ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ: ಹುರುಪು ತುಂಬಿದ ‘ರಾಮ ನಾಮ’ ಸ್ಮರಣೆ

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಂಪಲ ಪದಗ್ರಹಣ ಸಮಾರಂಭದಲ್ಲಿ ಮಾರ್ದನಿಸಿದ ’ಜೈ ಶ್ರೀರಾಮ್‌’ ಘೋಷಣೆ
Published 31 ಜನವರಿ 2024, 3:59 IST
Last Updated 31 ಜನವರಿ 2024, 3:59 IST
ಅಕ್ಷರ ಗಾತ್ರ

ಮಂಗಳೂರು: ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಸತೀಶ ಕುಂಪಲ ಅವರ ಪದಗ್ರಹಣ ಸಮಾರಂಭದುದ್ದಕ್ಕೂ ‘ಜೈ ಸಿಯಾರಾಮ್‌..., ಜೈ ಶ್ರೀರಾಮ್‌... ಘೋಷಣೆಗಳು ಮಾರ್ದನಿಸಿದವು. ಲೋಕಸಭಾ ಚುನಾವಣೆಯನ್ನು ಎದುರು ನೋಡುತ್ತಿರುವ  ಪಕ್ಷದ ಕಾರ್ಯಕರ್ತರಲ್ಲಿ ರಾಮ ನಾಮ ಸ್ಮರಣೆ ಹೊಸ ಹುರುಪು ತುಂಬಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ನಾಯಕರೆಲ್ಲರೂ, ಅಯೋಧ್ಯೆಯಲ್ಲಿ ಬಾಲರಾಮ ವಿಗ್ರಹ ಪ್ರತಿಷ್ಠೆಯಾದ ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದ ಕಾರ್ಯಕರ್ತರನ್ನು ಮತ್ತಷ್ಟು ಹುರಿದುಂಬಿಸಲು ಪಕ್ಷಕ್ಕೆ, ಪ್ರಧಾನಿ ನರೇಂದ್ರ ಮೋದಿಗೆ ಜೈಕಾರ ಹಾಕುವುದರ ಜೊತೆಗೆ  ಜೈ ಶ್ರೀರಾಮ್‌ ಘೋಷಣೆಯನ್ನೂ ಕೂಗಿದರು. ಕಾರ್ಯಕರ್ತರು ಇದಕ್ಕೆ ದನಿಗೂಡಿಸಿದರು. 

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ‘ಮೋದಿಯವರು ಮೂರನೇ‌ ಬಾರಿ ಪ್ರಧಾನಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ರಾಜ್ಯದಲ್ಲಿ ಎಲ್ಲ 28 ಕ್ಷೇತ್ರಗಳನ್ನೂ ಗೆದ್ದು ಮೋದಿ ಅವರ ಕೈ ಬಲಪಡಿಸಬೇಕು’ ಎಂದರು.

‘ಹಿಂದೆಲ್ಲ  ಭಾರತದ ಸಾರ್ವತ್ರಿಕ ಚುನಾವಣೆ ಬಗ್ಗೆ ಯಾವ ದೇಶಗಳೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಈಗ ವಿದೇಶಗಳೂ ಈ ಬಗ್ಗೆ ಕುತೂಹಲ ತಾಳಿವೆ.  ಜಗತ್ತಿಗೆ ಸ್ಪಷ್ಟ ದಾರಿ ತೋರಿಸುವ ಶಕ್ತಿ ಇದ್ದರೆ ಅದು ಮೋದಿಯವರಿಗೆ ಮಾತ್ರ ಎಂಬುದು ಅಗ್ರಮಾನ್ಯ ರಾಷ್ಟ್ರಗಳಿಗೂ ಗೊತ್ತಾಗಿದೆ’ ಎಂದರು.

‘ಕಾಂಗ್ರೆಸ್‌ನ ‘ಐಎನ್‌ಡಿಐಎ’ ಒಕ್ಕೋಟದ ಒಂದೊಂದೇ ದಳಗಳು ಉದುರಿ ಬೀಳುತ್ತಿವೆ. ಚುನಾವಣೆ ಘೋಷಣೆ ಆಗುವಷ್ಟರಲ್ಲಿ ಕಾಂಗ್ರೆಸ್‌ನಿಂದ‌ ಎಷ್ಟು ಮಂದಿ ಜಾಗ ಖಾಲಿ ಮಾಡುತ್ತಾರೋ ಗೊತ್ತಿಲ್ಲ’ ಎಂದು ವ್ಯಂಗ್ಯವಾಗಿ ಹೇಳಿದರು.

‘ಕಾರ್ಯಕರ್ತರಿಗೆ ಚಾಟಿ ಬೀಸೋಣ ಎಂದುಕೊಂಡು ಬಂದೆ. ಇಲ್ಲಿ ಯಾರಿಗೂ ಬೈಯುವಂತಿಲ್ಲ. ಎಲ್ಲರೂ ಪಾಪದವರಂತೆ ಕಾಣುತ್ತಿದ್ದೀರಿ’ ಎಂದು ಚಟಾಕಿ ಹಾರಿಸಿದರು.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ, ‘ಹೆಸರಿನಲ್ಲೇ ರಾಮ‌ ಇದ್ದಾನೆ ಎಂದು ಸಿದ್ದರಾಮಯ್ಯ  ಹೇಳುತ್ತಾರೆ. ವೀರಪ್ಪನ್ ಹೆಸರಿನಲ್ಲಿ ‘ವೀರ’ ಶಬ್ದ ಇದೆ ಎಂದ ಮಾತ್ರಕ್ಕೆ ಅವನನ್ನು ವೀರರಿಗೆಲ್ಲ ಅಪ್ಪ ಎನ್ನಲಾಗುತ್ತದೆಯೇ. ಹೆಸರಿಗಿಂತಲೂ ಹೃದಯದಲ್ಲೇನಿದೆ ಎಂಬುದು ಮುಖ್ಯ. ಸಿದ್ದರಾಮಯ್ಯನವರ ಹೃದಯವು ಟಿಪ್ಪು ಟಿಪ್ಪು ಎಂದು ಬಡಿದುಕೊಳ್ಳುತ್ತಿದೆ’ ಎಂದರು.

‘ನಮ್ಮ ಪಕ್ಷಕ್ಕೆ ರಾಹುಲ್‌ ಗಾಂಧಿಯವರೇ ತಾರಾ ಪ್ರಚಾರಕ. ಅವರು ಯಾತ್ರೆ ಕೈಗೊಂಡಲ್ಲೆಲ್ಲ ಬಿಜೆಪಿಗೆ ಪ್ರಯೋಜನ ಆಗುತ್ತಿದೆ. ಸಂಸತ್‌ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಸ್ಥಾನ ಗೆದ್ದರೆ, ಕಾಂಗ್ರೆಸ್ ಶಾಸಕರು, ‘ಈ ದರಿದ್ರ ಪಾರ್ಟಿಯಲ್ಲಿ ಇರುವುದೇ ಬೇಡ’ ಎಂದು ಹೊರಬರಲಿದ್ದಾರೆ’ ಎಂದರು.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ‘ಮುಂಬರುವ ಲೋಕಸಭಾ ಚುನಾವಣೆ ಶ್ರೀರಾಮ– ಹನುಮ ಭಕ್ತರು ಹಾಗೂ ಟಿಪ್ಪು ಭಕ್ತರ ನಡುವಿನ ಹಣಾಹಣಿ. ಇದರಲ್ಲಿ ರಾಮಭಕ್ತರು ಗೆಲ್ಲುತ್ತಾರೆ’ ಎಂದರು.

‘ಸಿದ್ದರಾಮಯ್ಯ ತಮ್ಮನ್ನು ಅಹಿಂದ ನಾಯಕ ಎಂದು ಕರೆದುಕೊಳ್ಳುತ್ತಿದ್ದರು. ಅವರು ಕೇವಲ ಅಲ್ಪಸಂಖ್ಯಾತರಿಗೆ ನಾಯಕರಾಗಿ ಉಳಿದಿರುವುದು ದುರಂತ’ ಎಂದರು.

ಸಂಸದ ನಳಿನ್‌ ಕುಮಾರ್ ಕಟೀಲ್‌, ‘ಕಾಂಗ್ರೆಸ್ ನೇತೃತ್ವದ ಸರ್ಕಾರ ಹನುಮನ ಧ್ವಜ ಕಿತ್ತೆಸೆದಿದ್ದು ಮಾತ್ರ ಅಲ್ಲ, ಹಿಂದೂ  ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಅವರನ್ನು ಜೈಲಿಗೆ ಅಟ್ಟುತ್ತಿದೆ. ಆ ಪಕ್ಷಕ್ಕೆ  ರಾಮ ಮತ್ತು ಹನುಮಂತನ‌ ಶಾಪ ತಟ್ಟಲಿದೆ’ ಎಂದರು.

ಪಕ್ಷದ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಅವರು ಸತೀಶ ಕುಂಪಲ ಅವರಿಗೆ ಪಕ್ಷದ ಧ್ವಜವನ್ನು ಹಸ್ತಾಂತರಿಸಿ ಶುಭ ಹಾರೈಸಿದರು. ಅವರಿಬ್ಬರನ್ನೂ ವಿಜಯೇಂದ್ರ  ಸನ್ಮಾನಿಸಿದರು.

ಶಾಸಕರಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಡಾ.ವೈ.ಭರತ್ ಶೆಟ್ಟಿ, ಡಿ.ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಭಾಗಿರಥ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮೆಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯರ್ ಸುನೀತಾ, ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ಕಾರ್ಯದರ್ಶಿಗಳಾದ ಬೃಜೇಶ್ ಚೌಟ, ಶರಣು ಪಲ್ಲಿಕೇರಿ, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಮಂಗಳೂರು ವಿಭಾಗದ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಬಿ.ಬಿ ಬಾಲಕೃಷ್ಞ, ಸಹಪ್ರಭಾರಿಗಳಾದ ಗೋಪಾಲಕೃಷ್ಣ ಹೇರಳೆ, ರಾಜೇಶ್ ಕಾವೇರಿ, ರಾಜ್ಯ ಮಾಧ್ಯಮ‌ ಸಹ ಸಂಚಾಲಕ ಪ್ರಶಾಂತ್ ಕಡೆಂಜಿ ಭಾಗವಹಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಪ್ರಧಾನ‌ ಕಾರ್ಯದರ್ಶಿ ರಾಮದಾಸ ಬಂಟ್ವಾಳ ಸ್ವಾಗತಿಸಿದರು.

ಪ್ರೇಮಾನಂದ‌ ಶೆಟ್ಟಿ ವಂದಿಸಿದರು. ಚಂದ್ರಶೇಖರ ಬಪ್ಪಳಿಗೆ ಕಾರ್ಯಕ್ರಮ ನಿರೂಪಿಸಿದರು.

ತೆರೆದ ವಾಹನದಲ್ಲಿ ಸಮಾರಂಭದ ವೇದಿಕೆಯತ್ತ ಸಾಗಿಬಂದ ಬಿ.ವೈ.ವಿಜಯೇಂದ್ರ ನಳಿನ್‌ ಕುಮಾರ್‌ ಕಟೀಲ್‌ ಸತೀಶ ಕುಂಪಲ ಸುದರ್ಶನ ಮೂಡುಬಿದಿರೆ  ಹಾಗೂ ಉದಯ್‌ ಕುಮಾರ್‌ ಶೆಟ್ಟಿ ಅವರಿಗೆ ಪಕ್ಷದ ಕಾರ್ಯಕರ್ತರು ಹೂವಿನ ಮಳೆಗೆರೆದರು

ತೆರೆದ ವಾಹನದಲ್ಲಿ ಸಮಾರಂಭದ ವೇದಿಕೆಯತ್ತ ಸಾಗಿಬಂದ ಬಿ.ವೈ.ವಿಜಯೇಂದ್ರ ನಳಿನ್‌ ಕುಮಾರ್‌ ಕಟೀಲ್‌ ಸತೀಶ ಕುಂಪಲ ಸುದರ್ಶನ ಮೂಡುಬಿದಿರೆ  ಹಾಗೂ ಉದಯ್‌ ಕುಮಾರ್‌ ಶೆಟ್ಟಿ ಅವರಿಗೆ ಪಕ್ಷದ ಕಾರ್ಯಕರ್ತರು ಹೂವಿನ ಮಳೆಗೆರೆದರು

–  ಪ್ರಜಾವಾಣಿ ಚಿತ್ರ

ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದ ಪಕ್ಷದ ಮುಖಂಡರು ಪುಷ್ಪವೃಷ್ಟಿಗೆರೆದು ಸಂಭ್ರಮಿಸಿದ ಕಾರ್ಯಕರ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT