ಸೋಮವಾರ, ಜೂನ್ 21, 2021
23 °C
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ಬೀಡಿ ಉದ್ಯಮ ಪುನರಾರಂಭ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೋವಿಡ್‌ ಮಾರ್ಗಸೂಚಿ ಯನ್ನು ಅನುಸರಿಸಿ, ಬೀಡಿ ಉದ್ಯಮ ಆರಂಭಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದ್ದಾರೆ. ಅದರಂತೆ ಬೀಡಿ ಉದ್ಯಮದ ಪುನರಾರಂಭಕ್ಕೆ ಅವಕಾಶ ನೀಡಲಾಗಿದೆ ಎಂದು ಸಹಾಯಕ ಕಾರ್ಮಿಕ ಆಯುಕ್ತರು ತಿಳಿಸಿದ್ದಾರೆ.

ಕೋವಿಡ್ 2ನೇ ಅಲೆಯಿಂದಾಗಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಬೀಡಿ ಕಾರ್ಮಿಕರು ಕೆಲಸವಿಲ್ಲದೇ ಸಂಕಷ್ಟಕ್ಕೆ ಒಳಗಾಗಿದ್ದು, ಬೀಡಿ ಕಟ್ಟುವ ಕಾರ್ಮಿಕರು ಗೃಹ ಕಾರ್ಮಿಕರಾಗಿದ್ದಾರೆ. ಯಾವುದೇ ಚಲನ ವಲನವಿಲ್ಲದೇ ಮನೆಯಲ್ಲಿಯೇ ಕೆಲಸ ನಿರ್ವಹಿಸುತ್ತಾರೆ. ಬೀಡಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಕಮಿಷನರ್ ಜೊತೆ ವಿವರವಾಗಿ ಚರ್ಚಿಸಿದರು.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬೀಡಿ ಉತ್ಪಾದಕರ ಸಭೆ ಕರೆದು ಬೀಡಿ ಉದ್ದಿಮೆಯನ್ನು ಪುನಾರಾರಂಭಿಸಲು ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಿಗೆ ಸೂಚಿ ಸಿದ್ದರು. ಅದರ ಫಲವಾಗಿ, ಕೋವಿಡ್ 19 ಸಂಬಂಧ ಕೇಂದ್ರ ಮತ್ತು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಉಲ್ಲಂಘನೆ ಆಗದಂತೆ ಬೀಡಿ ಉದ್ಯಮ ಪುನರಾರಂಭಿಸಬಹುದು ಎಂದು ಆಯುಕ್ತರು ಸೂಚನೆ ನೀಡಿದ್ದಾರೆ.

ಬೀಡಿ ಉದ್ದಿಮೆಗೆ ಸಂಬಂಧಪಟ್ಟ ಗುತ್ತಿಗೆದಾರರು, ಲೇಬಲ್ ಕೆಲಸಗಾರರು ಮತ್ತು ಕಚೇರಿಯ ಸಿಬ್ಬಂದಿ ಸಾಧ್ಯವಾದಷ್ಟು ಕಡಿಮೆ ಸಂಖ್ಯೆಯಲ್ಲಿ ಉದ್ಯಮಗಳಿಗೆ ಹೋಗಿ ಬರಲು, ಕಚ್ಚಾ ವಸ್ತುಗಳನ್ನು ಮತ್ತು ಸಿದ್ಧಪಡಿಸಿದ ಬೀಡಿಗಳ ಸಾಗಾಣಿಕೆ ಪುನರ್ ಆರಂಭಿಸಬಹುದು ಎಂದು ತಿಳಿಸಿದ್ದಾರೆ.

ಸಾಲ ವಸೂಲಿ ಅವಧಿ ಮುಂದೂಡಿ: ವಿವಿಧ ಮೂಲಗಳಿಂದ ಸಾಲ ಪಡೆದ ಬಡವರು, ರೈತರು, ಕೂಲಿ ಕಾರ್ಮಿಕರು ಸೇರಿದಂತೆ ಅನೇಕರು ಕೋವಿಡ್‌ ಸಂಕಷ್ಟ ಕಾಲದಲ್ಲಿ ಸಾಲ ಮರು ಪಾವತಿಸಲಾಗದಷ್ಟು ಆರ್ಥಿಕ ವಾಗಿ ಕಂಗೆಟ್ಟಿದ್ದಾರೆ. ಸಾಲ ಮರುಪಾವತಿ ಯನ್ನು 6 ತಿಂಗಳ ಅವಧಿಗೆ ಮುಂದೂ ಡುವಂತೆ ಸಚಿವ ಶ್ರೀನಿವಾಸ ಪೂಜಾರಿ, ಸಿ.ಎಂ.ಗೆ ಮನವಿ ಮಾಡಿದ್ದಾರೆ.

ಇಂತಹ ಸಂದಿಗ್ಧ ಸ್ಥಿತಿಯಲ್ಲಿ ವಿವಿಧ ಹಣಕಾಸು ಸಂಸ್ಥೆಗಳು ಹಾಗೂ ಖಾಸಗಿ ಲೇವಾದೇವಿದಾರರು ಸಾಲದ ಮರುಪಾವತಿಗೆ ಒತ್ತಾಯಿಸುತ್ತಿದ್ದು, ಬಡಜನರು ಸಾಲ ಮರುಪಾತಿಸಲು ಅಶಕ್ತರಾಗಿದ್ದಾರೆ. ಮುಖ್ಯಮಂತ್ರಿಗಳು ಈ ಮನವಿಯನ್ನು ಪರಿಗಣಿಸಿ ರಾಜ್ಯದ ಎಲ್ಲ ಬ್ಯಾಂಕ್‌ಗಳು ಹಾಗೂ ಇತರ ಹಣಕಾಸು ಸಂಸ್ಥೆಗಳು ಮತ್ತು ಸಾಲ ನೀಡಿದ ಎಲ್ಲ ಸಂಸ್ಥೆಗಳು ಸಾಲ ವಸೂಲಿ ಮಾಡಲು ಇನ್ನು 6 ತಿಂಗಳ ಅವಧಿ ಮುಂದೂಡಿ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಮದುವೆ ಸಮಾರಂಭಗಳಿಗೆ ಅವಕಾಶ

ಜಿಲ್ಲೆಯಲ್ಲಿ ಇತ್ತೀಚೆಗೆ ತೆಗೆದುಕೊಂಡ ನಿರ್ಣಯದಂತೆ ಮೇ 15 ರ ನಂತರ ಮದುವೆ ಸಮಾರಂಭಗಳನ್ನು ನಡೆಸಬಾರದೆಂದು ಜಿಲ್ಲೆಯ ಜನತೆಗೆ ವಿನಂತಿ ಮಾಡಲಾಗಿತ್ತು. ಆದರೆ ಈಗಾಗಲೇ ಮದುವೆಗೆ ದಿನ ನಿಗದಿಗೊಳಿಸಿದ್ದು, ಎಲ್ಲ ಪೂರ್ವಸಿದ್ಧತೆ ಮಾಡಿಕೊಂಡಿದ್ದು, ನಿಲುವು ಪುನರ ಪರಿಶೀಲಿಸಲು ಸಾರ್ವಜನಿಕವಾಗಿ ಮನವಿಗಳು ಬಂದಿವೆ. ಅವುಗಳನ್ನು ಪರಿಗಣಿಸಿ, ಮೇ15 ರ ನಂತರವೂ 25 ಜನರಿಗೆ ಸೀಮಿತಗೊಳಿಸಿ ವಿವಾಹ ಕಾರ್ಯಕ್ರಮಕ್ಕೆ ಅವಕಾಶ ನೀಡಲು ಜಿಲ್ಲಾಡಳಿತ ಆದೇಶಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.

ವಾರಾಂತ್ಯ ಕರ್ಫ್ಯೂ ಇಲ್ಲ: ಜಿಲ್ಲಾಧಿಕಾರಿ

ಕೋವಿಡ್–19 ಸೋಂಕು ತಡೆಗೆ ಮೇ 10 ರಿಂದ 24 ರವರೆಗೆ ಕಟ್ಟುನಿಟ್ಟಿನ ಕೋವಿಡ್‌ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಪ್ರತ್ಯೇಕವಾಗಿ ಯಾವುದೇ ವಾರಾಂತ್ಯದ ಕರ್ಫ್ಯೂ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಲ್ಲಿ ಮನವಿ ಮಾಡಿಕೊಂಡ ಪ್ರಕಾರ, ವಾರಾಂತ್ಯದ ಕರ್ಫ್ಯೂ ರದ್ದುಗೊಳಿಸುವಂತೆ ಉಸ್ತುವಾರಿ ಸಚಿವರು ಆದೇಶಿಸಿದ್ದಾರೆ. ವಾರಾಂತ್ಯದಲ್ಲೂ ಎಂದಿನಂತೆ ಬೆಳಿಗ್ಗೆ ಅಗತ್ಯ ಸಾಮಗ್ರಿಗಳ ಖರೀದಿಗೆ ಅವಕಾಶ ನೀಡಿದ್ದು, ಉಳಿದಂತೆ ಲಾಕ್ ಡೌನ್ ಜಾರಿಯಲ್ಲಿರುತ್ತದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು