ಗುರುವಾರ , ಜೂನ್ 24, 2021
23 °C

ಆಡಳಿತ ವೈಫಲ್ಯ ಮುಚ್ಚಲು ಶಾಸಕರ ಯತ್ನ: ವಿನಯ್‌ರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಲಸಿಕೆ ವಿಚಾರದಲ್ಲಿ ಕಾಂಗ್ರೆಸ್‌ ವಿರುದ್ಧ ಆರೋಪ ಮಾಡಿರುವ ಶಾಸಕ ವೇದವ್ಯಾಸ ಕಾಮತ್, ತಮ್ಮ ಆಡಳಿತಾತ್ಮಕ ಅಸಮರ್ಥತೆ, ವೈಫಲ್ಯವ‌ನ್ನು ಮರೆ ಮಾಚಲು ಪ್ರಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎ.ಸಿ.ವಿನಯರಾಜ್ ತಿಳಿಸಿದರು.

ಲಸಿಕೆಯನ್ನು ಬಿಜೆಪಿ ಉಚಿತವಾಗಿ ಕೊಡುತ್ತಿದೆ ಎನ್ನುವ ತಪ್ಪು ಸಂದೇಶವನ್ನು ನೀಡಲು ವೇದವ್ಯಾಸ ಕಾಮತ್ ಶ್ರಮಿಸುತ್ತಿದ್ದಾರೆ. ಸರ್ಕಾರ ಜನರ ತೆರಿಗೆಯ ಹಣದಿಂದ ಲಸಿಕೆ ನೀಡಿದೆಯೇ ಹೊರತು, ಬಿಜೆಪಿ ಆದಾಯದಿಂದಲ್ಲ ಎಂದರು.

ಕೋವಿಡ್‌ ಬಾಧಿತರ ಕುಟುಂಬದ ಸದಸ್ಯರು ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಹೊರಗಡೆ ಶೌಚಾಲಯ, ಸ್ನಾನಗೃಹ, ವಿಶ್ರಾಂತಿ ಪಡೆಯುವ ಕೋಣೆ ಹಾಗೂ ಹೋಟೆಲ್-ಕ್ಯಾಂಟೀನ್ ಇಲ್ಲದೆ ಕಷ್ಟಪಡುತ್ತಿದ್ದಾರೆ. ಜಿಲ್ಲಾಡಳಿತ ತಕ್ಷಣ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವರ ಕ್ರಮ ಕೈಗೊಳ್ಳಬೇಖು. ಶಾಸಕ ಕಾಮತ್‌ ಇದನ್ನು ಗಮನಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಡಳಿತ ಮೃತರಾದವರ ವಿವರವನ್ನು ಮರೆಮಾಚಿ, ಸಂಖ್ಯೆ ಕಡಿಮೆ ಇದೆ ಎಂದು ತೋರಿಸುತ್ತಿದೆ. ಹೃದ್ರೋಗ, ಕಿಡ್ನಿ, ಸಕ್ಕರೆ ಕಾಯಿಲೆ ಇರುವವರು ಕೋವಿಡ್‌ ಬಾಧಿಸಿ ಮೃತಪಟ್ಟರೆ, ಅವರನ್ನು ಈ ಪಟ್ಟಿಯಿಂದ ಕೈಬಿಟ್ಟಿರುವುದು ಸರಿಯಲ್ಲ. ಮೃತರ ಸಂಖ್ಯೆ ಹೆಚ್ಚುತ್ತಿದ್ದು, ತಹಶೀಲ್ದಾರರು ಅದನ್ನು ದೃಢೀಕರಿಸಬೇಕಾಗಿದೆ. ಇದರಿಂದ ಕುಟುಂಬ ಸದಸ್ಯರಿಗೆ ಶವ ಹಸ್ತಾಂತರ ವಿಳಂಬವಾಗುತ್ತಿದೆ ಎಂದು ಹೇಳಿದರು.

ಜಿಲ್ಲಾಡಳಿತ ತಕ್ಷಣ ಕ್ರಮ ವಹಿಸಬೇಕಾಗಿರುತ್ತದೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ರೋಗಿಗಳಿಗೆ ಜಿಲ್ಲಾಡಳಿತ ಉಚಿತವಾಗಿ ಆಮ್ಲಜನಕ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಮನೆಗಳಿಗೆ ತೆರಳಿ ಲಸಿಕೆ ನೀಡಿ: ಐವನ್

ಆರೋಗ್ಯ ಇಲಾಖೆ ಕೂಡಲೇ ಮನೆಮನೆಗೆ ಭೇಟಿ ಮಾಡಿ ಸೋಂಕಿತರ ಪರೀಕ್ಷೆ ಮಾಡಿದ್ದಲ್ಲಿ, ಕೋವಿಡ್‌ ಎದುರಿಸಲು ಸಾಧ್ಯವಾಗಲಿದೆ ಎಂದು ಕಾಂಗ್ರೆಸ್‌ ಹೆಲ್ಪ್‌ಲೈನ್ ಸಂಚಾಲಕ ಐವನ್ ಡಿಸೋಜ ಹೇಳಿದರು.

‘ಲಸಿಕೆ ಹಂಚಿಕೆ ಕೇವಲ ಉಳ್ಳವರಿಗೆ ಮಾತ್ರ ಎಂಬಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯ ಸರ್ಕಾರ ಲಸಿಕೆಯನ್ನು ತರಿಸಿ ನೀಡುವಲ್ಲಿ ವಿಫಲಗೊಂಡಿದೆ. ಕೂಡಲೇ ಮನೆ ಮನೆಗೆ ತೆರಳಿ, ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಳೆದ 23 ದಿನಗಳಿಂದ ಲಾಕ್‍ಡೌನ್ ಘೋಷಣೆಯಾಗಿದ್ದು, ಕಾರ್ಮಿಕರಿಗೆ, ಆರ್ಥಿಕ ಅತಂತ್ರ ಕುಟುಂಬಕ್ಕೆ ರಾಜ್ಯ ಸರ್ಕಾರ  ₹ 4 ಸಾವಿರ ಉಚಿತ ವೈದ್ಯ ಚಿಕಿತ್ಸೆ, ಉಚಿತ ಪಡಿತರ ನೀಡಬೇಕು. ನೀರು, ವಿದ್ಯುತ್ ಬಿಲ್‌ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.