ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಆಘಾತ: ಬೀಡಿ ಉದ್ಯಮ ಪುನರಾರಂಭಕ್ಕೆ ಹಿನ್ನಡೆ

ಕೋವಿಡ್‌ ಸೋಂಕು ಹೆಚ್ಚಳ: ಆಸಕ್ತಿ ತೋರದ ಬೀಡಿ ಕಂಪನಿಗಳು
Last Updated 27 ಏಪ್ರಿಲ್ 2020, 3:23 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೀಡಿ ‌ಉದ್ಯಮ ಪುನರಾರಂಭಕ್ಕೆ ಜಿಲ್ಲಾಡಳಿತ ಹಸಿರು ನಿಶಾನೆ ತೋರಿದ್ದರೂ ಬೀಡಿ ಕಂಪನಿಗಳಲ್ಲಿ ನಿರೀಕ್ಷಿತ ಉತ್ಸಾಹ ಕಾಣುತ್ತಿಲ್ಲ. ವಾರದ ಅಂತರದಲ್ಲಿ ಜಿಲ್ಲೆಯಲ್ಲಿ ಇಬ್ಬರು ಕೋವಿಡ್‌–19ನಿಂದ ಮೃತರಾಗಿರುವುದು ಉದ್ಯಮ ಚೇತರಿಕೆಗೆ ಹಿನ್ನಡೆಯಾಗಿದೆ.

ಲಾಕ್‌ಡೌನ್‌ ಜಾರಿಯಾದ ಬಳಿಕ ಜಿಲ್ಲೆಯಲ್ಲಿ ಬೀಡಿ ಉದ್ಯಮ ಸ್ಥಗಿತವಾಗಿತ್ತು. ಜಿಲ್ಲೆಯಲ್ಲಿ ಸುಮಾರು 1.90 ಲಕ್ಷ ಬೀಡಿ ಕಾರ್ಮಿಕರಿದ್ದು, ಅವರ ಜೀವನ ನಿರ್ವಹಣೆಗೂ ಸಮಸ್ಯೆಯಾಗಿತ್ತು. ಹೀಗಾಗಿ, ಮತ್ತೆ ಉದ್ಯಮವನ್ನು ಆರಂಭಿಸುವಂತೆ ಕಾರ್ಮಿಕ ಸಂಘಟನೆಗಳು, ಬೀಡಿ ಕಂಪನಿಗಳು ಜಿಲ್ಲಾಡಳಿತದ ಮೇಲೆ ಒತ್ತಡ ತಂದಿದ್ದವು. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಏ. 18ರಂದು ಸಭೆ ನಡೆದು, ಏ.20ರಿಂದಲೇ ಶೇ 50ರಷ್ಟು ಕೆಲಸ ನೀಡಲು ಬೀಡಿ ಕಂಪನಿಗಳಿಗೆ ಅನುಮತಿ ನೀಡಲಾಗಿತ್ತು.

‘ಕೋವಿಡ್‌ ಸೋಂಕಿಗೆ ಸಂಬಂಧಿಸಿದಂತೆ ಈಚೆಗೆ ನಡೆಯುತ್ತಿರುವ ಬೆಳವಣಿಗೆಯು ಬೀಡಿ ಕಂಪನಿಗಳ ಮಾಲೀಕರಿಗೆ ತಲೆನೋವು ತಂದಿರಬಹುದು. ಹೀಗಾಗಿ, ಜಿಲ್ಲೆಯಲ್ಲಿರುವ ಏಳೆಂಟು ಕಂಪನಿಗಳಲ್ಲಿ ಕೆಲ ಕಂಪನಿಗಳು ಮಾತ್ರ ಕಾರ್ಮಿಕರಿಗೆ ಕೆಲಸ ನೀಡಲು ಆರಂಭಿಸಿವೆ. ಮತ್ತೆ ಕೆಲವು ಕಂಪನಿಗಳು ಇನ್ನಷ್ಟೇ ಆರಂಭಗೊಳ್ಳಬೇಕಿದೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಷನ್‌ನ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ.

‘ಬೀಡಿ ಕಂಪನಿಗಳಿಂದ ಕಚ್ಚಾವಸ್ತುಗಳನ್ನು ಸಾಗಿಸಲು ಕಾರ್ಮಿಕರಿಗೆ ತೊಂದರೆಯಾಗಿದೆ. ಪಾಸ್‌ ಇದ್ದರೆ ಮಾತ್ರ ಚೆಕ್‌ಪೋಸ್ಟ್‌ಗಳಲ್ಲಿ ಬಿಡಲಾಗುತ್ತಿದೆ. ಬೀಡಿ ಉದ್ಯಮದ ಕುರಿತು ಇಲಾಖೆಗೆ ಜಿಲ್ಲಾಡಳಿತದಿಂದ ಯಾವುದೇ ಅಧಿಕೃತ ಸೂಚನೆ ಬಂದಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಹೀಗಾಗಿ, ವಾಹನಗಳನ್ನು ಸೀಜ್‌ ಮಾಡುವ ಅಪಾಯ ಇರುವುದರಿಂದ ಬಹುತೇಕ ಕಾರ್ಮಿಕರು ಕೆಲಸವನ್ನು ಆರಂಭಿಸಿಲ್ಲ’ ಎನ್ನುತ್ತಾರೆ ಸಿಐಟಿಯು ಮುಖಂಡ ವಸಂತ ಆಚಾರಿ.

‘ಬೀಡಿ ಉದ್ಯಮ ಕಾರ್ಯಾರಂಭಕ್ಕೆಜಿಲ್ಲಾಡಳಿತ ಅವಕಾಶ ನೀಡಿರುವುದು ಸ್ವಾಗತಾರ್ಹ. ಆದರೆ, ಚೆಕ್‌ಪೋಸ್ಟ್‌ಗಳಲ್ಲಿ ಬೀಡಿಯ ಕಚ್ಚಾವಸ್ತುಗಳ ವಾಹನಗಳನ್ನು ಪೊಲೀಸರು ತಡೆಯುತ್ತಿದ್ದಾರೆ. ಈ ಬಗ್ಗೆ ಪೊಲೀಸ್‌ ಇಲಾಖೆಗೆ ಜಿಲ್ಲಾಡಳಿತ ಸ್ಪಷ್ಟ ನಿರ್ದೇಶನ ನೀಡಲಿ’ ಎಂದು ಒತ್ತಾಯಿಸುತ್ತಾರೆ ಗುತ್ತಿಗೆದಾರ ಸುಂದರ ಕೋಟ್ಯಾನ್‌ ನಾರಾವಿ.

ಉಡುಪಿಯಲ್ಲೂ ಸಂಪೂರ್ಣ ಸ್ಥಗಿತ

ಉಡುಪಿ ಜಿಲ್ಲೆಯಲ್ಲಿ 20 ಸಾವಿರಕ್ಕೂ ಅಧಿಕ ಬೀಡಿ ಕಾರ್ಮಿಕರು ಇದ್ದಾರೆ. ಲಾಕ್‌ಡೌನ್‌ ಘೋಷಣೆಯಾದ ಬಳಿಕ ಜಿಲ್ಲೆಯಲ್ಲಿ ಬೀಡಿ ಉದ್ಯಮ ಸಂಪೂರ್ಣ ಸ್ಥಗಿತಗೊಂಡಿದೆ. ಮಂಗಳೂರಿನಿಂದ ಕಚ್ಚಾವಸ್ತುಗಳ ಸಾಗಾಟ ಆರಂಭವಾದ ಬಳಿಕ ಜಿಲ್ಲೆಯಲ್ಲಿ ಬೀಡಿ ಉದ್ಯಮ ಮತ್ತೆ ಆರಂಭವಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT