ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ವಿಮಾನದ ಮೂಲಕ ಅಡಿಕೆ: ಅಕ್ರಮ ತಡೆಗೆ ಕ್ಯಾಂಪ್ಕೊ ಆಗ್ರಹ

Published 23 ಜನವರಿ 2024, 14:27 IST
Last Updated 23 ಜನವರಿ 2024, 14:27 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿ ಮತ್ತು ಮಲೆನಾಡಿನಲ್ಲೂ ಅಡಿಕೆ ಕಳ್ಳ ಸಾಗಣೆಯ ಕಬಂಧಬಾಹು ಚಾಚಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ಕುಮಾರ್ ಕೊಡ್ಗಿ ಒತ್ತಾಯಿಸಿದ್ದಾರೆ.

ವಿದೇಶಿ ಅಡಿಕೆ ಬೇರೆ ಬೇರೆ ಮಾರ್ಗಗಳಲ್ಲಿ ದೇಶಕ್ಕೆ ನುಸುಳಿ ಬರುತ್ತಿದೆ. ಇತ್ತೀಚೆಗೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮಗ್ರ ಕಾರ್ಗೊ ಟರ್ಮಿನಲ್ ಮೂಲಕ ಅಡಿಕೆ ಮಂಗಳೂರಿಗೆ ಬಂದು ಬೇರೆ ಕಡೆಗಳಿಗೆ ರವಾನೆಯಾಗಿದೆ. ಹೀಗೆ ಹೊರ ಭಾಗಗಳಿಂದ ಬರುವ ಅಡಿಕೆಯ ಮೂಲ, ಬೆಲೆ ಮತ್ತು ತೆರಿಗೆ ಪಾವತಿಯಲ್ಲಿ ಆಗುತ್ತಿರುವ ವಂಚನೆ ಬಗ್ಗೆ ಕೂಲಂಕಷ ತನಿಖೆ ನಡೆಯಬೇಕು. ಇದರಿಂದ ಅಡಿಕೆ ದರ ಸ್ಥಿರತೆಗೆ ಶ್ರಮಿಸುತ್ತಿರುವ ಮಾರಾಟ ಸಹಕಾರ ಸಂಸ್ಥೆಗಳು, ಅಡಿಕೆ ಬೆಳೆಗಾರರಿಗೆ ಅನುಕೂಲವಾಗುತ್ತದೆ. ಈ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಸಚಿವ ಪೀಯೂಷ್ ಗೋಯಲ್, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಗಮನ ಸೆಳೆಯಲಾಗಿದೆ ಎಂದು ಅವರು ಹೇಳಿದ್ದಾರೆ. 

ವಿದೇಶದಿಂದ ಅಕ್ರಮ ಅಡಿಕೆ ಅವ್ಯಾಹತವಾಗಿ ಬರುತ್ತಿರುವ ಪರಿಣಾಮವಾಗಿ ದೇಸೀಯ ಮಾರುಕಟ್ಟೆಯಲ್ಲಿ ಅಡಿಕೆ ದರ ಕುಸಿಯುತ್ತಿದ್ದು, ಬೇಡಿಕೆಯೂ ತಗ್ಗಿದೆ. ಕೆಂಪಡಿಕೆ, ಚಾಲಿ ಬೆಲೆ ಗಮನಾರ್ಹವಾಗಿ ಇಳಿಕೆಯಾಗಿದೆ. ಕಸ್ಟಮ್ಸ್ ಸುಂಕರಹಿತವಾಗಿ ಶ್ರೀಲಂಕಾದಿಂದ ಅಡಿಕೆ ಬರುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೇರೆ ದೇಶಗಳಿಂದಲೂ ತೆರಿಗೆ ತಪ್ಪಿಸಿ ಕಳ್ಳಮಾರ್ಗದಲ್ಲಿ ಅಡಿಕೆ ಭಾರತಕ್ಕೆ ಬರುತ್ತಿದೆ. ಇದರ ಪರಿಣಾಮ, ಆಗಸ್ಟ್‌ ವೇಳೆಗೆ ಮಂಗಳೂರು ಹಳೆ ಚಾಲಿಗೆ ಕೆ.ಜಿ.ಗೆ ₹500ರಷ್ಟು ದರವಿತ್ತು. ಈಗ ಇದು ₹420ಕ್ಕೆ ಇಳಿಕೆಯಾಗಿದೆ, ಕೆಂಪಡಿಕೆ ದರವೂ ಕುಸಿದಿದೆ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

60 ಮೂಟೆ ಅಡಿಕೆ: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮಗ್ರ ಸರಕು ಟರ್ಮಿನಲ್ (ಐಸಿಟಿ) ರಫ್ತುದಾರರಿಗೆ ಅನುಕೂಲವಾಗಿದ್ದು, ಜನವರಿ ತಿಂಗಳಲ್ಲಿ 1,519 ಕೆ.ಜಿ ಕೆಂ‍ಪು ತಳಿಯ ಅಡಿಕೆ ವಿಮಾನ ನಿಲ್ದಾಣಕ್ಕೆ ಬಂದಿದೆ.

ಅಗರ್ತಲಾದಿಂದ 60 ಮೂಟೆಗಳಲ್ಲಿ ಅಡಿಕೆ ಬಂದಿದೆ. ಇದನ್ನು ಖರೀದಿಸಿದ ಶಿವಮೊಗ್ಗದ ಕಂಪನಿಗೆ ರಸ್ತೆ ಮೂಲಕ ರವಾನೆಯಾಗಿದೆ. ಈ ಹಿಂದೆ, ಐಸಿಟಿ ಅಡಿಕೆಯ ಒಳಬರುವ ಪಾರ್ಸೆಲ್‌ಗಳನ್ನು ಸಣ್ಣ ಪ್ರಮಾಣದಲ್ಲಿದ್ದರೂ ನಿರ್ವಹಿಸುತ್ತಿತ್ತು ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT