂರಪ್ಪ ಹೇಳಿದರು.

‘ತಪ್ಪು ಮಾಡಿದವರಿಗೆ ಸೂಕ್ತ ಶಿಕ್ಷೆಯಾಗಬೇಕು. ಇದರ ಹಿಂದಿರುವ ಸಂಘಟನೆಗಳ ಮೇಲೆ ಕ್ರಮ ಜರುಗಿಸಲಾಗುವುದು. ಸಂಘಟನೆಗಳನ್ನು ತನಿಖೆಗೆ ಒಳಪಡಿಸಿದರೆ ಅವಳಿಗೆ ಪ್ರೇರಣೆ ಕೊಟ್ಟಿರುವುದು ಯಾರೆಂಬುದು ಗೊತ್ತಾಗಲಿದೆ’ ಎಂದರು.

ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡುವಂತಹ ವ್ಯವಸ್ಥಿತ ಸಂಚು ಇದರ ಹಿಂದೆ ಇದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಆರೋಪಿಸಿದರು.

‘ದೇಶದ್ರೋಹಿಗಳ ಬಗ್ಗೆ ಸಂಘಟಕರು ಎಚ್ಚರದಿಂದ ಇರಬೇಕು’

ರಾಮನಗರ: ‘ ಅಮೂಲ್ಯ ಎಂಬ ಯುವತಿ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿರುವುದು ಖಂಡನೀಯ. ಇಂತಹ ದೇಶದ್ರೋಹಿಗಳ ಬಗ್ಗೆ ಸಂಘಟಕರು ಎಚ್ಚರದಿಂದ ಇರಬೇಕು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ರಾಮನಗರದಲ್ಲಿ ಶುಕ್ರವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ‘ಭಾರತೀಯರಾಗಿ ನಮ್ಮ ದೇಶಕ್ಕೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಆಕೆ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾಳೋ, ಪ್ರಚಾರಕ್ಕಾಗಿ ಮಾಡಿದ್ದಾಳೋ, ಆಕೆಗೆ ಈ ಬಗ್ಗೆ ತಿಳಿವಳಿಕೆ ಇದೆಯೋ ಇಲ್ಲವೋ ಗೊತ್ತಿಲ್ಲ. ಇಂತಹ ದೇಶದ್ರೋಹದ ಕೆಲಸ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.

‘ನಮ್ಮ ಪಕ್ಷದ ಕಾರ್ಯಕರ್ತ ಇಮ್ರಾನ್ ಕಾರ್ಯಕ್ರಮದ ಸಂಘಟಕರಲ್ಲಿ ಒಬ್ಬರಾಗಿದ್ದರು. ಯುವತಿ ವೇದಿಕೆಯಲ್ಲಿ ಘೋಷಣೆ ಕೂಗಿದ ಕೂಡಲೇ ಆಕೆಯಿಂದ ಮೈಕ್ ಕಸಿದುಕೊಂಡಿದ್ದಾರೆ. ಹೀಗಾಗಿ ಸಂಘಟಕರಿಂದ ಆ ರೀತಿಯ ಪ್ರಯತ್ನ ಆಗಿಲ್ಲ ಎಂಬುದು ಸ್ಪಷ್ಟವಾಗಿದೆ. ನಾನು ಭಾರತೀಯ ಎಂಬ ಭಾವನೆ ಇದ್ದಾಗ ಮಾತ್ರ ನಮ್ಮ ಹೋರಾಟಕ್ಕೆ ಇತರರು ಕೈಜೋಡಿಸುತ್ತಾರೆ’ ಎಂದರು.

ಬಿಜೆಪಿ ಅಪಪ್ರಚಾರ: ‘ಈ ರೀತಿಯ ಕೃತ್ಯಗಳಿಗೆ ಹೆಚ್ಚು ಪ್ರಚಾರ ಮಾಡುವ ಮೂಲಕ ಬಿಜೆಪಿಯು ತನ್ನ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಹೊರಟಿದೆ. ದೇಶಭಕ್ತಿಯ ಬಗ್ಗೆ ಅವರಿಂದ ಪಾಠ ಕಲಿಯಬೇಕಿಲ್ಲ. ಯಾರೋ ಒಬ್ಬರು ತಿಳಿಗೇಡಿ ಘೋಷಣೆ ಕೂಗಿದೊಡನೆ ಅದರ ಗಮನವನ್ನು ಬೇರೆ ಕಡೆಗೆ ಸೆಳೆಯುವ ಅವಶ್ಯಕತೆ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT