ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜ ಆರೋಪಿಗಳ ಬಂಧನ: ಡಿವೈಎಸ್ಪಿ

ಪೊಲೀಸ್ ಚೌಕಿ ಧ್ವಂಸ ಪ್ರಕರಣ, ಬಕ್ರೀದ್ ಆಚರಣೆ ಪ್ರಯುಕ್ತ ಶಾಂತಿಸಭೆ
Last Updated 18 ಜುಲೈ 2021, 5:43 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ರಾಮಕುಂಜದ ಆತೂರು ಜಂಕ್ಷನ್‌ನಲ್ಲಿ ನಡೆದ ಪೊಲೀಸ್ ಚೌಕಿ ಧ್ವಂಸ ಪ್ರಕರಣ ಹಾಗೂ ಬಕ್ರೀದ್ ಹಬ್ಬ ಆಚರಣೆ ಪ್ರಯುಕ್ತಆತೂರಿನಲ್ಲಿ ಪೊಲೀಸ್ ಶಾಂತಿಸಭೆ ಶುಕ್ರವಾರ ನಡೆಯಿತು.

ಡಿವೈಎಸ್ಪಿ ಡಾ. ಗಾನ ಪಿ.ಕುಮಾರ್ ಮಾತನಾಡಿ, ‘ಆತೂರುನಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ 8 ಆರೋಪಿಗಳ ಬಂಧನವಾಗಿದೆ. ಬಂಧಿತರು ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ದಾಖಲೆಗಳಿವೆ. ಈ ಪ್ರಕರಣದಲ್ಲಿ ಅಮಾಯಕರ ಬಂಧನ ಮಾಡುತ್ತಿಲ್ಲ. ನೈಜ ಆರೋಪಿಗಳನ್ನು ಮಾತ್ರ ಬಂಧಿಸಲಾಗಿದೆ. ಈ ಬಗ್ಗೆ ಜನರಲ್ಲಿ ಗೊಂದಲ ಬೇಡ’ ಎಂದರು.

ಪ್ರಕರಣದ ತನಿಖಾಧಿಕಾರಿ ಪುತ್ತೂರು ಗ್ರಾಮಾಂತರ ಪ್ರಭಾರಿ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಮಾತನಾಡಿ, ‘ಆತೂರಿನಲ್ಲಿ ನಡೆದ ಘಟನೆಗೆ ಸಂಬಂಧಿಸಿ ಸಿಸಿಟಿವಿ ಕ್ಯಾಮೆರಾ ಆಧಾರವಾಗಿಟ್ಟುಕೊಂಡು ಆರೋಪಿಗಳನ್ನು ಬಂಧಿಸುತ್ತಿಲ್ಲ. ಘಟನೆ ವೇಳೆ ಪೊಲೀಸರು ಮಾಡಿರುವ ವಿಡಿಯೊ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿ
ಗಳನ್ನು ಬಂಧಿಸುತ್ತೇವೆ’ ಎಂದರು.

ರಾಮಕುಂಜ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ. ಮಾತನಾಡಿ, ‘ಸಮಾಜಘಾತುಕ ಶಕ್ತಿಗಳಿಗೆ ಶಿಕ್ಷೆ ನೀಡಬೇಕು. ಆತೂರು ಪರಿಸರದಲ್ಲಿ ಅಹಿತಕರ ಘಟನೆ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಚೆಕ್‌ಪೋಸ್ಟ್ ಆಗಬೇಕು’ ಎಂದರು.

ನೈಜ ಆರೋಪಿಗಳನ್ನು ಬಂಧಿಸಿ, ಪ್ರಕರಣವನ್ನು ಬೇಗ ಅಂತ್ಯಗೊಳಿಸಬೇಕು, ಪೊಲೀಸ್ ಚೆಕ್ ಪೋಸ್ಟ್ ನಿರ್ಮಿಸಬೇಕು, ಹೊರಠಾಣೆ ಆಗಬೇಕು ಎಂಬ ಬೇಡಿಕೆಗಳು ಸಭೆಯಲ್ಲಿ ವ್ಯಕ್ತವಾದವು.

ಸಹಕಾರಿ ಸಂಘದ ಅಧ್ಯಕ್ಷ ಧರ್ಮಪಾಲ ರಾವ್, ಮಸೀದಿ ಮಾಜಿ ಅಧ್ಯಕ್ಷ ಎಚ್. ಆದಂ, ಮಾಜಿ ಕಾರ್ಯದರ್ಶಿ ಕೆ.ಎ. ಸುಲೈಮಾನ್ ಝಕರಿಯಾ, ಕುಂಡಾಜೆ, ಆತೂರು ಮಹಾಗಣಪತಿ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯದುಶ್ರೀ, ನಝೀರ್ ಕೊಯಿಲ, ಸಜ್ಜದ್ ಆತೂರು ಮಾತನಾಡಿದರು.

ಕಡಬ ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಜಯಂತಿ ಗೌಡ, ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ ಕದ್ರ, ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷಿತ್ ಕುಮಾರ್, ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ, ಆತೂರು ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್, ಕಾರ್ಯದರ್ಶಿ ಸಿರಾಜುದ್ದೀನ್ ಇದ್ದರು. ಸಬ್ ಇನ್‌ಸ್ಪೆಕ್ಟರ್ರುಕ್ಮ ನಾಯ್ಕ್ ಸ್ವಾಗತಿಸಿದರು. ಬೀಟ್ ಪೊಲೀಸ್ ಹರೀಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT