ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಶಿಲೀಂಧ್ರ: ಮತ್ತೆ 3 ಪ್ರಕರಣ, 2 ಸಾವು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌–19 ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ
Last Updated 11 ಜೂನ್ 2021, 4:04 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಲ್ಲಿ ಗುರುವಾರ ಮತ್ತೆ 3 ಕಪ್ಪು ಶಿಲೀಂಧ್ರದ ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಪತ್ತೆಯಾದ ಮೂರು ಹೊಸ ಪ್ರಕರಣಗಳು ಉತ್ತರ ಕನ್ನಡ, ಚಿಕ್ಕಮಗಳೂರು, ಹಾವೇರಿ ಜಿಲ್ಲೆಗೆ ಸಂಬಂಧಿಸಿದ್ದಾಗಿವೆ. ಎಲ್ಲರೂ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಪ್ಪು ಶಿಲೀಂಧ್ರ ಸೋಂಕಿನಿಂದ ಬಳಲುತ್ತಿದ್ದ ಇಬ್ಬರು ಗುರುವಾರ ಮೃತಪಟ್ಟಿದ್ದಾರೆ. ಆ ಪೈಕಿ ಒಬ್ಬರು ಚಿಕ್ಕಮಗಳೂರು ಮತ್ತು ಇನ್ನೊಬ್ಬರು ಉತ್ತರ ಕನ್ನಡ ಜಿಲ್ಲೆಗೆ ಸೇರಿದವರಾಗಿದ್ದು, ಇಬ್ಬರೂ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಜಿಲ್ಲೆಯಲ್ಲಿ ಸದ್ಯ ಕಪ್ಪು ಶಿಲೀಂಧ್ರದ 54 ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 11 ದಕ್ಷಿಣ ಕನ್ನಡ ಮತ್ತು 43 ಪ್ರಕರಣಗಳು ಹೊರಜಿಲ್ಲೆಗೆ ಸಂಬಂಧಿಸಿದ್ದಾಗಿದೆ. ನಗರದ ಜ್ಯೋತಿಯ ಕೆಎಂಸಿಯಲ್ಲಿ ದಕ್ಷಿಣ ಕನ್ನಡದ ಒಬ್ಬರು, ದೇರಳ ಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಹೊರ ಜಿಲ್ಲೆಯ ನಾಲ್ವರು ಮತ್ತು ದಕ್ಷಿಣ ಕನ್ನಡದ ಒಬ್ಬರು, ಯೇನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಹೊರ ಜಿಲ್ಲೆಯ ಒಬ್ಬರು, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಕ್ಷಿಣ ಕನ್ನಡದ ಇಬ್ಬರು, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರ ಜಿಲ್ಲೆಯ 37 ಮತ್ತು ದಕ್ಷಿಣ ಕನ್ನಡದ 6 ಮಂದಿ, ಮಂಗಳಾ ಆಸ್ಪತ್ರೆಯಲ್ಲಿ ಹೊರ ಜಿಲ್ಲೆಯ ಒಬ್ಬರು, ಎ.ಜೆ. ಆಸ್ಪತ್ರೆಯಲ್ಲಿ ದಕ್ಷಿಣ ಕನ್ನಡದ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೆ ಹೊರ ಜಿಲ್ಲೆಯ ನಾಲ್ಕು ಮಂದಿ ಕಪ್ಪು ಶಿಲೀಂಧ್ರ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೋಂಕಿನ ಲಕ್ಷಣ ಹೊಂದಿದ್ದ ದಕ್ಷಿಣ ಕನ್ನಡದ ಇಬ್ಬರು ಮತ್ತು ಹೊರ ಜಿಲ್ಲೆಯ 10 ಮಂದಿಯ ಸೇರಿದಂತೆ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ.

ಕೋವಿಡ್‌ ಗುಣಮುಖರ ಸಂಖ್ಯೆ ಹೆಚ್ಚಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಕೋವಿಡ್–19 ಗುಣಮುಖರ ಪ್ರಮಾಣ ಹೆಚ್ಚಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ 6,932 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಮೃತಪಟ್ಟ 8 ಮಂದಿ ಕೋವಿಡ್‌ ಇರುವುದು ಗುರುವಾರ ದೃಢವಾಗಿದೆ. ಗುರುವಾರ 580 ಮಂದಿಗೆ ಕೋವಿಡ್–19 ದೃಢಪಟ್ಟಿದ್ದು, 625 ಮಂದಿ ಗುಣಮುಖರಾಗಿದ್ದಾರೆ.

ಉಡುಪಿ: ಜಿಲ್ಲೆಯಲ್ಲಿ ಗುರುವಾರ 291 ಮಂದಿಗೆ ಕೋವಿಡ್ ದೃಢವಾಗಿದ್ದು, 241 ಗುಣಮುಖರಾಗಿದ್ದಾರೆ. ಮೃತಪಟ್ಟ ಇಬ್ಬರಿಗೆ ಕೋವಿಡ್ ಇರುವುದು ಖಚಿತವಾಗಿದೆ. ಸದ್ಯ 3,901 ಸಕ್ರಿಯ ಪ್ರಕರಣಗಳಿವೆ.

ಕಾಸರಗೋಡು: ಜಿಲ್ಲೆಯಲ್ಲಿ 443 ಮಂದಿಗೆ ಕೋವಿಡ್–19 ದೃಢ ಪಟ್ಟಿದ್ದು, 418 ಮಂದಿ ಗುಣಮುಖರಾಗಿದ್ದಾರೆ.
3,855 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 76,134 ಮಂದಿಗೆ ಕೋವಿಡ್ ದೃಢಪಟ್ಟಿದ್ದು, 71,684 ಮಂದಿ ಗುಣಮುಖರಾಗಿದ್ದಾರೆ.

₹73 ಲಕ್ಷ ದಂಡ ವಸೂಲಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಮಾಸ್ಕ್ ನಿಯಮ ಉಲ್ಲಂಘಿಸಿದ 62,503 ಪ್ರಕರಣ ಪತ್ತೆ ಮಾಡಲಾಗಿದ್ದು, ಒಟ್ಟು ₹73,39,667 ದಂಡ ವಸೂಲು ಮಾಡಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಗುರುವಾರ ಕಾರ್ಯಾಚರಣೆ ನಡೆಸಿದ ಪಾಲಿಕೆ ಅಧಿಕಾರಿಗಳು, ಒಟ್ಟು 20 ಮಾರ್ಗಸೂಚಿ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಮಾಡಿ, ₹21,800 ದಂಡ ವಿಧಿಸಿದ್ದಾರೆ.

ನಗರ ಪೊಲೀಸ್‌: ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಗುರುವಾರ ಮಾಸ್ಕ್‌ ನಿಯಮ ಉಲ್ಲಂಘನೆಯ ಒಟ್ಟು 435 ಪ್ರಕರಣ ಪತ್ತೆ ಮಾಡಿದ್ದು, ₹71,100 ದಂಡ ವಸೂಲಿ ಮಾಡಲಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ 4, ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ 2 ಪ್ರಕರಣ ದಾಖಲಿಸಲಾಗಿದೆ. 119 ದ್ವಿಚಕ್ರ ವಾಹನ, 12 ಚತುಷ್ಚಕ್ರ ವಾಹನ ಸೇರಿದಂತೆ ಒಟ್ಟು 131 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT