ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲೂ ಕಾಂಗ್ರೆಸ್‌ನಿಂದ ರಾಜಕೀಯ: ನಳಿನ್‌ಕುಮಾರ್‌ ಕಟೀಲ್‌

Last Updated 8 ಮೇ 2020, 10:33 IST
ಅಕ್ಷರ ಗಾತ್ರ

ಮಂಗಳೂರು: ಈ ರಾಜ್ಯದ, ಕೃಷಿಕರ, ಕಾರ್ಮಿಕರ ಭವಿಷ್ಯವನ್ನು ಯೋಚಿಸದ ಕಾಂಗ್ರೆಸ್, ಕೇವಲ ರಾಜಕಾರಣಕ್ಕಾಗಿ ಈ ಕಾಲಘಟ್ಟವನ್ನು ಉಪಯೋಗ ಮಾಡಿದೆ ಎನ್ನುವುದು ದುಃಖಕರ ವಿಚಾರ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್‌ ಕಟೀಲ್‌ ಟೀಕಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಅನುಭವ ಹೊಂದಿರುವ ಹಾಗೂ ರಾಜ್ಯದ ಸ್ಥಿತಿಗತಿ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಿಸಿರುವ ಯೋಜನೆಯನ್ನು ಸ್ವಾಗತಿಸಬೇಕಿತ್ತು. ಅದನ್ನು ಬಿಟ್ಟು ರಾಜ್ಯ ಸಂಕಷ್ಟದಲ್ಲಿರುವಾಗ, ಜನ ಕಣ್ಣೀರಿಡುವಂತಹ ಸಮಯದಲ್ಲಿ ರಾಜಕೀಯ ಮಾಡುತ್ತಿರುವುದು ಹೇಯ ಕೃತ್ಯ, ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನವನ್ನು ಸಿದ್ದರಾಮಯ್ಯ ಅವರು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ರೈತರ ಪರ ಯೋಜನೆ ಅನುಷ್ಠಾನಕ್ಕೆ ತರಲು ಏಕೆ ಸಾಧ್ಯವಾಗಲಿಲ್ಲ? ಅವರ ಕಾಲದಲ್ಲಿ ಹತ್ತಾರು ಜನರ ಹತ್ಯೆಗಳು ನಡೆದಿವೆ. ಯಾರೊಬ್ಬರ ಮನೆಗೂ ಭೇಟಿ ನೀಡದೇ, ಯಾರ ಮನೆಗೂ ಸರ್ಕಾರದ ಸೌಲಭ್ಯ ತಲುಪಿಸುವ ಕೆಲಸ ಮಾಡಲಿಲ್ಲ ಎಂದು ದೂರಿದ್ದಾರೆ.

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿರುವ ಯೋಜನೆ ಬಹಳದ ದೊಡ್ಡದು. ಇಂತಹ ಸಂದರ್ಭದಲ್ಲಿ ಅದನ್ನು ಸ್ವಾಗತಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡಬೇಕಿತ್ತು. ಅದನ್ನು ಬಿಟ್ಟು ಕ್ಷುಲ್ಲಕ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

‘ಮುಖ್ಯಮಂತ್ರಿ ಯಡಿಯೂರಪ್ಪ ನೀಡಿರುವ ಆರ್ಥಿಕ ಪ್ಯಾಕೇಜ್ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಾಗಿದೆ. ಎಕರೆಗೆ ಅಂದಾಜು ₹50 ಲಕ್ಷ ಖರ್ಚು ಮಾಡಿ ಹೂ ಬೆಳೆದ ಕೃಷಿಕರಿಗೆ ಎಕರೆಗೆ ಕೇವಲ ₹ 25 ಸಾವಿರ ಪರಿಹಾರ ಘೋಷಿಸಿರುವುದು ಅನ್ಯಾಯ. ಬೆಳೆಗಾರರ ನಷ್ಟದ ಅರ್ಧದಷ್ಟನ್ನಾದರೂ ತುಂಬಿಕೊಡಬೇಕು’ ಎಂದು ಸರಣಿ ಟ್ವೀಟ್ ಮೂಲಕ ಸಿದ್ದರಾಮಯ್ಯ ರಾಜ್ಯದ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ಟೀಕಿಸಿದ್ದರು.

ಹೂವಿನಿಂದ ಚಿನ್ನ ತೆಗೆಯಲು ಹೊರಟ ಸಿದ್ದರಾಮಯ್ಯ

‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಟಾಟೆಯಲ್ಲಿ ಚಿನ್ನ ತೆಗೆಯುವ ಹೇಳಿಕೆ ನೀಡಿದಂತೆ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೂವಿನಲ್ಲಿ ಚಿನ್ನ ತೆಗೆಯಲು ಹೊರಟಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್‌ ಟೀಕಿಸಿದ್ದಾರೆ.

‘ಒಬ್ಬ ರೈತ ಎಲ್ಲಿ ಎಕರೆಗೆ ₹ 50 ಲಕ್ಷ ಖರ್ಚು ಮಾಡಿದ್ದಾನೆ ಎಂಬ ಬಗ್ಗೆ ಸಿದ್ದರಾಮಯ್ಯ ಅಧ್ಯಯನ ಮಾಡಬೇಕು. ಎಲ್ಲವನ್ನೂ ತಿಳಿದು ಮಾತನಾಡಲಿ. ಈಗಿನ ಸ್ಥಿತಿಯಲ್ಲಿ ಕಾಂಗ್ರೆಸ್ ರಾಜಕಾರಣ ಬಿಟ್ಟು, ಜನರ ಕಣ್ಣೀರು ಒರೆಸುವ ಕೆಲಸಕ್ಕೆ ಮುಂದಾಗಬೇಕು‘ ಎಂದಿದ್ದಾರೆ.

‘ಮುಖ್ಯಮಂತ್ರಿ, ಹಣಕಾಸು ಸಚಿವರಾಗಿ ಕೆಲಸ ಮಾಡಿರುವ ಅವರಿಗೆ ಹೂವು ಬೆಳೆಯಲು ರೈತ ಎಷ್ಟು ಖರ್ಚು ಮಾಡುತ್ತಾನೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲ‘ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT