ಶುಕ್ರವಾರ, ನವೆಂಬರ್ 22, 2019
26 °C
ಇನ್ನೂ ಇಬ್ಬರು ಸದಸ್ಯರ ಇಂಗಿತ: ಅಧ್ಯಕ್ಷ ರಹೀಂ ಉಚ್ಚಿಲ

ಬ್ಯಾರಿ ಅಕಾಡೆಮಿಗೆ ಮುನೀರ್ ರಾಜೀನಾಮೆ

Published:
Updated:

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯತ್ವಕ್ಕೆ ಮುನೀರ್‌ ಬಾವ ರಾಜೀನಾಮೆ ನೀಡಿದ್ದಾರೆ.

‘ನಾನು ಬ್ಯಾರಿ ಸಾಹಿತ್ಯದಲ್ಲಿ ಕೆಲಸ ಮಾಡಿಲ್ಲ. ನನ್ನ ಕಾರ್ಯಕ್ಷೇತ್ರವೇ ಬೇರೆ. ಹೀಗಾಗಿ, ಬ್ಯಾರಿ ಸಾಹಿತ್ಯ ವಲಯದಲ್ಲಿ ಕೆಲಸ ಮಾಡಿದವರಿಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿ, ಅಧ್ಯಕ್ಷರಿಗೆ ರಾಜೀನಾಮೆಯನ್ನು ಕಳುಹಿಸಿಕೊಟ್ಟಿದ್ದೇನೆ’ ಎಂದು ಮುನೀರ್‌ ಬಾವ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್‌ ಬೋರ್ಡ್‌ ಉಪಾಧ್ಯಕ್ಷರಾಗಿದ್ದ ಅವರು, ಸದ್ಯ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.  

‘ಸದಸ್ಯತ್ವಕ್ಕೆ ಒಬ್ಬರು ರಾಜೀನಾಮೆ ನೀಡುವುದಾಗಿ ಸಂದೇಶ ಕಳಹಿಸಿದ್ದು, ಇನ್ನಿಬ್ಬರು ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಉಳಿದಂತೆ ನಾಲ್ವರು ಸದಸ್ಯರು ನನ್ನನ್ನು ಭೇಟಿಯಾಗಿ ಅಭಿಪ್ರಾಯ ತಿಳಿಸುವುದಾಗಿ ಹೇಳಿದ್ದಾರೆ’ ಎಂದು ಅಧ್ಯಕ್ಷ ರಹೀಂ ಉಚ್ಚಿಲ ಈ ಬಗ್ಗೆ ಪ್ರತಿಕ್ರಿಯಿಸಿದರು.

‘ಸದಸ್ಯರ ಅಭಿಪ್ರಾಯಗಳ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರ ಗಮನಕ್ಕೆ ತಂದಿದ್ದೇನೆ. ‘ಸದಸ್ಯತ್ವ ಸ್ವೀಕಾರವು ವೈಯಕ್ತಿಕ ನಿಲುವಾಗಿದ್ದು, ಗೌರವಿಸಿ. ರಾಜೀನಾಮೆಯಿಂದ ತೆರವಾದ ಹಾಗೂ ಬಾಕಿ ಉಳಿದ ಸ್ಥಾನಕ್ಕೆ ಬ್ಯಾರಿ ಸಾಹಿತ್ಯದಲ್ಲಿ ಕೆಲಸ ಮಾಡಿದ ವ್ಯಕ್ತಿಗಳ ಹೆಸರನ್ನು ಕಳುಹಿಸಿಕೊಡಿ. ಶೀಘ್ರವೇ ನೇಮಕ ಮಾಡಲಾಗುವುದು’ ಎಂದು ಸಚಿವರು ಸೂಚಿಸಿದ್ದಾರೆ’ ಎಂದು ರಹೀಂ ಉಚ್ಚಿಲ ವಿವರಿಸಿದರು.

‘ಈ ತನಕ ಯಾವುದೇ ಸದಸ್ಯರ ರಾಜೀನಾಮೆ ಪತ್ರವು ಬಂದಿಲ್ಲ. ಭಾನುವಾರದ ಕಾರಣ ರಜೆ ಇತ್ತು. ಯಾರೇ ರಾಜೀನಾಮೆ ಸಲ್ಲಿಸಿದರೂ, ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ಎಲ್ಲ ಸದಸ್ಯರ ಒಪ್ಪಿಗೆ ಪತ್ರವನ್ನು ಸರ್ಕಾರಕ್ಕೆ ಕಳುಹಿಸಿಕೊಡಬೇಕಾಗಿದ್ದು, ಆ ಸಂದರ್ಭದಲ್ಲಿ ನಿರ್ಧಾರಗಳು ಸ್ಪಷ್ಟಗೊಳ್ಳಲಿವೆ’ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ರಾಜೇಶ್ ತಿಳಿಸಿದರು. 

ಪ್ರತಿಕ್ರಿಯಿಸಿ (+)