ಶುಕ್ರವಾರ, ಜನವರಿ 21, 2022
30 °C

ಬಿಡಿಎಸ್‌ ವಿದ್ಯಾರ್ಥಿನಿ ಪ್ರವೇಶಾತಿಗೆ ಹೈಕೋರ್ಟ್‌ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸುರತ್ಕಲ್‌ನ ‘ಶ್ರೀನಿವಾಸ್ ದಂತ ವಿಜ್ಞಾನಗಳ ಸಂಸ್ಥೆ’ಯಲ್ಲಿ ವಿದ್ಯಾರ್ಥಿನಿಯೊಬ್ಬರು ದಂತ ವೈದ್ಯಕೀಯ ಪದವಿಗೆ (ಬಿಡಿಎಸ್) ಪಡೆದಿರುವ ಪ್ರವೇಶಾತಿ ಅನುಮೋದಿಸುವಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್) ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತಂತೆ ವಿದ್ಯಾರ್ಥಿನಿ ನಿಧಿ ಎಸ್. ಶೆಟ್ಟಿಗಾರ್ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ಮಾನ್ಯ ಮಾಡಿದೆ.

‘ಪ್ರವೇಶಾತಿಯನ್ನು ಮೂರು ವಾರದಲ್ಲಿ ಅನುಮೋದಿಸಬೇಕು. ಪದವಿ ವ್ಯಾಸಂಗ ಮುಂದುವರಿಸಲು ಮತ್ತು ಎರಡನೇ ವರ್ಷದ ಪರೀಕ್ಷೆ ಬರೆಯಲು ಅನುಮತಿ ನೀಡಬೇಕು. ಈಗಾಗಲೇ ವಿದ್ಯಾರ್ಥಿನಿ ಬರೆದಿರುವ ಮೊದಲನೇ ವರ್ಷದ ಫಲಿತಾಂಶ ಪ್ರಕಟಿಸಬೇಕು’ ಎಂದು ನಿರ್ದೇಶಿಸಿದ ನ್ಯಾಯಪೀಠ ಅರ್ಜಿ ವಿಲೇವಾರಿ ಮಾಡಿದೆ.

‘ಆರ್‌ಜಿಯುಎಚ್‌ಎಸ್ ಮತ್ತು ಕೆಇಎ ತಪ್ಪಿಗೆ ವಿದ್ಯಾರ್ಥಿನಿ ಕಿರುಕುಳ ಅನುಭವಿಸುವುದು ಸರಿಯಲ್ಲ. ಪದವಿ ವ್ಯಾಸಂಗ ಮುಂದುವರಿಸಲು ವಿದ್ಯಾರ್ಥಿನಿಗೆ ಯಾವುದೇ ಅಡ್ಡಿಯಿಲ್ಲ’ ಎಂದು ನ್ಯಾಯಪೀಠ ಹೇಳಿದೆ. ವಿದ್ಯಾರ್ಥಿನಿ ಪರ ವಕೀಲ ಎನ್.ರವೀಂದ್ರ ನಾಥ್ ಕಾಮತ್ ವಾದ ಮಂಡಿಸಿದ್ದರು.

ಪ್ರಕರಣವೇನು?: ನಿಧಿ ಎಸ್‌. ಶೆಟ್ಟಿಗಾರ್, ನಾಲ್ಕು ವರ್ಷದ ಬಿಡಿಎಸ್ ಕೋರ್ಸ್‌ಗೆ 2019–20ರಲ್ಲಿ ಪ್ರವೇಶ ಪಡೆದಿದ್ದರು. ವೈದ್ಯಕೀಯ ಶಿಕ್ಷಣ ಇಲಾಖೆ ಕಾಲೇಜಿಗೆ ಕಳುಹಿಸಿದ ಪ್ರವೇಶ ಪಟ್ಟಿಯಲ್ಲಿ ಅವರ ಹೆಸರಿತ್ತು. ಆದರೆ, ಕೆಇಎ ಪೋರ್ಟಲ್‌ನಲ್ಲಿ ವಿದ್ಯಾರ್ಥಿನಿ ಬಿಡಿಎಸ್‌ಗೆ ಪ್ರವೇಶ ಪಡೆದ ವಿವರ ಭರ್ತಿಯಾಗಿಲ್ಲ ಎಂಬ ಕಾರಣಕ್ಕೆ ಆರ್‌ಜಿಯುಎಚ್‌ಎಸ್ ಮೊದಲ ವರ್ಷದ ಪರೀಕ್ಷೆಗೆ ಪ್ರವೇಶ ಪತ್ರ ವಿತರಿಸಲಿಲ್ಲ. ಈ ಕಾರಣಕ್ಕೆ ವಿದ್ಯಾರ್ಥಿನಿ ಹೈಕೋರ್ಟ್ ಮೆಟ್ಟಿಲೇರಿದ್ದರು. 2021ರ ಫೆಬ್ರುವರಿ 1ರಂದು ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶದ ಮೇರೆಗೆ ಮೊದಲನೆ ವರ್ಷದ ಪರೀಕ್ಷೆ ಬರೆದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು