ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಂಕಣಿ ಸಾಹಿತ್ಯ ಮಥನಕ್ಕೆ ‘ಬೊಲ್ಕಾಂವ್’

ಅನೌಪಚಾರಿಕ ಹರಟೆಯ ಮೂಲಕ ಕೃತಿ, ಕೃತಿಕಾರನ ಪರಿಚಯ, ಸಂವಾದಕ್ಕೊಂದು ವೇದಿಕೆ
Published : 11 ಸೆಪ್ಟೆಂಬರ್ 2024, 6:19 IST
Last Updated : 11 ಸೆಪ್ಟೆಂಬರ್ 2024, 6:19 IST
ಫಾಲೋ ಮಾಡಿ
Comments

ಮಂಗಳೂರು: ಕೊಂಕಣಿ ಸಾಹಿತ್ಯದ ಚರ್ಚೆ ಮತ್ತು ಸಾಹಿತಿಗಳ ಪರಿಚಯಕ್ಕೆ ನಗರದ ಸೇಂಟ್ ಅಲೋಶಿಯಸ್ ಕಾಲೇಜು ಆವರಣದಲ್ಲಿ ‘ಬೊಲ್ಕಾಂವ್‌’ ಹೆಸರಿನ ಹೊಸ ಚಾವಡಿ ಸಿದ್ಧವಾಗಿದ್ದು, ಸಾಹಿತ್ಯ ಸರಣಿ ತೆರೆದುಕೊಳ್ಳಲಿದೆ.

ನಾಲ್ಕು ದಶಕಗಳಿಂದ ನಗರದಲ್ಲಿ ಕಾರ್ಯಾಚರಿಸುತ್ತಿರುವ ‘ಕೊಂಕಣಿ ಸಂಸ್ಥೆ’ಯ ಕೆಲವರು ಇದನ್ನು ಆರಂಭಿಸಿದ್ದಾರೆ. ತಿಂಗಳಿಗೆ ಕನಿಷ್ಠ ಒಂದು ಸಾಹಿತ್ಯ ಕಾರ್ಯಕ್ರಮಕ್ಕೆ ಇದು ಸಾಕ್ಷಿಯಾಗಲಿದೆ. ಮೆಲ್ವಿನ್ ಪಿಂಟೊ ನೀರುಡೆ ಅವರ ‘ಪೊಯ್ಣ್‌’ (ಪಯಣ) ಕಥಾಸಂಕಲನದ ನಾಲ್ಕು ಕಥೆಗಳ ಕೆಲವು ಭಾಗಗಳನ್ನು ಓದಿ ಚರ್ಚಿಸುವ ಮೂಲಕ ಇದೇ ಏಳರಂದು ಯೋಜನೆ ಆರಂಭಗೊಳ್ಳಲಿದೆ. ‘ಸಣ್ಣ ಕಥೆ ಮತ್ತು ನಾನು’ ಎಂಬುದು ಮೊದಲ ಕಾರ್ಯಕ್ರಮದ ಶೀರ್ಷಿಕೆ.

‘ಬೊಲ್ಕಾಂವ್ ಎಂದರೆ ಬಾಲ್ಕನಿ. ಕೊಂಕಣಿ ಸಂಸ್ಥೆಯ ಒಂದು ಭಾಗದಲ್ಲಿ ಇಂಥದೊಂದು ವ್ಯವಸ್ಥೆ ಇದೆ. ಅದನ್ನು ಬಳಸಿಕೊಂಡು ಸಾಹಿತ್ಯದ ಮಥನ ನಡೆಯಲಿದೆ. ಕೆಲವು ವರ್ಷಗಳ ಆಲೋಚನೆ ಈಗ ಯೋಜನೆಯಾಗಿ ಕಾರ್ಯಗತೊಂಡಿದೆ’ ಎಂದು ತಂಡದ ಟೈಟಸ್ ನೊರೋನ್ಹ ತಿಳಿಸಿದರು.

‘ಇಲ್ಲಿ ಸಾಂಪ್ರದಾಯಿಕ ಶೈಲಿಯ ಕಾರ್ಯಕ್ರಮಗಳು ನಡೆಯುವುದಿಲ್ಲ. ಅನೌಪಚಾರಿಕವಾಗಿ ಎಲ್ಲರೂ ಸೇರುತ್ತಾರೆ. ಆ ದಿನಕ್ಕೆ ನಿಗದಿಯಾದ ಸಾಹಿತಿ ತನ್ನ ಕೃತಿಯ ಬಗ್ಗೆ ಮತ್ತು ಸಾಹಿತ್ಯ ಯಾತ್ರೆಯ ಬಗ್ಗೆ ವಿವರಿಸುತ್ತಾರೆ. ಆನಂತರ ಚರ್ಚೆ ನಡೆಯುತ್ತದೆ. ಕವಿತೆ, ಸಣ್ಣಕತೆ, ಕಾದಂಬರಿ, ಪ್ರಬಂಧ, ಅನುವಾದ, ನಾಟಕ ಮುಂತಾಗಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದವರಿಗೆ ಕೃತಿ ಮತ್ತು ಅನುಭವ ಪ್ರಸ್ತುತಪಡಿಸಲು ಇಲ್ಲಿ ಮುಕ್ತ ಅವಕಾಶ ಸಿಗಲಿದೆ’ ಎಂದು ಬೊಲ್ಕಾಂವ್ ತಂಡದ ಪ್ರಮುಖ ಎಚ್‌.ಎಂ.ಪೆರ್ನಾಲ್‌ ವಿವರಿಸಿದರು. 

‘ಪ್ರತಿ ಕಾರ್ಯಕ್ರಮ ಒಂದು ತಾಸು ಇರುತ್ತದೆ. ಅರ್ಧತಾಸು ಪ್ರಸ್ತುತಿ, ಅರ್ಧ ತಾಸು ಚರ್ಚೆ ನಡೆಯಲಿದೆ. ಕೊಂಕಣಿಗೆ ಸಂಬಂಧಿಸಿದ ಸಿಲೆಬ್ರೆಟಿಗಳು ನಗರಕ್ಕೆ ಬಂದರೆ ಅವರನ್ನು ಕರೆದು ಮಾತನಾಡಿಸುವ ಯೋಜನೆಯೂ ಇದೆ’ ಎಂದು ಅವರು ತಿಳಿಸಿದರು.

ಕೊಂಕಣಿ ಸಾಹಿತಿಗಳಿಗೆ ನೇರವಾಗಿ ಅವರ ಕೃತಿಗಳನ್ನು ಪ್ರಸ್ತುತಪಡಿಸಲು ಅವಕಾಶ ಸಿಗುವುದು ತೀರಾ ಕಡಿಮೆ. ಈ ಕೊರತೆ ನೀಗಿಸುವ ಬಗ್ಗೆ ವರ್ಷಗಳಿಂದ ಚರ್ಚಿಸುತ್ತಿದ್ದೆವು. ಅದರ ಪರಿಣಾಮ ‘ಬೊಲ್ಕಾಂವ್‌’ ಸಿದ್ಧಗೊಂಡಿದೆ.
ಎಚ್‌.ಎಂ.ಪರ್ನಾಲ್‌ ಸಾಹಿತಿ
ಕೊಂಕಣಿ ಸಾಹಿತ್ಯ ಕೃತಿಗಳಿಗಷ್ಟೇ ಬೊಲ್ಕಾಂವ್ ಸೀಮಿತ. ಚರ್ಚೆಯ ನಡುವೆ ಇತರ ಭಾಷೆಗಳ ಪ್ರಸ್ತಾವ ಆದರೂ ಆಗಬಹುದು. ಅದನ್ನು ಹೊರತುಪಡಿಸಿದರೆ ಇದು ಎಕ್ಸ್‌ಕ್ಲೂಸಿವ್ ಆಗಿ ಕೊಂಕಣಿಗೆ ಸಂಬಂಧಿಸಿದ ಸರಣಿ ಆಗಲಿದೆ.
ಟೈಟಸ್ ನೊರೋನ್ಹ ಸಂಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT