ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಕಣ್ಣ ಚಹಾ ಮಾಡಿದ ಬಿಜೆಪಿ ಕಾರ್ಯಕರ್ತೆಯರು

ಹಾಲು, ಇಂಧನ ಬೆಲೆ ಏರಿಸಿದ್ದಕ್ಕೆ ವಿರೋಧ; ಕಾಂಗ್ರೆಸ್ ಸರ್ಕಾರದ ವಿರುದ್ಧ ಮೊಳಗಿದ ತುಳು ಘೋಷಣೆ
Published 2 ಜುಲೈ 2024, 4:47 IST
Last Updated 2 ಜುಲೈ 2024, 4:47 IST
ಅಕ್ಷರ ಗಾತ್ರ

ಮಂಗಳೂರು: ಹಾಲು ಮತ್ತು ಇಂಧನ ಬೆಲೆ ಏರಿಸಿ ಕಾಂಗ್ರೆಸ್ ಸರ್ಕಾರ ಜನರಿಗೆ ತೊಂದರೆ ಮಾಡಿದೆ ಎಂದು ಆರೋಪಿಸಿ ಬಿಜೆಪಿ ಮಹಿಳಾ ಮೋರ್ಚಾ ಮಂಗಳೂರು ದಕ್ಷಿಣ ಮಂಡಲದ ಕಾರ್ಯಕರ್ತೆಯರು ತಹಶೀಲ್ದಾರ್ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.

ರಸ್ತೆ ಬದಿಯಲ್ಲಿ ಗ್ಯಾಸ್ ಸ್ವೌ ಉರಿಸಿ ಕಣ್ಣ ಚಾ (ಹಾಲು ಹಾಕದ ಚಹಾ) ತಯಾರಿಸಿದ ಕಾರ್ಯಕರ್ತೆಯರು ಕನ್ನಡದ ಜೊತೆ ತುಳುವಿನಲ್ಲೂ ಘೋಷಣೆಗಳನ್ನು ಕೂಗಿದರು. ಪಂಚಭಾಗ್ಯಗಳಿಗೆ ಹಣ ಹೊಂದಿಸಲು ಜನರ ಮೇಲೆ ಆರ್ಥಿಕ ಹೊರೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.

‘ಗೃಹಲಕ್ಷ್ಮಿ ಗೃಹಲಕ್ಷ್ಮಿ ಪಂಡೆರ್; ಕಣ್ಣ ಚಹಾ ಕೊರಿಯೆರ್’ (ಗೃಹಲಕ್ಷ್ಮಿ ಮೂಲಕ ಮಹಿಳೆಯರ ಉದ್ದಾರ ಎಂದು ಹೇಳಿ ಹಾಲು ಹಾಕದ ಚಹಾ ಕೂಡಿಯುವಂತೆ ಮಾಡಿದರು), ‘ಗೃಹಲಕ್ಷ್ಮಿ ಗೃಹಲಕ್ಷ್ಮಿ ಪಂಡೆರ್; ಕೈಕ್ ಚೆಂಬು ಕೊರಿಯೆರ್‌’ (ಗೃಹಲಕ್ಷ್ಮಿಯ ಪ್ರಚಾರ ಮಾಡುತ್ತಲೇ ಕೈಗೆ ಚೊಂಬು ಕೊಟ್ಟರು) ಎಂಬಿತ್ಯಾದಿ ಘೋಷಣೆಗಳು ಮೊಳಗಿದವು. ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಇತ್ಯಾದಿ ಘೋಷಣೆಗಳ ನಡುವೆ, ‘ಮಹಿಳೆಯರಿಗೆ ತೊಂದರೆ ಆಗುತ್ತಿದ್ದು ಮಹಿಳಾ ಶಕ್ತಿ ಎಚ್ಚೆತ್ತುಕೊಂಡರೆ ಸರ್ಕಾರಕ್ಕೆ ತೊಂದರೆ’ ಎಂದು ಹೇಳಿದರು. ಏನಿಲ್ಲ..ಏನಿಲ್ಲ..ನಿನ್ನ ನನ್ನ ನಡುವೆ ಏನಿಲ್ಲ ಎಂಬ ಹಾಡಿನ ಧಾಟಿಯಲ್ಲಿ ಹಾಲಿಲ್ಲ..ಹಾಲಿಲ್ಲ..ಇನ್ನು ಮುಂದೆ ಕುಡಿಯಲು ಹಾಲಿಲ್ಲ ಎಂದು ಹಾಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಮಂಜುಳಾ ಅನಿಲ್ ರಾವ್, ‘ಎಲ್ಲರೂ ಆರೋಗ್ಯ ಕಾಪಾಡುವುದಕ್ಕಾಗಿ ಹಾಲು ಸೇವಿಸುತ್ತಾರೆ. ಆದರೆ ಸರ್ಕಾರ ಹಾಲಿನ ಬೆಲೆಯನ್ನೇ ಹೆಚ್ಚಿಸಿ ಅನ್ಯಾಯ ಮಾಡಿದೆ. ಹೇಳಿದ್ದೊಂದು‌ ಮಾಡಿದ್ದೊಂದು ಸರ್ಕಾರ ಎಂಬುದೊಂದು ಇದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ’ ಎಂದು ದೂರಿದರು.

ಜಿಲ್ಲಾ ಘಟಕದ ಕಾರ್ಯದರ್ಶಿ ಪೂರ್ಣಿಮಾ ಮಾತನಾಡಿ ‘ಹಾಲಿನ ಬೆಲೆ ಹೆಚ್ಚು ಮಾಡಿದ್ದರಿಂದ ಪುಟ್ಟ ಮಕ್ಕಳ ಹೊಟ್ಟೆಗೂ ಸರ್ಕಾರ ಪೆಟ್ಟು ಹಾಕಿದೆ. ಹೆಚ್ಚುವರಿಯಾಗಿ 50 ಎಂಎಲ್ ಹಾಲು ಕೊಡಿ ಎಂದು ಗ್ರಾಹಕರು ಕೇಳಲಿಲ್ಲ. ಆದರೂ ಒತ್ತಾಯಪೂರ್ವಕವಾಗಿ ಕೊಟ್ಟಿದ್ದಾರೆ. ರೈತರ ಸಬ್ಸಿಡಿ ₹ 1100 ಕೋಟಿ ಕೊಡದೆ ರೈತರನ್ನು ಸರ್ಕಾರ ವಂಚಿಸಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಶುಭಂ ಹಾಲಿನ ಒಂದು ಲೀಟರ್ ಹಾಲು ಬರುತ್ತಿಲ್ಲ. ಅರ್ಧ ಲೀಟರಿಗೆ ₹ 27 ಇದ್ದು ಎರಡು ಪ್ಯಾಕೆಟ್ ಖರೀದಿಸಿದರೆ ಒಟ್ಟು ₹ 54 ಕೊಡಬೇಕಾಗುತ್ತದೆ’ ಎಂದು ಹೇಳಿದರು.

‘ಸಿದ್ದರಾಮಯ್ಯ ಸರ್ಕಾರ ಇನ್ನೂ ನಾಲ್ಕು ವರ್ಷ ಮುಂದುವರಿದರೆ ಜನರಿಗೆ ತುಂಬ ಸಂಕಷ್ಟ ಆಗಲಿದೆ. ಕಾಂಗ್ರೆಸ್‌ನಲ್ಲಿ ಒಳಜಗಳ ಹೆಚ್ಚಾಗುತ್ತಿರುವುದನ್ನು ಗಮನಿಸಿದರೆ ಬಿಜೆಪಿ ಸುಲಭವಾಗಿ ಅಧಿಕಾರ ಪಡೆಯುವ ಲಕ್ಷಣ ಕಾಣಿಸುತ್ತಿದೆ‌.‌ ಬೆಲೆ ಹೆಚ್ಚಿಸಿ ಗುಳುಂ ಮಾಡಿದ ಹಣ ಹಂಚಿಕೊಳ್ಳುವುದಕ್ಕಾಗಿ ಅಧಿಕಾರಕ್ಕೆ ಕಿತ್ತಾಡುತ್ತಿದ್ದಾರೆ’ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಶಕೀಲಾ ಕಾವ, ರಮೇಶ್ ಕೊಂಬೆಟ್ಟು, ಯತೀಶ್ ಆರ್ವಾರ್, ಸಂಧ್ಯಾ ವೆಂಕಟೇಶ್, ಮೋನಪ್ಪ ಭಂಡಾರಿ, ರವಿಶಂಕರ್ ಮಿಜಾರು, ನಿತಿನ್ ಕುಮಾರ್, ವಿಜಯಕುಮಾರ್ ಶೆಟ್ಟಿ, ರಮೇಶ್ ಹೆಗ್ಡೆ, ಯಶ್ವಿತ್ ಕೊಟ್ಟಾರಿ, ಸಂಜಯ್ ಪ್ರಭು, ಕಮಲಾ ಮತ್ತು ಶಬರಿ ಇದ್ದರು.
ಶಬರಿಬಿಜೆಪಿ ಕಾರ್ಯಕರ್ತೆಯರು ಹಾಲು ಹಾಕದ ಚಹಾ ತಯಾರಿಸಿದ ಹಂಚಿದರು –ಪ್ರಜಾವಾಣಿ ಚಿತ್ರ 
ಬಿಜೆಪಿ ಕಾರ್ಯಕರ್ತೆಯರು ಹಾಲು ಹಾಕದ ಚಹಾ ತಯಾರಿಸಿದ ಹಂಚಿದರು –ಪ್ರಜಾವಾಣಿ ಚಿತ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT