ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೂರು ಜಾತ್ರೆ: ಬ್ಯಾನರ್‌ ಗೊಂದಲ

ನಗರ ಪೊಲೀಸ್‌ ಕಮಿನಷರ್‌ಗೆ ಡಿವೈಎಫ್‌ಐ ದೂರು
Last Updated 15 ಜನವರಿ 2023, 6:15 IST
ಅಕ್ಷರ ಗಾತ್ರ

ಮಂಗಳೂರು: ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲಿ ‘ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ’ ಎಂದು ಬ್ಯಾನರ್ ಅಳವಡಿಸುವ ಮೂಲಕ ಬೇರೆ ಧರ್ಮದವರು ವ್ಯಾಪಾರ ನಡೆಸುವುದಕ್ಕೆ ಅಡ್ಡಿಉಂಟು ಮಾಡಿದ ಬಗ್ಗೆ ಡಿವೈಎಫ್‌ಐ ನಗರ ಘಟಕವು ನಗರ ಪೊಲೀಸ್‌ ಕಮಿಷನರ್‌ಗೆ ದೂರು ಸಲ್ಲಿಸಿದೆ.

ಕಾವೂರು ಪೊಲೀಸ್‌ ಠಾಣೆಯ ಹತ್ತಿರದಲ್ಲೇ ಇರುವ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಇದೇ 14ರಿಂದ 18ರವರೆಗೆ ನಡಯಲಿದೆ. ಇದೇ 10ರಂದು, ‘ಕಾವೂರು ಜಾತ್ರೆಯಲ್ಲಿ ಸನಾತನ ಧರ್ಮದ ಆಚರಣೆ ಹಾಗೂ ನಂಬಿಕೆಗಳಲ್ಲಿ ವಿಶ್ವಾಸ ಉಳ್ಳ ಹಿಂದೂ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ. ವಿಗ್ರಹಾರಾಧನೆಯನ್ನು ‘ಹರಾಮ್‌’ ಎಂದು ನಂಬಿರುವ ಯಾರಿಒಗೂ ಅವಕಾಶ ಇಲ್ಲ’ ಎಂದು ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗ ದಳದ ಕಾವೂರು ಪ್ರಖಂಡದವರು ಬ್ಯಾನರ್‌ ಅಳವಡಿಸಿದ್ದರು.

’ಈ ಜಾತ್ರೆಯಲ್ಲಿ ವಿವಿಧ ಧಾರ್ಮಿಕ ನಂಬಿಕೆಗಳ ವ್ಯಕ್ತಿಗಳು ಭಾಗವಹಿಸು ತ್ತಾರೆ. ವಿವಿಧ ಧರ್ಮದವರು ಸಂತೆ ವ್ಯಾಪಾರ ಮಾಡುವ ಕ್ರಮವು ಅನಾದಿ ಕಾಲದಿಂದಲೂ ಜಾರಿಯಲ್ಲಿದೆ. ಆದರೆ, ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಎಂಬ ಜನಾಂಗೀಯ ನಿಂದನೆಯ ಬ್ಯಾನರ್ ಅಳವಡಿಸಲಾಗಿತ್ತು. ಸ್ಥಳೀಯ ಪೊಲೀಸರಿಗೆ ಹಾಗೂ ಎಸಿಪಿಯವರ ಗಮನಕ್ಕೆ ಈ ವಿಚಾರವನ್ನು ತಮದ ಬಳಿಕ ಬ್ಯಾನರ್‌ ತೆರವುಗೊಳಿಸಲಾಗಿತ್ತು. ಆದರೆ ಶುಕ್ರವಾರ ಮತ್ತೆ ಬ್ಯಾನರ್ ಅಳವಡಿಸಲಾಗಿದೆ’ ಎಂದು ಡಿವೈಎಫ್‌ಐ ದೂರಿದೆ.

’ಈ ಬಗ್ಗೆ ಸ್ಥಳೀಯ ಪೊಲೀಸರ ಗಮನ ಸೆಳೆದಿದ್ದೆವು. ಆಗ ಒಬ್ಬರು ಸಿಬ್ಬಂದಿ ‘ಹೌದು, ಇದು ಆಡಳಿತ ಸಮಿತಿಯ ತೀರ್ಮಾನ’ ಎಂದು ಪ್ರತಿಕ್ರಿಯಿಸಿದರು. ಆದರೆ ಬ್ಯಾನರ್‌ನಲ್ಲಿ ಎಲ್ಲೂ ಆಡಳಿತ ಮಂಡಳಿಯ ಹೆಸರು ಇಲ್ಲ. ಬದಲಾಗಿ ಬಜರಂಗದಳ, ವಿಶ್ವ ಹಿಂದೂ ಪರಿಷತ್ ಸಂಘಟನೆಗಳ ಹೆಸರು ಇದೆ’ ಎಂದು ಡಿವೈಎಫ್‌ಐ ಹೇಳಿದೆ.

‘ಬ್ಯಾನರ್ ತೆಗೆಯಿಸದಿದ್ದರೆ ವಿವಿಧ ಸಂಘಟನೆಗಳು ಸೇರಿ ಪೊಲೀಸರ ವಿರುದ್ಧವೇ ಪ್ರತಿಭಟನೆ ನಡೆಸುತ್ತೇವೆ’ ಎಂದಾಗ ಸಿಬ್ಬಂದಿ, ‘ಪ್ರತಿಭಟನೆ ಮಾಡಿ, ತೊಂದರೆ ಇಲ್ಲ’ ಎಂದು ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ. ಕಾನೂನುಬಾಹಿರ ಹಾಗೂ ಜನಾಂಗೀಯ ನಿಂದನೆಯ ಕೃತ್ಯವನ್ನು ಬೆಂಬಲಿಸಿದ ಸಿಬ್ಬಂದಿಯ ಈ ಕೃತ್ಯ ಪೊಲೀಸ್ ಇಲಾಖೆಯ ನಿಯಮಾವಳಿಗೆ ವಿರುದ್ಧವಾದುದು. ತಾವು ಕೂಡಲೇ ಮಧ್ಯಪ್ರವೇಶಿಸಿ ಬ್ಯಾನರ್ ತೆರವುಗೊಳಿಸಬೇಕು. ಬೇಜವಾಬ್ದಾ ರಿಯಿಂದ ವರ್ತಿಸಿದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಕೊಳ್ಳಬೇಕು’ ಎಂದು ಡಿವೈಎಫ್‌ಐ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT