ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ರಂದು ದುಬೈನಿಂದ ಮತ್ತೊಂದು ವಿಮಾನ

ದುಬೈನಿಂದ ಬಂದವರಿಗೆ ಕಟ್ಟುನಿಟ್ಟಿನ ಕ್ವಾರಂಟೈನ್‌: ಜಿಲ್ಲಾಧಿಕಾರಿ
Last Updated 15 ಮೇ 2020, 16:06 IST
ಅಕ್ಷರ ಗಾತ್ರ

ಮಂಗಳೂರು: ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಕನ್ನಡಿಗರನ್ನು ನಗರದ ವಿವಿಧ ಹೊಟೇಲ್ ಸೇರಿದಂತೆ 10 ಕ್ವಾರಂಟೈನ್ ಕೇಂದ್ರಗಳಲ್ಲಿ ನಿಗಾದಲ್ಲಿ ಇರಿಸಲಾಗಿದೆ. ಅವರು ಕೇಂದ್ರದಿಂದ ಹೊರಬರದೇ ಕ್ವಾರಂಟೈನ್ ನಿಯಮಗಳನ್ನು ಪಾಲಿಸುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದುಬೈನಿಂದ ಬಂದ ಪ್ರಯಾಣಿಕರ ಪ್ರತಿ ಕ್ವಾರಂಟೈನ್ ಕೇಂದ್ರಕ್ಕೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಅಲ್ಲದೇ ಹೋಟೆಲ್‌ ಹಾಗೂ ಕ್ವಾರಂಟೈನ್‌ ಕೇಂದ್ರದ ಸಿಬ್ಬಂದಿಗೆ ತರಬೇತಿಯನ್ನೂ ನೀಡಲಾಗಿದೆ. ಹೋಟೆಲ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇದೆ. ಹಾಗಾಗಿ ಯಾರೂ ಕ್ವಾರಂಟೈನ್ ನಿಯಮ ಉಲ್ಲಂಘಿಸುವ ಸಾಧ್ಯತೆ ಇಲ್ಲ. ಜಿಲ್ಲಾಡಳಿತ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದರು.

ದುಬೈನಿಂದ ಪ್ರಯಾಣ ಆರಂಭಿಸುವ ಸಂದರ್ಭ ಅವರಿಗೆ ಕೋವಿಡ್ ಟೆಸ್ಟ್ ಮಾಡಿರುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌, ‘ಈ ಬಗ್ಗೆ ಮಾಹಿತಿ ಇಲ್ಲ. ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಕ್ಕೆ ಮುಂಚಿತವಾಗಿ ಸ್ಕ್ರೀನಿಂಗ್ ಹಾಗೂ ರ‍್ಯಾಪಿಡ್‌ ಟೆಸ್ಟ್‌ಗೆ ಒಳಪಡಿಸುತ್ತಾರೆ. ಆದರೆ ಇಲ್ಲಿಗೆ ಬಂದ ಬಳಿಕ ಎಲ್ಲ ಪ್ರಯಾಣಿಕರ ಗಂಟಲು ಮಾದರಿ ದ್ರವದ ಪರೀಕ್ಷೆ ಮಾಡಲಾಗಿದೆ’ ಎಂದರು.

2 ನೇ ವಿಮಾನ 18 ರಂದು: ದುಬೈನಿಂದ ಕನ್ನಡಿಗರನ್ನು ಕರೆತರಲಿರುವ ಎರಡನೇ ವಿಮಾನ ಇದೇ 18ರಂದು ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದರು.

‘ಅವರೆಲ್ಲಾ ಯಾವ ಜಿಲ್ಲೆಯವರು, ಎಷ್ಟು ಮಂದಿ ಪ್ರಯಾಣಿಕರಿದ್ದಾರೆ ಎಂಬ ಬಗ್ಗೆ ನಿಖರವಾದ ಮಾಹಿತಿ ಲಭಿಸಿಲ್ಲ. ಆದರೆ ಕೇಂದ್ರ ಹಾಗೂ ರಾಜ್ಯ ಆರೋಗ್ಯ ಇಲಾಖೆಯ ನಿಯಮಗಳಂತೆ ಅವರೆಲ್ಲರೂ ತಮ್ಮದೇ ಸ್ವಂತ ಖರ್ಚಿನಲ್ಲಿ ಕ್ವಾರಂಟೈನ್‌ಗೆ ಒಳಪಡುವ ಷರತ್ತಿಗೆ ಒಪ್ಪಿಕೊಂಡೇ ಬರುತ್ತಿದ್ದಾರೆ’ ಎಂದರು.

ವಿಮಾನದಿಂದ ಇಳಿದು ಎಲ್ಲರೂ ಒಮ್ಮೆಲೇ ಬರಲು ಅವಕಾಶವಿಲ್ಲ. ಒಂದು ಬಾರಿ 20 ಜನರು ಮಾತ್ರ ಹೊರಗೆ ಬರಬೇಕು. ಎಲ್ಲರ ಆರೋಗ್ಯ ತಪಾಸಣೆ, ಇತರ ಪ್ರಕ್ರಿಯೆಗಳಿಗೆ ಸಮಯ ಬೇಕಾಗುತ್ತದೆ. ಹೀಗಾಗಿ ಪ್ರಯಾಣಿಕರೂ ಜಿಲ್ಲಾಡಳಿತದ ಜತೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಮೊದಲ ವಿಮಾನದ ಪ್ರಯಾಣಿಕರಿಗೆ ತೊಂದರೆ ಆಗಿರುವ ದೂರುಗಳ ಹಿನ್ನೆಲೆಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ದೇಶಕರ ಜತೆ ಚರ್ಚಿಸಲಾಗಿದೆ. ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಗಾಯತ್ರಿ ನಾಯಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT