ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯೆ ನೀಡುವುದು ನಿಜವಾದ ಸೇವೆ: ಸ್ವಾಮಿ ಜಿತಕಾಮಾನಂದಜಿ

‘ಮ್ಯಾನ್‌ ಅಮಂಗ್‌ಸ್ಟ್‌ ಮೆನ್‌– ನಿಟ್ಟೆ ವಿನಯ ಹೆಗ್ಡೆ’ ಕೃತಿ ಬಿಡುಗಡೆ
Last Updated 14 ಏಪ್ರಿಲ್ 2019, 12:34 IST
ಅಕ್ಷರ ಗಾತ್ರ

ಮಂಗಳೂರು: ‘ಶಿಕ್ಷಣ ಸಂಸ್ಥೆಗಳಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ಸಂಸ್ಥೆ ನಿರ್ಮಿಸಿ ಅಲ್ಲಿನ ಯುವಜನತೆಗೆ ವಿದ್ಯಾಭ್ಯಾಸ ನೀಡುವುದು ನಿಜವಾದ ಸೇವೆ’ ಎಂದು ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜಿ ಹೇಳಿದರು.

ನಗರದ ತಾಜ್‌ ಗೇಟ್‌ವೇ ಹೋಟೆಲ್‌ನ ಸಭಾಂಗಣದಲ್ಲಿ ಭಾನುವಾರ ಎಂ. ಶಾಂತಾರಾಂ ಶೆಟ್ಟಿ ರಚಿಸಿದ ‘ಮ್ಯಾನ್‌ ಅಮಂಗ್‌ಸ್ಟ್‌ ಮೆನ್‌– ನಿಟ್ಟೆ ವಿನಯ ಹೆಗ್ಡೆ’ ಜೀವನ ಚರಿತ್ರೆ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಶಿಕ್ಷಣಕ್ಕಾಗಿ ನಗರಗಳಿಗೆ ಬರುವ ಗ್ರಾಮೀಣ ಪ್ರದೇಶದ ಯುವಕರು, ಬಳಿಕ ಗ್ರಾಮವನ್ನು ಮರೆತು ಬಿಡುತ್ತಾರೆ. ಆದರೆ ವಿನಯ ಹೆಗ್ಡೆ ತಮ್ಮ ಗ್ರಾಮದ ಕುರಿತು ಅಪಾರ ಒಲವು ಇಟ್ಟುಕೊಂಡವರು. ಬೆಳೆದು ಬಂದ ಗ್ರಾಮದ ಕುರಿತು ಪ್ರೀತಿ ಇಟ್ಟುಕೊಳ್ಳುವುದು ಮುಖ್ಯ’ ಎಂದರು.

‘ವಿನಯ ಹೆಗ್ಡೆ ಅವರ ಜೀವನ ಚರಿತ್ರೆಯನ್ನು ಮುಖ್ಯವಾಗಿ ಯುವಕರು ಓದಬೇಕು. ಯುವ ಮನಸ್ಸುಗಳನ್ನು ಪ್ರೇರೇಪಿಸಲು ಸೂಕ್ತವಾದ ಕೃತಿ ಇದು. ಬೆಂಗಳೂರಿನಲ್ಲಿ ಬಿಎಸ್ಸಿ ಅಂತಿಮ ವರ್ಷದಲ್ಲಿ ರಸಾಯನ ವಿಜ್ಞಾನ ವಿಷಯದಲ್ಲಿ ಅನುತ್ತಿರ್ಣಗೊಂಡ ವಿನಯ ಹೆಗ್ಡೆ, ಬಳಿಕ ಮಂಗಳೂರಿಗೆ ಬಂದು ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿ ಈ ಮಟ್ಟಕ್ಕೆ ಬೆಳೆದಿದ್ದಾರೆ. ಬಹುಶಃ ಇದು ಭಗವಂತನೇ ನೀಡಿದ ತಿರುವು ಇರಬಹುದು’ ಎಂದು ಹೇಳಿದರು.

ವಿನಯ ಹೆಗ್ಡೆ ಮಾತನಾಡಿ, ‘ಆರಂಭದ ದಿನಗಳಲ್ಲಿ ನನ್ನನ್ನು ನೋಡಿ, ಈತ ಏನು ಮಾಡಬಲ್ಲ ಎಂದು ಭಾವಿಸಿದವರಿದ್ದಾರೆ. ನನ್ನ ಸಾಧನೆಗಳ ಹಿಂದೆ ಒಂದು ತಂಡದ ಸಹಕಾರವಿದೆ. ಇದುವರೆಗಿನ ಎಲ್ಲಾ ಸಾಧನೆಗಳು ಕೇವಲ ನನ್ನದಷ್ಟೇ ಅಲ್ಲ. ನಾನು ಅದರ ಒಂದು ಭಾಗ ಆಗಿರಬಹುದು. ಆದರೆ ನನ್ನ ಜತೆಗೆ ಟಿ.ಆರ್. ಶೆಣೈ, ಗುರುಪ್ರಸಾದ್‌, ಶಾಂತಾರಾಂ ಶೆಟ್ಟಿ ಮುಂತಾದವರು ಇದ್ದುದರಿಂದಲೇ ಇದೆಲ್ಲಾ ಸಾದ್ಯವಾಗಿದೆ. ಹಲವು ರಾಜಕೀಯ ನಾಯಕರೂ ನನಗೆ ಸಹಕಾರ ನೀಡಿದ್ದಾರೆ. ದಿವಂಗತ ರಾಮಕೃಷ್ಣ ಹೆಗಡೆ ಅವರ ಸಹಕಾರ ಇರದಿದ್ದರೆ ನಾನು ಈ ಮಟ್ಟಕ್ಕೆ ಬೆಳೆಯಲು ಸಾದ್ಯವಾಗುತ್ತಿರಲಿಲ್ಲ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಎಂ.ಶಾಂತಾರಾಂ ಶೆಟ್ಟಿ, ‘ವಿನಯ ಹಗ್ಡೆ ಅವರಂಥ ಪುತ್ರನನ್ನು ನೀಡಿದ್ದಕ್ಕಾಗಿ ಈ ಜೀವನ ಚರಿತ್ರೆಯ ಕೃತಿಯನ್ನು ಅವರ ತಂದೆ ಕೆ.ಎಸ್. ಹೆಗ್ಡೆ ಹಾಗೂ ತಾಯಿ ಮೀನಾಕ್ಷಿ ಹೆಗ್ಡೆ ಅವರಿಗೆ ಅರ್ಪಿಸಿದ್ದೇನೆ. 128 ಪುಟಗಳ ಈ ಕೃತಿ ವಿನಯ ಹೆಗ್ಡೆ ಬದುಕಿನ ಹೆಜ್ಜೆಗಳನ್ನು ಹಂತ ಹಂತವಾಗಿ ವಿವರಿಸುತ್ತದೆ. ಕೃತಿ ಅಮೆಜಾನ್‌ ಆ್ಯಪ್‌ನಲ್ಲಿಯೂ ಲಭ್ಯವಿದೆ’ ಎಂದರು.

ಜೆಸ್ವಿಟ್‌ ಸಂಸ್ಥೆಯ ಡೆನ್ಝಿಲ್‌ ಲೋಬೊ ಮಾತನಾಡಿದರು.

ಇದೇ ಸಂದರ್ಭ ಡಾ.ಎಂ. ಶಾಂತಾರಾಂ ಶೆಟ್ಟಿ, ವಿನಯ ಹೆಗ್ಡೆ ಅವರ ಜನ್ಮದಿನವನ್ನು ಕೇಕ್‌ ಕತ್ತರಿಸಿ ಆಚರಿಸಲಾಯಿತು.

ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಎನ್‌. ಆರ್. ಶೆಟ್ಟಿ, ದಿನೇಶ್, ಸುಜಾತಾ ಹೆಗ್ಡೆ, ವಸಂತಿ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT