ಶನಿವಾರ, ಸೆಪ್ಟೆಂಬರ್ 18, 2021
26 °C

ಹೊರರಾಜ್ಯದಿಂದ ಮೇಸ್ತ್ರಿಗಳನ್ನು ವಿಮಾನದಲ್ಲಿ ಕರೆಸಿಕೊಳ್ಳುತ್ತಿರುವ ಉದ್ಯಮಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಲಾಕ್‌ಡೌನ್ ಬಳಿಕ ನಿರ್ಮಾಣ ಕ್ಷೇತ್ರದಲ್ಲಿ ಪರಿಣಿತ ಕಾರ್ಮಿಕರ ಕೊರತೆ ಉಂಟಾಗಿದ್ದು, ನಗರದ ಮೆರಿಯನ್ ಪ್ರೊಜೆಕ್ಟ್ಸ್‌ ಸಂಸ್ಥೆಯು ಕೋಲ್ಕೊತ್ತಾದಿಂದ ಐವರು ಮೇಸ್ತ್ರಿಗಳನ್ನು ವಿಮಾನದ ಮೂಲಕ ಕರೆಸಿಕೊಂಡಿದೆ. ಕ್ವಾರಂಟೈನ್‌ ವೆಚ್ಚವನ್ನೂ ಕಂಪನಿಯೇ ಭರಿಸುತ್ತಿದೆ.

ಕ್ರೆಡೈ ಅಧ್ಯಕ್ಷ ನವೀನ್ ಕಾರ್ಡೋಜಾ ಅವರು ತಮ್ಮ ಮೆರಿಯನ್ ಪ್ರೊಜೆಕ್ಸ್ಟ್‌ ಸಂಸ್ಥೆಯ ನಿರ್ಮಾಣ ಕಾಮಗಾರಿಗಾಗಿ ಕೋಲ್ಕೊತ್ತಾದಿಂದ ಐವರು ಪರಿಣಿತ ಮೇಸ್ತ್ರಿಗಳನ್ನು ವಿಮಾನದ ಮೂಲಕ ಕರೆಸಿಕೊಂಡಿದ್ದಾರೆ. ಕೋಲ್ಕೊತ್ತಾದಿಂದ ಬೆಂಗಳೂರಿಗೆ ವಿಮಾನ ಹಾಗೂ ಅಲ್ಲಿಂದ ಪ್ರತ್ಯೇಕ ವಾಹನದ ಮೂಲಕ ನಗರಕ್ಕೆ ಕರೆಸಿಕೊಳ್ಳಲಾಗಿದೆ. 

‘ನಿರ್ಮಾಣ ಕ್ಷೇತ್ರದಲ್ಲಿ ಉತ್ತರ ಹಾಗೂ ಈಶಾನ್ಯ ಭಾರತದ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಅವರು ತಮ್ಮ ಊರಿಗೆ ತೆರಳಿದ್ದು, ವಾಪಸ್ ಬರಲು ಸೌಲಭ್ಯಗಳಿಲ್ಲ. ಅದಕ್ಕಾಗಿ ಮುಕ್ತಾಯ ಹಂತದಲ್ಲಿರುವ ಕಟ್ಟಡಗಳನ್ನು ಪೂರ್ಣಗೊಳಿಸಲು ವಿಮಾನದ ಮೂಲಕ ಕರೆಸಿಕೊಳ್ಳಲಾಗಿದೆ’ ಎಂದು ನವೀನ್ ಕಾರ್ಡೋಜಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ ನಾಲ್ಕೈದು ತಿಂಗಳಿನಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ಹೂಡಿಕೆ ಮೇಲಿನ ಬಡ್ಡಿ, ಇತರ ಖರ್ಚುಗಳು ಹೆಚ್ಚಾಗುತ್ತಿವೆ. ನಿಗದಿತ ಸಮಯಕ್ಕೆ ಕಟ್ಟಡ ಪೂರ್ಣಗೊಳಿಸದಿದ್ದರೂ ನಷ್ಟವೇ. ಖರೀದಿದಾರರಿಗೆ ಕೊಟ್ಟ ಮಾತನ್ನೂ ಉಳಿಸಿಕೊಳ್ಳಬೇಕಾಗಿದೆ’ ಎಂದು ವಿವರಿಸಿದರು.

‘ನಮ್ಮ ಸಂಸ್ಥೆಯಲ್ಲಿ ಸುಮಾರು 300 ಜನ ಕಾರ್ಮಿಕರಿದ್ದು, ಈಗ 170 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನೂ ಕನಿಷ್ಠ 70 ಮಂದಿ ಬೇಕು. ಊರಿಗೆ ತೆರಳಿದ್ದ ಕಾರ್ಮಿಕರೂ ವಾಪಸ್‌ ಬರಲು ಸಿದ್ಧರಾಗಿದ್ದಾರೆ. ಅಲ್ಲಿ ಕೆಲಸದ ಕೊರತೆ ಇದೆ. ಅದಕ್ಕಾಗಿ ಕೋಲ್ಕತ್ತಾದಿಂದ ಮಂಗಳೂರಿಗೆ ಬಾಡಿಗೆ ವಿಮಾನದ ಮೂಲಕ ಕಾರ್ಮಿಕರನ್ನು ಕರೆಸಿಕೊಳ್ಳಲು ಸಿದ್ಧತೆ ಮಾಡುತ್ತಿದ್ದೇವೆ’ ಎಂದರು.

‘ಒಬ್ಬರು ಕಾರ್ಮಿಕರಿಗೆ ಸುಮಾರು ₹7 ಸಾವಿರ ವೆಚ್ಚ ತಗುಲಬಹುದು. ಆದರೆ, ಮರಳಿನ ಕೊರತೆಯಿಂದಾಗಿ ನಿರ್ಮಾಣ ಕ್ಷೇತ್ರ ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಕಾಮಗಾರಿ ಸ್ಥಗಿತಗೊಂಡರೆ ಅದಕ್ಕಿಂತಲೂ ಹೆಚ್ಚು ನಷ್ಟವಾಗುವ ಸಾಧ್ಯತೆ ಇದೆ’ ಎಂದರು.

ಗಲ್ಫ್‌ ಕನ್ನಡಿಗರನ್ನು ಕರೆತರಲಿವೆ 13 ವಿಮಾನ

ಮಂಗಳೂರು: ವಂದೇ ಭಾರತ್‌ ಮಿಷನ್‌ ಅಡಿ ನಾಲ್ಕನೇ ಹಂತದ ಕಾರ್ಯಾಚರಣೆ ಆರಂಭವಾಗಿದ್ದು, ಇದೇ 16 ರಿಂದ 31 ರವರೆಗೆ ಒಟ್ಟು 13 ವಿಮಾನಗಳು ಗಲ್ಫ್‌ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ತವರಿಗೆ ಕರೆತರಲಿವೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಬಿಡುಗಡೆ ಮಾಡಿರುವ ವಿಮಾನಗಳ ಪಟ್ಟಿಯಲ್ಲಿ ಕೆಲವು ಬೆಂಗಳೂರಿಗೆ ಬರಲಿದ್ದು, ಇನ್ನು ಕೆಲ ವಿಮಾನಗಳು ಬೆಂಗಳೂರಿನ ಮೂಲಕ ಮಂಗಳೂರಿಗೆ ಹಾಗೂ ನೇರವಾಗಿ ಮಂಗಳೂರಿಗೆ ಬಂದಿಳಿಯಲಿವೆ.

***

ಕಾರ್ಮಿಕರ ಕೊರತೆ ಜೊತೆ ಮರಳಿನ ಕೊರತೆಯೂ ನಿರ್ಮಾಣ ಕ್ಷೇತ್ರಕ್ಕೆ ಹಿನ್ನಡೆ ಉಂಟು ಮಾಡಿದೆ. ಸರ್ಕಾರವು ಮರಳು ಸಿಗುವಂತೆ ಮಾಡಬೇಕಾಗಿದೆ

- ನವೀನ್ ಕಾರ್ಡೋಜಾ, ಬಿಲ್ಡರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು