ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ವಿರುದ್ಧ 15ರಂದು ಬೃಹತ್‌ ಸಮಾವೇಶ

ಅಡ್ಯಾರ್‌– ಕಣ್ಣೂರಿಗೆ ಸ್ಥಳ ಬದಲಿಸಿದ ಮುಸ್ಲಿಂ ಸೆಂಟ್ರಲ್‌ ಕಮಿಟಿ
Last Updated 8 ಜನವರಿ 2020, 15:58 IST
ಅಕ್ಷರ ಗಾತ್ರ

ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್‌ ಕಮಿಟಿಯು 28 ಸಂಘಟನೆಗಳ ಸಹಭಾಗಿತ್ವದಲ್ಲಿ ಇದೇ 15ರಂದು ನಗರದ ಹೊರ ವಲಯದ ಅಡ್ಯಾರ್‌– ಕಣ್ಣೂರು ಕೇಂದ್ರ ಜುಮಾ ಮಸೀದಿ ಎದುರು ಬೃಹತ್‌ ಸಮಾವೇಶ ನಡೆಸಲಿದೆ.

ನೆಹರೂ ಮೈದಾನದಲ್ಲಿ ಸಮಾವೇಶ ನಡೆಸಲು ಸಮಿತಿ ಅನುಮತಿ ಕೋರಿತ್ತು. ಆದರೆ, ನಗರ ಪೊಲೀಸ್‌ ಕಮಿಷನರ್‌ ಅನುಮತಿ ನಿರಾಕರಿಸಿದ್ದರು. ಈ ಕಾರಣದಿಂದ ಬುಧವಾರ ಸಭೆ ನಡೆಸಿದ ಮುಸ್ಲಿಂ ಸೆಂಟ್ರಲ್‌ ಕಮಿಟಿ ಹಾಗೂ 28 ಸಂಘಟನೆಗಳ ಪ್ರಮುಖರು, ಅಡ್ಯಾರ್‌– ಕಣ್ಣೂರಿನಲ್ಲಿ ‘ಅಸಹಕಾರ ಚಳವಳಿ’ ಸಮಾವೇಶ ನಡೆಸುವ ತೀರ್ಮಾನ ಕೈಗೊಂಡರು.

ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಸ್ಲಿಂ ಸೆಂಟ್ರಲ್‌ ಕಮಿಟಿ ಅಧ್ಯಕ್ಷ ಕೆ.ಎಸ್‌.ಮೊಹಮ್ಮದ್ ಮಸೂದ್‌, ‘ನಗರದ ನೆಹರೂ ಮೈದಾನ ಮತ್ತು ಪುರಭವನದ ಬಳಿ ಸಮಾವೇಶ ಆಯೋಜಿಸಲು ಪೊಲೀಸ್‌ ಕಮಿಷನರ್‌ ಅನುಮತಿ ನೀಡಿಲ್ಲ. ಈ ಕಾರಣದಿಂದ ಅಡ್ಯಾರ್‌–ಕಣ್ಣೂರಿನಲ್ಲಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. 15ರ ಮಧ್ಯಾಹ್ನ 2.30ರಿಂದ ಸಮಾವೇಶ ಪ್ರಾರಂಭವಾಗಲಿದೆ’ ಎಂದರು.

ಶಾಂತಿಯುತವಾಗಿ ಪ್ರತಿಭಟನಾ ಸಮಾವೇಶ ನಡೆಯಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಖಾಝಿಗಳು, ಎಲ್ಲ ಧರ್ಮಗಳ ಮುಖಂಡರು, ಚಿಂತಕರು ಸಭೆಯಲ್ಲಿ ಮಾತನಾಡುವರು. ರಾಷ್ಟ್ರ ಧ್ವಜವನ್ನು ಮಾತ್ರ ಬಳಸಲಾಗುವುದು. ಇತರೆ ಯಾವುದೇ ಬಾವುಟಗಳಿಗೂ ಅವಕಾಶ ನೀಡುವುದಿಲ್ಲ. ಸಂಪೂರ್ಣವಾಗಿ ಸಂವಿಧಾನದ ಚೌಕಟ್ಟಿನಲ್ಲಿಯೇ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

ಸಿಎಎ, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ), ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಂತಹ (ಎನ್‌ಪಿಆರ್‌) ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಈ ಸಮಾವೇಶ ನಡೆಯಲಿದೆ. ಇಸ್ಲಾಂ ಸೇರಿದಂತೆ ಎಲ್ಲ ಧರ್ಮದ ಜನರಿಗೂ ಇವುಗಳಿಂದ ತೊಂದರೆ ಆಗಲಿದೆ. ಈ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಮಾಹಿತಿ ನೀಡಲಾಗುವುದು ಎಂದರು.

ಸಮಿತಿಯ ಉಪಾಧ್ಯಕ್ಷ ಬಿ.ಎಂ.ಮುಮ್ತಾಝ್‌ ಅಲಿ ಮಾತನಾಡಿ, ‘ಅಡ್ಯಾರ್‌– ಕಣ್ಣೂರು ಶಹಾ ಗಾರ್ಡನ್‌ ಎದುರಿನ 5 ಎಕರೆ ವಿಸ್ತೀರ್ಣದ ಜಾಗದಲ್ಲಿ ಸಮಾವೇಶ ನಡೆಯಲಿದೆ. ಕೇಂದ್ರ ಜುಮಾ ಮಸೀದಿ ಎದುರಿನ 5 ಎಕರೆ ಪ್ರದೇಶದಲ್ಲಿ ಸಮಾವೇಶಕ್ಕೆ ಬರುವ ಎಲ್ಲ ಜನರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಜನರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನಿ ಮಾತನಾಡಿ, ‘ಇದು ಮುಸ್ಲಿಂ ಸೆಂಟ್ರಲ್‌ ಕಮಿಟಿಗೆ ಸೀಮಿತವಾದ ಸಮಾವೇಶವಲ್ಲ. ಎಲ್ಲ ಜನರಿಗೂ ಸಂಬಂಧಿಸಿದೆ. ಸಿಎಎ ಮತ್ತು ಎನ್‌ಆರ್‌ಸಿಗಳನ್ನು ಹಿಂಪಡೆಯುವಂತೆ ಸಮಾವೇಶದ ಮೂಲಕ ಆಗ್ರಹಿಸುತ್ತೇವೆ’ ಎಂದರು.

ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷರಾದ ಇಬ್ರಾಹಿಂ ಕೋಡಿಜಾಲ್, ಸಿ.ಮುಹಮ್ಮದ್, ಅಹ್ಮದ್ ಬಾಷಾ ತಂಙಳ್, ಇಮ್ತಿಯಾಝ್ ಕಾರ್ಕಳ, ಕೋಶಾಧಿಕಾರಿ ಮೂಸಾ ಮೊಯ್ದೀನ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT