ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲ ಧಗೆಯಲ್ಲೂ ತಣ್ಣೀರುಬಾವಿ ತಂಪು!

ಬ್ಲೂ ಫ್ಲ್ಯಾಗ್‌ ಮಾನ್ಯತೆಯ ನಂತರ ಈಜಾಡಲು ‘ಸುರಕ್ಷಿತ’ ಪ್ರದೇಶ ನಿಗದಿ; ಗಾಳಿಗೆ ಮೈಯೊಡ್ಡಲು ನೆರಳಿನಡಿ ರಿಕ್ಲೇನರ್ ಚೇರ್‌
Published 7 ಮೇ 2024, 6:37 IST
Last Updated 7 ಮೇ 2024, 6:37 IST
ಅಕ್ಷರ ಗಾತ್ರ

ಮಂಗಳೂರು: ನೆತ್ತಿಯ ಮೇಲೆ ಸುಡು ಬಿಸಿಲು, ಕಾಲ ಕೆಳಗೆ ಮರಳಿನಿಂದ ಹೊರಸೂಸುವ ಬಿಸಿ. ಆದರೆ ಮರಗಳ ನಡುವೆ ನೆರಳಿನಲ್ಲಿ, ಗುಡಿಸಲು ಮಾದರಿಯಲ್ಲಿ ನಿರ್ಮಿಸಿರುವ ನೆರಳಿನ ಆಸರೆಯಲ್ಲಿ ಮತ್ತು ಅಗಾಧ ನೀರಿನ ಅಂಚಿನಲ್ಲಿ ತಣ್ಣನೆಯ ಅನುಭವ. ಸಂಜೆ ಸೂರ್ಯಾಸ್ತದ ನೋಟದ ವಿಶಿಷ್ಟ ಷವಿ. ಇದನ್ನು ಸವಿಯಲು ಮಂಗಳೂರಿನತ್ತ ಧಾವಿಸುತ್ತಿದ್ದಾರೆ ಪ್ರವಾಸಿಗರು.

ನಗರದ ತಣ್ಣೀರುಬಾವಿ ಎರಡನೇ ಬೀಚ್‌ಗೆ ಬ್ಲೂ ಫ್ಲ್ಯಾಗ್ ಮಾನ್ಯತೆ ಲಭಿಸಿದ ನಂತರ ಮಾಡಿರುವ ಅಭಿವೃದ್ಧಿ ಕಾರ್ಯಗಳಿಂದಾಗಿ ಹೊಸ ಬಣ್ಣ ಪಡೆದುಕೊಂಡಿದೆ. ಪ್ರವಾಸಿಗರಿಗೆ ಕೆಲವು ತಾಸುಗಳನ್ನು ಆರಾಮವಾಗಿ ಕಳೆಯಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು ಮಧ್ಯಾಹ್ನದ ಸುಡುಬೇಗೆಯಲ್ಲೂ ಸಮುದ್ರಸ್ನಾನ ಮಾಡಲು ನಿತ್ಯವೂ ನೂರಾರು ಜನರು ಬರುತ್ತಿದ್ದಾರೆ.

ತಣ್ಣೀರು ಬಾವಿಯಲ್ಲಿ ಕಿಲೊಮೀಟರ್‌ಗಟ್ಟಲೆ ಪ್ರದೇಶದಲ್ಲಿ ಅರಣ್ಯ ಇಲಾಖೆಯವರು ಗಾಳಿಮರಗಳನ್ನು ಬೆಳೆಸಿದ್ದು ಅದರ ಮಧ್ಯದಲ್ಲಿ ನೆಡುತೋಪು ಸೃಷ್ಟಿಸಿದ್ದಾರೆ. ಈ ಪೈಕಿ ಫಾತಿಮಾ ಬೀಚ್‌ನ ಸಮೀಪದಲ್ಲಿ ಒಂದು ಕಿಲೊಮೀಟರ್ ವ್ಯಾಪ್ತಿಗೆ ಬ್ಲೂ ಫ್ಲ್ಯಾಗ್ ಮಾನ್ಯತೆ ಲಭಿಸಿದೆ. ಈ ಪ್ರದೇಶವನ್ನು ಪುಣೆಯ ಬಿವಿಜಿ ಗ್ರೂಪ್‌ನವರು ಅಭಿವೃದ್ಧಿಪಡಿಸಿದ್ದು ಈ ವರ್ಷದ ಮಾರ್ಚ್‌ ತಿಂಗಳಿಂದ ಟಿಕೆಟ್‌ ಸಹಿತ ಪ್ರವೇಶದ ವ್ಯವಸ್ಥೆ ಮಾಡಿದ್ದಾರೆ.

ಐದು ವರ್ಷದ ವರೆಗಿನ ಮಕ್ಕಳಿಗೆ ಉಚಿತ ಪ್ರವೇಶವಿದ್ದು 5ರಿಂದ 13 ವರ್ಷದ ವರೆಗಿನವರಿಗೆ ₹ 10 ಮತ್ತು ನಂತರ ₹ 20 ಪ್ರವೇಶ ದರ ನಿಗದಿ ಮಾಡಲಾಗಿದೆ. ಸದ್ಯ ಪಾರ್ಕಿಂಗ್ ಸೌಲಭ್ಯ ಒದಗಿಸಿಲ್ಲ. ವಾಹನಗಳನ್ನು ಚರ್ಚ್ ಬದಿಯ ಖಾಲಿ ಜಾಗದಲ್ಲಿ ನಿಲ್ಲಿಸಬೇಕು. ಬೀಚ್‌ನ ಸುಮಾರು 200 ಮೀಟರ್ ಪ್ರದೇಶವನ್ನು ಈಜಾಡುವ ಸ್ಥಳ ಎಂದು ನಿಗದಿ ಮಾಡಲಾಗಿದ್ದು ಅಲ್ಲಿಗೆ ಎರಡು ಬಾವುಟಗಳನ್ನು ಕಟ್ಟಲಾಗಿದೆ. ಈ ಬಾವುಟಗಳ ಒಂದು ಬದಿಯಲ್ಲಿ ಸರ್ಫಿಂಗ್‌ಗೆ ಜಾಗ ನಿಗದಿ ಮಾಡಿದ್ದು ಮತ್ತೊಂದು ಬದಿಯಲ್ಲಿ ಓಪನ್ ಸ್ವಿಮ್‌ ಕ್ರೀಡೆಯ ಚಟುವಟಿಕೆಗೆ ಅವಕಾಶವಿದೆ. 

ಈಜಾಡಲು ನಿಗದಿ ಮಾಡಿರುವ ಪ್ರದೇಶದಲ್ಲಿ ಲೈಫ್‌ ಗಾರ್ಡ್‌ಗಳು ಇ‌ದ್ದಾರೆ. ಅವರು ಸಮುದ್ರಕ್ಕೆ ಇಳಿಯುವವರ ಮೇಲೆ ನಿಗಾ ಇರಿಸಿಕೊಂಡು ಸಲಹೆ ಸೂಚನೆ ನೀಡುತ್ತಿರುತ್ತಾರೆ. ಅಪಾಯಕಾರಿ ಪರಿಸ್ಥಿತಿ ಕಂಡುಬಂದರೆ ಎಚ್ಚರಿಕೆಯನ್ನೂ ನೀಡುತ್ತಿರುತ್ತಾರೆ. ಬೀಚ್‌ ಸ್ವಚ್ಛವಾಗಿರಿಸಲು ವಿಶೇಷ ಗಮನ ನೀಡಲಾಗುತ್ತಿದ್ದು ಸಾರ್ವಜನಿಕರು ತ್ಯಾಜ್ಯ ಹಾಕಲು ಆಕರ್ಷಕ ಡಬ್ಬಗಳನ್ನು ಇರಿಸಲಾಗಿದೆ. ಸ್ನಾನದ ಕೊಠಡಿ, ಬಟ್ಟೆ ಬದಲಾಯಿಸುವ ಕೊಠಡಿ ಮತ್ತು ವಾಷ್ ರೂಮ್‌ಗಳೂ ಇವೆ. ಎಲ್ಲ ಕಡೆ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇದೆ.

ಎಲ್ಲದಕ್ಕೂ ಪ್ರತ್ಯೇಕ ಟಿಕೆಟ್: ಬೇಸರ

ಬೀಚ್ ಪ್ರವೇಶಕ್ಕೆ ದರ ನಿಗದಿ ಮಾಡಿದ ನಂತರ ಒಳಗೆ ಪ್ರತಿಯೊಂದಕ್ಕೂ ಹೆಚ್ಚುವರಿಯಾಗಿ ಶುಲ್ಕ ಪಡೆಯಲಾಗುತ್ತಿದೆ ಎಂದು ಕೆಲವರು ಬೇಸರ ವ್ಯಕ್ತಪಡಿಸಿದರು. ರಿಕ್ಲೇನರ್ ಚೇರ್‌ನಲ್ಲಿ ಕುಳಿತುಕೊಳ್ಳಬೇಕಾದರೆ ಪ್ರತಿ ತಾಸಿಗೆ ₹ 100 ಕೊಡಬೇಕು. ಸಮುದ್ರಕ್ಕೆ ಇಳಿದು ವಾಪಸ್ ಬಂದ ಮೇಲೆ ಸಿಹಿನೀರಿನಲ್ಲಿ ಸ್ನಾನ ಮಾಡಲೇಬೇಕಲ್ಲವೇ? ಅದಕ್ಕೂ ಹಣ ಕೊಡಬೇಕು. ಇದು ಸ್ವಲ್ಪ ದುಬಾರಿಯಾಯಿತು ಎಂದು ಆಂಧ್ರಪ್ರದೇಶದಿಂದ ಬಂದಿದ್ದ ದಂಪತಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರವೇಶ ನಿರ್ಬಂಧ ಮಾಡುವ ಮೊದಲು ಬ್ಲೂ ಫ್ಲ್ಯಾಗ್‌ ಬೀಚ್‌ಗೆ ಯಾರ್ಯಾರೋ ಬರುತ್ತಿದ್ದರು. ಅವರು ಏನು ಮಾಡಿದರೂ ಸುಮ್ಮನಿರಬೇಕಾಗುತ್ತಿತ್ತು. ಈಗ ಎಲ್ಲವೂ ವ್ಯವಸ್ಥಿತವಾಗಿದೆ. ಒಳ್ಳೆಯ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಲು ನಮಗೂ ಖುಷಿಯಾಗುತ್ತದೆ ಎಂದು ಲೈಫ್ ಗಾರ್ಡ್‌ ಸೂರಜ್ ಮತ್ತು ಲವಿನ್ ಹೇಳಿದರು.

ತಣ್ಣೀರುಬಾವಿ ಬ್ಲೂ ಫ್ಲ್ಯಾಗ್‌ ಬೀಚ್ –ಪ್ರಜಾವಾಣಿ ಚಿತ್ರ
ತಣ್ಣೀರುಬಾವಿ ಬ್ಲೂ ಫ್ಲ್ಯಾಗ್‌ ಬೀಚ್ –ಪ್ರಜಾವಾಣಿ ಚಿತ್ರ

ಮೊದಲ ಬಾರಿ ಸಮುದ್ರ ನೋಡಲು ಮಕ್ಕಳೊಂದಿಗೆ ಬಂದಿದ್ದೇನೆ. ಇಲ್ಲಿಯ ವ್ಯವಸ್ಥೆಗಳನ್ನು ಕಂಡು ಖುಷಿಯಾಗಿದೆ. ದೊಡ್ಡವರಿಗೆ ₹ 20 ಪ್ರವೇಶ ದರವಿದೆ. ಇಷ್ಟು ಚೆನ್ನಾಗಿರುವ ಸ್ಥಳದಲ್ಲಿ ಎಷ್ಟು ಹೊತ್ತು ಬೇಕಾದರೂ ಕಳೆಯಲು ಅಷ್ಟು ಮೊತ್ತ ನೀಡುವುದು ದುಬಾರಿಯೇನಲ್ಲ.

–ರಫೀಕ್ ಮೈಸೂರಿನ ರಾಜೀವ ನಗರ ನಿವಾಸಿ

ಬೀಚ್ ಅಭಿವೃದ್ಧಿ ಆಗಿರುವುದು ಕಂಡು ಖುಷಿಯಾಗಿದೆ. ಒಳಗೆ ಹೋಗಲು ದರ ನಿಗದಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳೀಯರಿಗೆ ಇದು ಬಾಧಕವಲ್ಲ ಎಂದು ಯಾರೋ ಹೇಳಿದ್ದಾರೆ. ನಾನಿನ್ನೂ ಒಳಗಿನ ಸೌಲಭ್ಯಗಳನ್ನು ನೋಡಿಲ್ಲ.

-ಗಿಲ್ಬರ್ಟ್ ಡಿಮೆಲ್ಲೊ ಸ್ಥಳೀಯ ನಿವಾಸಿ

ಅಂಗವಿಕಲರಿಗೆ ಅವಕಾಶ ಸಮುದ್ರದ ನೀರಿಗೆ ಇಳಿಯಬೇಕೆಂಬ ಬಯಕೆ ಇರುವ ಅಂಗವಿಕಲರಿಗಾಗಿ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ಆ್ಯಂಫಿಬಿಯಸ್‌ ವ್ಹೀಲ್ ಚೇರ್‌  ವ್ಯವಸ್ಥೆ ಮಾಡಲಾಗಿದೆ. ವಿಶಿಷ್ಟವಾಗಿ ವಿನ್ಯಾಸಗೊಳಿಸಿರುವ ಚೇರ್‌ನಲ್ಲಿ ಅವರನ್ನು ಕರೆದುಕೊಂಡು ಹೋಗಲಾಗುತ್ತದೆ. ಲೈಫ್‌ ಗಾರ್ಡ್‌ಗಳು ಅವರ ಜೊತೆ ಇರುತ್ತಾರೆ. ಸಮುದ್ರದ ನೀರಿಗೆ ಇಳಿದು ಉಪ್ಪುನೀರಿನಲ್ಲಿ ಸ್ನಾನ ಮಾಡುವ ಸ್ವಾದವನ್ನು ಅವರ ಅನುಭವಕ್ಕೆ ಬರುವಂತೆ ಮಾಡಲಾಗುತ್ತದೆ. ಸ್ನಾನದ ಕೊಠಡಿಯಲ್ಲಿ ಗಾಬರಿಯಾದರೆ ಪ್ಯಾನಿಕ್ ಬಟನ್ ವ್ಯವಸ್ಥೆಯನ್ನೂ ಮಾಡಲಾಗಿದೆ.  ಪ್ರವಾಸಿಗರಿಗೆ ಮುದ ನೀಡಲು ಮತ್ತು ಸಮುದ್ರದ ಸೌಂದರ್ಯವನ್ನು ಸವಿಯಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ನಮ್ಮ ವ್ಯಾಪ್ತಿಯನ್ನು ದಾಟಿ ಆಚೆ ಕಡೆಯಿಂದ ಒಳಗೆ ಬರುವವರನ್ನು ತಡೆಯುವುದು ಸದ್ಯದ ಸವಾಲು. ಇದಕ್ಕೆ ಪರಿಹಾರ ಕಾಣುವಂತೆ ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ ಎಂದು ಬಿವಿಜಿ ಗ್ರೂಪ್‌ನ ಬೀಚ್ ಮ್ಯಾನೇಜರ್ ಸುಜಿತ್‌ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT